ಶಾಸಕ ಎಸ್‌ಆರ್ ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಆರೋಪಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.;
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಆರೋಪಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಸಂಬಂಧ ಪ್ರಕರಣದ ಮೊದಲನೇ ಆರೋಪಿಯಾದ ಹೆಸರಘಟ್ಟ ಹೋಬಳಿಯ ಮುತ್ತುಗದಹಳ್ಳಿಯ ಎಂ.ಎನ್.ಗೋಪಾಲಕೃಷ್ಣ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿ ಆದೇಶಿಸಿದೆ.
ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ನ್ಯಾಯಪೀಠ, ಈ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಯು ಪೆನ್ ಡ್ರೈವ್, ಪತ್ರ ಸೇರಿದಂತೆ ಅಮೂಲ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಮೇಲ್ನೋಟಕ್ಕೆ ಆರೋಪಿಯ ವಿರುದ್ಧದ ಆಪಾದನೆಗಳಲ್ಲಿ ಸಾಕಷ್ಟು ಸಾಕ್ಷ್ಯಗಳಿವೆ. ವಿಸ್ಕೃತ ತನಿಖೆಯಿಂದ ಮಾತ್ರವೇ ಗೋಪಾಲಕೃಷ್ಣ ವಿರುದ್ಧ ದೂರುದಾರ ವಿಶ್ವನಾಥ್ ಮಾಡಿರುವ ಆರೋಪಗಳ ಸತ್ಯಾಂಶ ಹೊರಬರಲು ಸಾಧ್ಯ. ಹಾಗಾಗಿ, ಈ ಹಂತದಲ್ಲಿ ಗೋಪಾಲಕೃಷ್ಣ ವಿರುದ್ಧದ ನ್ಯಾಯಿಕ ಪ್ರಕ್ರಿಯೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ' ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಹಿಂದೆ ನ್ಯಾಯಾಲಯ ತಾಂತ್ರಿಕ ಕಾರಣಗಳಿಂದಾಗಿ ಪ್ರಕರಣವನ್ನು ರದ್ದುಗೊಳಿಸಿತ್ತು. ಅದೇ ಆಧಾರದಲ್ಲಿ ಶಾಸಕರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ, ಹಾಗಾಗಿ ಪ್ರಕರಣ ರದ್ದುಗೊಳಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ. ಆದರೆ ಆ ವಾದವನ್ನು ಒಪ್ಪಲಾಗದು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಪ್ರಕರಣವೇನು?
'ಎಂ.ಎನ್.ಗೋಪಾಲಕೃಷ್ಣ ಹಾಗೂ ಮತ್ತೊಬ್ಬ ವ್ಯಕ್ತಿ ಶಾಸಕ ಎಸ್.ಆರ್.ವಿಶ್ವನಾಥ್ ಅವರನ್ನು ಮುಗಿಸುವುದಾಗಿ ಸಂಭಾಷಣೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಶಾಸಕ ವಿಶ್ವನಾಥ್ 2021ರ ಡಿ.1ರಂದು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 120ಬಿ, 506ರಡಿ ದೂರು ದಾಖಲಿಸಿದ್ದರು. ದೂರು ಸಲ್ಲಿಸಿದ ದಿನವೇ ಶಾಸಕರ ಕಚೇರಿಗೆ ಲಕೋಟೆಯೊಂದು ಬಂದಿತ್ತು. ಅದರಲ್ಲಿ ಪೆನ್ ಡ್ರೈವ್ ಹಾಗೂ ಬೆದರಿಕೆ ಪತ್ರವಿತ್ತು. ಪೊಲೀಸರು ಇದನ್ನು ವಶಕ್ಕೆ ಪಡೆದಿದ್ದರು. ಈ ಮಧ್ಯೆ ತಮ್ಮ ವಿರುದ್ಧದ ದೂರನ್ನು ರದ್ದುಗೊಳಿಸುವಂತೆ ಕೋರಿ ಗೋಪಾಲಕೃಷ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, 'ತಾಂತ್ರಿಕ ಕಾರಣಗಳಿಂದಾಗಿ ದೂರು ಸಲ್ಲಿಸಿರುವ ಪ್ರಕ್ರಿಯೆ ಸರಿಯಾಗಿಲ್ಲ. ಹಾಗಾಗಿ, ಪ್ರಕರಣವನ್ನು ರದ್ದುಗೊಳಿಸಲಾಗುತ್ತಿದೆ. ಆದರೆ, ಅರ್ಜಿದಾರರು ಹೊಸದಾಗಿ ದೂರು ಸಲ್ಲಿಸಲು ಸ್ವತಂತ್ರರು' ಎಂದು ಆದೇಶಿಸಿತ್ತು.
ಈ ಆದೇಶ ಹೊರಬಂದ ನಂತರ ವಿಶ್ವನಾಥ್ ಅವರು ಗೋಪಾಲಕೃಷ್ಣ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ದೂರಿನ ಬಗ್ಗೆ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ, ಆರೋಪಿ ವಿರುದ್ಧ ತನಿಖೆ ನಡೆಸುವಂತೆ ರಾಜಾನುಕುಂಟೆ ಪೊಲೀಸರಿಗೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ಗೋಪಾಲಕೃಷ್ಣ ತನಿಖೆಗೆ ತಡೆ ನೀಡಬೇಕು ಮತ್ತು ಪ್ರಕರಣವನ್ನು ರದ್ದುಗೊಳಿಸಬೇಕು' ಎಂದು ಕೋರಿ ಪುನಃ ಹೈಕೋರ್ಟ್ ಮೆಟ್ಟಿಲೇರಿದ್ದರು.