Muda Scam| ಸಿಎಂಗೆ ಮತ್ತೆ ತಾತ್ಕಾಲಿಕ ರಿಲೀಫ್‌; ಅರ್ಜಿ ವಿಚಾರಣೆ ಸೆ. 12 ಕ್ಕೆ ಮುಂದೂಡಿಕೆ

ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆ ಸೆಕ್ಷನ್ 17ಎ ರ ಅಡಿ ಮತ್ತು ಕೇಂದ್ರ ಸರ್ಕಾರ ಹೊರಡಿಸಿರುವ ನಿಯಮಗಳ (ಎಸ್‌ಒಪಿ) ಪ್ರಕಾರ ತನಿಖಾಧಿಕಾರಿಗಳಿಂದ ರಾಜ್ಯಪಾಲರು ಮಾಹಿತಿ ಸಂಗ್ರಹಿಸಬೇಕಾಗಿತ್ತು. ರಾಜ್ಯಪಾಲರು ಆ ಅರ್ಜಿಯನ್ನು ಪರಿಗಣಿಸಬಾರದಿತ್ತು ಎಂದು ಅಡ್ವೋಕೇಟ್‌ ಜನರಲ್‌ ವಾದಿಸಿದರು. ಆ ವೇಳೆ, ಪ್ರಾಥಮಿಕ ತನಿಖೆಗೆ ನಡೆಯಬೇಕು ಎಂಬುದಾದರೆ ಮೊದಲು ಎಫ್‌ಐಆರ್ ದಾಖಲಿಸುವುದಕ್ಕೆ ಸರ್ಕಾರ ಮುಂದಾಗುವುದೇ?'' ಎಂದು ನ್ಯಾಯಪೀಠ ಪ್ರಶ್ನಿಸಿತು.;

Update: 2024-09-09 12:34 GMT

ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಂಚಿಕೆ ಪ್ರಕರಣ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು  ಹೈಕೋರ್ಟ್‌ನಲ್ಲಿ ಸೆ.12 ಕ್ಕೆ ಮುಂದೂಡಿದೆ. 

ಹೈಕೋರ್ಟ್‌  ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ಅರ್ಜಿಯ ವಿಚಾರಣೆ ನಡೆಯುತ್ತಿದ್ದು, ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದರು.  ಸಿದ್ದರಾಮಯ್ಯ ಪರವಾಗಿ ಶತಾಭೀಷ್ ಶಿವಣ್ಣ ಹಾಜರಾಗಿದ್ದಾರೆ. ಸಿದ್ದರಾಮಯ್ಯ ಸಲ್ಲಿಸಿರುವ ರಿಟ್‌ ಸಂಬಂಧ ಇದುವರೆಗೆ ನಾಲ್ಕು ಬಾರಿ ವಿಚಾರಣೆ ನಡೆದಿದೆ.

ಮುಖ್ಯಮಂತ್ರಿಗಳ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಮತ್ತು ರವಿವರ್ಮಕುಮಾರ್ ಅವರು ವಾದ ಮಂಡಿಸಿದ್ದರು. ರಾಜ್ಯಪಾಲರ ಪರವಾಗಿ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ಅವರು ವಾದ ಮಂಡಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತರಾದ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ, ಜೆಡಿಎಸ್ನ ಪ್ರದೀಪ್ಕುಮಾರ್ ಎಸ್.ಬಿ. ಅವರು ಅಭಿಯೋಜನೆಗೆ ಪೂರ್ವಾನುಮತಿ ಕೇಳಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು.

ಕಳೆದ ಸೆ.2 ರಂದು ನಡೆದ ಸುದೀರ್ಘ ವಿಚಾರಣೆಯಲ್ಲಿ ದೂರುದಾರರಲ್ಲಿ ಒಬ್ಬರಾದ ಸ್ನೇಹಮಯಿ ಕೃಷ್ಣ ಪರ ವಕೀಲರು ವಾದ ಮಂಡಿಸಿದ್ದರು. ವಾದ ಆಲಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕವ್ಯಕ್ತಿ ಪೀಠ, ಸಿಎಂ ಪರ ವಕೀಲರು ಮತ್ತು ಸರ್ಕಾರದ ಪರ ಅಡ್ವೋಕೇಟ್ ಜನರಲ್ ಅವರ ವಾದ ಮಂಡನೆ ಕಾಲಾವಕಾಶ ಕೋರಿಕೆಯನ್ನು ಮನ್ನಿಸಿ ಪ್ರಕರಣದ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿತ್ತು. 

ಇಂದಿನ ವಾದಮಂಡನೆ

ಅಡ್ವೋಕೇಟ್​ ಜನರಲ್ ಶಶಿಕಿರಣ್‌ ಶೆಟ್ಟಿ ವಾದಮಂಡಿಸಿ, ಖಾಸಗಿ ವ್ಯಕ್ತಿಯಿಂದ ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆಯ ಸೆಕ್ಷನ್ 17ಎ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕೋರಿ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಈ ಕಾಯಿದೆಯನ್ವಯ ಪ್ರಾಥಮಿಕ ತನಿಖೆ ನಡೆಸಬೇಕು ಎಂಬುದಾಗಿ ತಿಳಿಸಲಾಗಿದೆ. ಯಾವುದೇ ತನಿಖೆ ನಡೆದಿಲ್ಲ. ಪ್ರಕರಣದಲ್ಲಿ ಸಾಕಷ್ಟು ವಿಳಂಬವಾಗಿದೆ. 1998ರಲ್ಲಿ ಡಿನೋಟಿಫಿಕೇಷನ್ ಮಾಡಲಾಗಿದೆ. ಬಳಿಕ ನೇರವಾಗಿ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂದರು.

ಜತೆಗೆ, ಪ್ರಾಥಮಿಕ ವಿಚಾರಣೆ ನಡೆಸುವುದಕ್ಕೆ ರಾಜ್ಯಪಾಲರಿಗೆ ಕಾನೂನಿನಲ್ಲಿ ಅವಕಾಶವಿಲ್ಲ. 'ಖಾಸಗಿ ವ್ಯಕ್ತಿ ಅನುಮತಿ ಕೇಳಿದ್ದಾರೆ. ಪ್ರಕರಣ ಸಂಬಂಧ ಮೊದಲು ಪೊಲೀಸರಿಗೆ ದೂರು ನೀಡಬೇಕಾಗುತ್ತದೆ. ಆರೋಪ ಸಂಬಂಧ ಪ್ರಾಸಿಕ್ಯೂಷನ್‌ಗೆ ಅನುಮತಿ ಪಡೆಯುವ ಸಂಬಂಧ ಅಭಿಪ್ರಾಯವನ್ನು ಪೊಲೀಸ್ ಅಧಿಕಾರಿ ಮಾತ್ರ ಮಾಡಬೇಕಾಗುತ್ತದೆ. ಪ್ರಕರಣದ ಬಗ್ಗೆ ಮಾಹಿತಿ ನೀಡುವಂತೆ ತನಿಖಾಧಿಕಾರಿ ಬಳಿ ಕೇಳುವುದಕ್ಕೆ ಅವಕಾಶವಿತ್ತು. ಅಲ್ಲದೇ, ಸಕ್ಷಮ ಪ್ರಾಧಿಕಾರವು (ರಾಜ್ಯಪಾಲರು) ಪ್ರಾಥಮಿಕ ವಿಚಾರಣೆ ನಡೆಸುವುದಕ್ಕೆ ಅವಕಾಶವಿಲ್ಲ ಎಂದು ವಾದಮಂಡಿಸಿದರು.

ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆ ಸೆಕ್ಷನ್ 17ಎ ರ ಅಡಿ ಮತ್ತು ಕೇಂದ್ರ ಸರ್ಕಾರ ಹೊರಡಿಸಿರುವ ನಿಯಮಗಳ (ಎಸ್‌ಒಪಿ) ಪ್ರಕಾರ ತನಿಖಾಧಿಕಾರಿಗಳಿಂದ ರಾಜ್ಯಪಾಲರು ಮಾಹಿತಿ ಸಂಗ್ರಹಿಸಬೇಕಾಗಿತ್ತು. ರಾಜ್ಯಪಾಲರು ಆ ಅರ್ಜಿಯನ್ನು ಪರಿಗಣಿಸಬಾರದಿತ್ತು ಎಂದು ಅಡ್ವೋಕೇಟ್‌ ಜನರಲ್‌ ವಾದಿಸಿದರು. ಆ ವೇಳೆ, ಪ್ರಾಥಮಿಕ ತನಿಖೆಗೆ ನಡೆಯಬೇಕು ಎಂಬುದಾದರೆ ಮೊದಲು ಎಫ್‌ಐಆರ್ ದಾಖಲಿಸುವುದಕ್ಕೆ ಸರ್ಕಾರ ಮುಂದಾಗುವುದೇ?'' ಎಂದು ನ್ಯಾಯಪೀಠ ಪ್ರಶ್ನಿಸಿತು.

ಸಿದ್ದರಾಮಯ್ಯ ಪರ ವಕೀಲರಾದ ಪ್ರೊ. ರವಿವರ್ಮಕುಮಾರ್ ವಾದಮಂಡಿಸಿ, ಬೋಗಸ್‌ ಜಮೀನು ದಾಖಲೆ ಆರೋಪವನ್ನು ಅಲ್ಲಗಳೆದು, ಕೆಸರೆ ಗ್ರಾಮ ಇದೆ, ಸರ್ವೇ ನಂಬರ್ 464 ಇದೆ. ಇದ್ಯಾವುದನ್ನೂ ನುಂಗಲಾಗಿಲ್ಲ. ಇದಕ್ಕೆ ದಾಖಲೆಗಳನ್ನು ನಾನು ತೋರಿಸುತ್ತೇನೆ ಎಂದರು.

ದೂರದಾರ ಸ್ನೇಹಮಯಿ ಕೃಷ್ಣ ಪರವಾಗಿ ವಕೀಲೆ ಲಕ್ಷ್ಮೀ ಐಯ್ಯಂಗಾರ್ ವಾದ ಮಾಡಿದರೆ, ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಅಭಿಶೇಖ್ ಮನುಸಿಂಘ್ವಿ ಹಾಗೂ ಪ್ರೊ, ರವಿವರ್ಮಕುಮಾರ್ ಸೆಪ್ಟಂಬರ್ 12 ರಂದು ವಾದ ಮಂಡಿಸಲಿದ್ದಾರೆ.

Tags:    

Similar News