ನಕ್ಸಲ್ ಆರೋಪಿ ಸಾವಿತ್ರಿ ಬಾಡಿ ವಾರೆಂಟ್ ಮರುಪರಿಶೀಲನೆಗೆ ಹೈಕೋರ್ಟ್ ಆದೇಶ
ಸಾವಿತ್ರಿ ವಿರುದ್ಧ ಬಾಡಿ ವಾರಂಟ್ ಜಾರಿಗೊಳಿಸಬೇಕು ಎಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಯನ್ನು ಮರು ಪರಿಶೀಲಿಸಿ ಎಂದು ಬೆಳ್ತಂಗಡಿಯ ಜೆಎಂಎಫ್‌ಸಿ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.;
ಬೆಳ್ತಂಗಡಿಯ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ನಕ್ಸಲ್ ಚಳವಳಿಯಲ್ಲಿ ತೊಡಗಿದ್ದ ಆರೋಪದ ಮೇಲೆ ಕೇರಳ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಸಾವಿತ್ರಿ ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂಬ ಹಿನ್ನೆಲೆಯಲ್ಲಿ ಅವರ ವಿರುದ್ಧ ಬಾಡಿ ವಾರಂಟ್ ಜಾರಿಗೊಳಿಸಬೇಕು ಎಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಯನ್ನು ಮರು ಪರಿಶೀಲಿಸಿ ಎಂದು ಬೆಳ್ತಂಗಡಿಯ ಜೆಎಂಎಫ್‌ಸಿ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತಂತೆ ಬೆಳ್ತಂಗಡಿಯ ವೇಣೂರು ಠಾಣಾ ಪೊಲೀಸರು ಸಲ್ಲಿಸಿದ್ದ ಎರಡು ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಪೊಲೀಸರ ಪರ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ವಾದ ಮಂಡಿಸಿ, ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಕೇರಳ ಪೊಲೀಸರಿಂದ ಸಾವಿತ್ರಿ ಅಲಿಯಾಸ್ ಉಷಾ ಬಂಧನಕ್ಕೆ ಒಳಗಾಗಿದ್ದಾರೆ. ಸದ್ಯ ತ್ರಿಶೂರು ಜೈಲಿನಲ್ಲಿದ್ದಾರೆ. ಆದರೆ, 2012ರಲ್ಲಿ ಬೆಳ್ತಂಗಡಿಯ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳ ಸಂಬಂಧ ಸಾವಿತ್ರಿಯನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದನ್ನು ಪುರಸ್ಕರಿಸಿದ ನ್ಯಾಯಪೀಠ, 'ಪೊಲೀಸರ ಮನವಿಯನ್ನು ಮರು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ' ಎಂದು ಪ್ರಕರಣವನ್ನು ಬೆಳ್ತಂಗಡಿಯ ಎಸಿಜೆ ಮತ್ತು ಜೆಎಂಎಫ್‌ಸಿ ಕೋರ್ಟ್‌ಗೆ ಹಿಂದಿರುಗಿಸಿತು. ಅಂತೆಯೇ ಎರಡೂ ಅರ್ಜಿಗಳನ್ನು ವಿಲೇವಾರಿ ಮಾಡಿತು.
ಸಾವಿತ್ರಿ ವಿರುದ್ಧ ಬಾರಿ ವಾರೆಂಟ್ ಜಾರಿಗೊಳಿಸುವಂತೆ ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಬೆಳ್ತಂಗಡಿ ಎಸಿಜೆ ಮತ್ತು ಜೆಎಂಎಫ್ ಕೋರ್ಟ್ 2022ರ ಜೂ.22ರಂದು ವಜಾಗೊಳಿಸಿತ್ತು. ಪ್ರಕರಣ ತನ್ನ ಮುಂದಿಲ್ಲ. ಪ್ರಕರಣದ ವಿಚಾರಣಾ ವ್ಯಾಪ್ತಿ ಹೊಂದಿರುವ ಕೋರ್ಟ್ ಮುಂದೆ ಅರ್ಜಿ ಸಲ್ಲಿಸುವಂತೆ ಅಧೀನ ನ್ಯಾಯಾಲಯ ಆದೇಶಿಸಿದೆ. ಆದರೆ, ಸರ್ಕಾರದ ಮನವಿಯನ್ನು ಪರಿಶೀಲನೆ ನಡೆಸುವ ಅಧಿಕಾರ ವ್ಯಾಪ್ತಿ ಈ ಅಧೀನ ನ್ಯಾಯಾಲಯ ಹೊಂದಿದೆ. ಅದರಂತೆ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು. ಸರ್ಕಾರದ ಮನವಿಯನ್ನು ಮರು ಪರಿಶೀಲಿಸಲು ಅಧೀನ ನ್ಯಾಯಾಲಯಕ್ಕೆ ಸೂಚಿಸಬೇಕು ಎಂದು ಕೋರಿದರು. ಈ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.