ದೇವರಾಜ ಅರಸ್ ಟ್ರಕ್ ಟರ್ಮಿನಲ್ ಹಗರಣ | ಶಂಕರಪ್ಪ ವಿರುದ್ಧದ ದೋಷಾರೋಪ ಪಟ್ಟಿಗೆ ಹೈಕೋರ್ಟ್ ತಡೆ
ದೇವರಾಜ ಅರಸು ಟ್ರಕ್ ಟರ್ಮಿನಲ್ ಅಡಿ ವಿವಿಧ ಸ್ಥಳಗಳಲ್ಲಿ 2021 ರಿಂದ 2022ರ ಅವಧಿಯಲ್ಲಿ ನಡೆಸಿದ್ದ ಕಾಮಗಾರಿಗಳಿಗೆ ನಕಲಿ ಬಿಲ್ ಸೃಷ್ಟಿಸಿ ಹಣ ದುರ್ಬಳಕೆ ಮಾಡಿಕೊಂಡಿರುವ ಕುರಿತು ಟರ್ಮಿನಲ್ ವ್ಯವಸ್ಥಾಪಕ ನಿರ್ದೇಶಕರು ದೂರು ನೀಡಿದ್ದರು.
ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣದ ಮೊದಲ ಆರೋಪಿಯಾಗಿರುವ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಎಸ್. ಶಂಕರಪ್ಪ ವಿರುದ್ಧದ ಆರೋಪಪಟ್ಟಿಗೆ ಹೈಕೋರ್ಟ್ ಸೋಮವಾರ ತಡೆ ನೀಡಿದೆ.
ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆ ರದ್ದುಗೊಳಿಸುವಂತೆ ಕೋರಿ ಎಸ್. ಶಂಕರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಾದವೇನು?
ಅರ್ಜಿದಾರರ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು. ಪ್ರಕರಣದಲ್ಲಿಅಪರಿಚಿತ ವ್ಯಕ್ತಿಗಳ ವಿರುದ್ಧವೂ ದೂರು ದಾಖಲಾಗಿದೆ. ಪ್ರಕರಣದಲ್ಲಿ ಸರ್ಕಾರಿ ನೌಕರರು ಇರುವುದರಿಂದ ಭ್ರಷ್ಟಾಚಾರ ಕಾಯಿದೆ ಸೆಕ್ಷನ್ 17ಎ ಅಡಿ ಅನುಮತಿ ಪಡೆಯದೇ ತನಿಖೆ ನಡೆಸಲು ಅವಕಾಶವಿಲ್ಲ. ಪ್ರಕರಣದ ಆರೋಪಿಗಳು ತಮ್ಮ ಕಕ್ಷಿದಾರರಿಗೆ ಅಪರಿಚಿತರಾಗಿದ್ದು, ಆದರೂ 9 ತಿಂಗಳಿಂದ ತನಿಖೆ ನಡೆಸಲಾಗಿದೆ. ಈಗ ಅರ್ಜಿದಾರರ ವಿರುದ್ಧ ತನಿಖೆಗೆ ಸೆಕ್ಷನ್ 17ಎ ಅಡಿ ಮನವಿ ಮಾಡಲಾಗಿದೆ. ಹಾಗಾಗಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯ ವಿಚಾರಣೆಗೆ ಅನುಮತಿ ನೀಡಬಾರದು ಎಂದು ನ್ಯಾಯಪೀಠವನ್ನು ಕೋರಿದರು.
ಇದಕ್ಕೆ ಸ್ಪಂದಿಸಿದ ನ್ಯಾಯಪೀಠ, ಈ ಹಂತದಲ್ಲಿ ಅರ್ಜಿದಾರರ ವಾದ ಪರಿಗಣಿಸುವ ಅಗತ್ಯವಿದೆ. ಮುಂದಿನ ವಿಚಾರಣೆಯವರೆಗೂ ಅರ್ಜಿದಾರರ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಲಾಗುತ್ತಿದೆ ಎಂದು ಆದೇಶಿಸಿ, ವಿಚಾರಣೆಯನ್ನು 2025ರ ಜನವರಿ 16ಕ್ಕೆ ಮುಂದೂಡಿತು. ಅಲ್ಲದೇ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಹಾಗೂ ದೂರುದಾರರಿಗೆ ತುರ್ತು ನೋಟಿಸ್ ಜಾರಿ ಮಾಡಿತು.
ಏನಿದು ಟ್ರಕ್ ಟರ್ಮಿನಲ್ ಹಗರಣ?
ದೇವರಾಜ ಅರಸು ಟ್ರಕ್ ಟರ್ಮಿನಲ್ ಅಡಿ ವಿವಿಧ ಸ್ಥಳಗಳಲ್ಲಿ 2021 ರಿಂದ 2022ರ ಅವಧಿಯಲ್ಲಿ ನಡೆಸಿದ್ದ 668 ಕಾಮಗಾರಿಗಳ ಪೈಕಿ 665 ಕಾಮಗಾರಿಗಳಿಗೆ ನಕಲಿ ಬಿಲ್ ಸೃಷ್ಟಿಸಿ ಹಣ ದುರ್ಬಳಕೆ ಮಾಡಿಕೊಂಡಿರುವ ಕುರಿತು ಟರ್ಮಿನಲ್ ವ್ಯವಸ್ಥಾಪಕ ನಿರ್ದೇಶಕರು ದೂರು ನೀಡಿದ್ದರು.
ಅಕ್ರಮದಲ್ಲಿ ಶಾಮೀಲಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿ 2023ರ ಸೆಪ್ಟೆಂಬರ್‌ನಲ್ಲಿ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದರು. ಈ ದೂರನ್ನು ಸರ್ಕಾರ ಸಿಐಡಿ ತನಿಖೆಗೆ ವರ್ಗಾವಣೆ ಮಾಡಿತ್ತು.
ಪ್ರಕರಣದಲ್ಲಿ ಮೂರು ಗುತ್ತಿಗೆ ಕಂಪನಿಗಳು ಟರ್ಮಿನಲ್‌ಗೆ 665 ನಕಲಿ ಕಾಮಗಾರಿಗಳ ಬಿಲ್ ಸೃಷ್ಟಿಸಿ 39.25 ಕೋಟಿ ರೂ. ಮಂಜೂರು ಮಾಡಿಸಿಕೊಂಡಿದ್ದನ್ನು ಸಿಐಡಿ ಪತ್ತೆ ಹಚ್ಚಿತ್ತು. ಇಡೀ ಅಕ್ರಮಕ್ಕೆ ಟರ್ಮಿನಲ್ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಸ್. ಶಂಕರಪ್ಪ ಹಾಗೂ ಅಧ್ಯಕ್ಷರಾಗಿದ್ದ ಡಿ.ಎಸ್. ವೀರಯ್ಯ ಕಾರಣ ಎಂದು ಹೇಳಿತ್ತು.
ಪ್ರಕರಣದ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಕಳೆದ ಡಿ 4 ರಂದು ಹೈಕೋರ್ಟ್ ಡಿ.ಎಸ್. ವೀರಯ್ಯ ವಿರುದ್ಧದ ತನಿಖೆ ಹಾಗೂ ದೋಷಾರೋಪ ಪಟ್ಟಿಗೆ ತಡೆನೀಡಿತ್ತು. ಈಗ ಎಸ್.ಶಂಕರಪ್ಪ ಅವರ ವಿರುದ್ಧದ ದೋಷಾರೋಪ ಪಟ್ಟಿ ವಿಚಾರಣೆಗೆ ತಡೆ ನೀಡಿದೆ.