ವಕ್ಫ್​ ಬೋರ್ಡ್​​ಗೆ ವಿವಾಹ ನೋಂದಣಿ ಅಧಿಕಾರ; ಸರ್ಕಾರದ ಅದೇಶಕ್ಕೆ ಹೈಕೋರ್ಟ್‌ ತಡೆ

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಮುಸ್ಲಿಮರ ವಿವಾಹ ನೋಂದಣಿ ಪ್ರಮಾಣಪತ್ರ ವಿತರಣೆಗೆ ಅವಕಾಶ ಮಾಡಿಕೊಟ್ಟು ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.;

Update: 2024-11-22 04:47 GMT
ಕರ್ನಾಟಕ ಹೈಕೋರ್ಟ್‌
Click the Play button to listen to article

ಮುಸ್ಲಿಮರಿಗೆ ವಿವಾಹ ನೋಂದಣಿ  ಪ್ರಮಾಣಪತ್ರ ವಿತರಣೆ ಮಾಡಬಹುದು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ರಾಜ್ಯ ಸರ್ಕಾರ ನೀಡಿದ ಅಧಿಕಾರಕ್ಕೆ ಹೈಕೋರ್ಟ್‌ ಬ್ರೇಕ್‌ ನೀಡಿದೆ. ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದು ಇನ್ನು ಮುಂಧೆ ಪ್ರಮಾಣ ಪತ್ರವನ್ನು ನೀಡುವಂತಿಲ್ಲ ಎಂದು ಹೇಳಿದೆ.

ಬೆಂಗಳೂರಿನ ನಿವಾಸಿ  ಆಲಂ ಪಾಷಾ ಎಂಬವರು ಈ ಬಗ್ಗೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾ.ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ಸರ್ಕಾರದ ಆದೇಶಕ್ಕೆ ತಡೆ ಕೊಟ್ಟಿದೆ. 

2023ರಲ್ಲಿ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿತ್ತು. ಮುಸ್ಲಿಮರ ವಿವಾಹ ನೋಂದಣಿ ಪ್ರಮಾಣಪತ್ರ ವಿತರಣೆ ಅಧಿಕಾರವನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ನೀಡಿ ರಾಜ್ಯ ಸರ್ಕಾರ ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಇಲಾಖೆ  ಹೊರಡಿಸಿದ್ದ ಅದೇಶಕ್ಕೆ ಜ.7ರವರೆಗೆ ತಡೆ ನೀಡಲಾಗುವುದು ಎಂದು ಮಧ್ಯಂತರ ಆದೇಶ ಹೊರಡಿಸಿತು.

ನ್ಯಾಯಾಲಯದ ಮುಂದಿನ ಆದೇಶ ನೀಡುವವರೆಗೆ ಸರ್ಕಾರ ತನ್ನ ಆದೇಶ ಅಮಾನತ್ತಿನಲ್ಲಿಡಬೇಕು. ವಕ್ಫ್ ಮಂಡಳಿ ಯಾವುದೇ ವಿವಾಹ ನೋಂದಣಿ ಪ್ರಮಾಣಪತ್ರಗಳನ್ನು ವಿತರಿಸಬಾರದು. ಯಾವುದೇ ಅಧಿಕಾರ ಇಲ್ಲದೆ ವಕ್ಫ್ ಮಂಡಳಿ ಆ ರೀತಿ ಮದುವೆ ಪ್ರಮಾಣಪತ್ರ ವಿತರಣೆ ಮಾಡುವುದನ್ನು ಒಪ್ಪಲಾಗದು ಎಂದು ಹೇಳಿರುವ ನ್ಯಾಯಾಲಯ, 2025ರ ಜ.7ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಮಾಡಿದೆ.

ಕಳೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ”ರಾಜ್ಯ ಸರ್ಕಾರದ ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಇಲಾಖೆ 2023ರ ಸೆಪ್ಟೆಂಬರ್​ 30ರಂದು ಆದೇಶ ಹೊರಡಿಸಿದ್ದು, ಅದರಂತೆ ಮುಸ್ಲಿಂ ಸಮುದಾಯದವರ ವಿವಾಹ ನೋಂದಣಿ ಪ್ರಮಾಣಪತ್ರಗಳನ್ನು ವಿತರಿಸುವ ಅಧಿಕಾರವನ್ನು ವಕ್ಫ್ ಮಂಡಳಿಗೆ ನೀಡಲಾಗಿದೆ. ಇದು ವಕ್ಫ್ ಕಾಯಿದೆ-1995ರ ನಿಯಮಗಳಿಗೆ ವಿರುದ್ಧವಾಗಿದೆ. ಹಾಗಾಗಿ, ಸರ್ಕಾರದ ಆದೇಶ ರದ್ದುಗೊಳಿಸಿ ಮೊದಲಿದ್ದ ವ್ಯವಸ್ಥೆಯನ್ನೇ ಮುಂದುವರೆಸಲು ನಿರ್ದೇಶನ ನೀಡಬೇಕು” ಎಂದು ಕೋರಿದರು.

Tags:    

Similar News