High Court News | ಇನ್ನೆಷ್ಟು ಜೀವ ತೆಗೆಯುತ್ತೀರಿ?: ಬೆಸ್ಕಾಂ ಅಧಿಕಾರಿಗಳಿಗೆ ಹೈಕೋರ್ಟ್‌ ತರಾಟೆ

ಬೆಸ್ಕಾಂ ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿತನ ಹೊಂದಿದ್ದು, ಪಾದಚಾರಿಗಳ ಜೀವವನ್ನು ಸುಲಭವಾಗಿ ತೆಗೆಯುತ್ತಾರೆ. ಇಂಥವರಿಗೆ ಕಠಿಣ ಶಿಕ್ಷೆಯ ಅಗತ್ಯವಿದೆ ಎಂದು ಸೋಮವಾರ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.;

Update: 2024-11-12 07:09 GMT
ಕರ್ನಾಟಕ ಹೈಕೋರ್ಟ್‌
Click the Play button to listen to article

ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕರ್ನಾಟಕ ಹೈಕೋರ್ಟ್‌ ಹರಿಹಾಯ್ದಿದ್ದು, “ಬೆಸ್ಕಾಂ ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿಯ ಜನರಾಗಿದ್ದು, ಪಾದಚಾರಿಗಳ ಜೀವವನ್ನು ಸುಲಭವಾಗಿ ತೆಗೆಯುತ್ತಾರೆ. ಇಂಥವರಿಗೆ ಕಠಿಣ ಶಿಕ್ಷೆಯ ಅಗತ್ಯವಿದೆ" ಎಂದು ಸೋಮವಾರ ಅಭಿಪ್ರಾಯಪಟ್ಟಿದೆ. 

ಹೊಲಕ್ಕೆ ನಡೆದು ಹೋಗುವಾಗ ರಸ್ತೆ ಬದಿಯ ಕೆಇಬಿ ಕಂಬದ ತಂತಿ ಸ್ಪರ್ಶವಾಗಿ, ವಿದ್ಯುತ್‌ ಪ್ರವಹಿಸಿ ಹುಡುಗನೊಬ್ಬ ತೀವ್ರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿಂತೆ  ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ಬೆಸ್ಕಾಂನ ಜಗಳೂರು ವಿಭಾಗದ ಬೆಸ್ಕಾಂನ ಕಾರ್ಯ ನಿರ್ವಾಹಕ ಎಂಜಿನಿಯರ್ ಜಿ.ಎಂ.ಪ್ರವೀಣ್ (46), ವಿಭಾಗೀಯ ಅಧಿಕಾರಿ ಎಸ್.ಸಿ.ಗಂಗಾಧರ ತಿಲಕ್ (56) ಮತ್ತು ಪಟ್ಟಣದ ಲೈನ್‌ಮನ್ ಅಸೀಫ್ ಸೋಮಲಾಪುರ (33) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. 

ಅರ್ಜಿ ವಿಚಾರಣೆಗೆ ಬರುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಪೀಠವು ಅರ್ಜಿದಾರರು ಬೆಸ್ಕಾಂ ಉದ್ಯೋಗಿಗಳಲ್ಲವೇ? ಎಂದು ಪ್ರಶ್ನಿಸಿತು. ಅರ್ಜಿದಾರರ ಪರ ವಕೀಲರು, ಹೌದು.. ಎಂದು ಉತ್ತರಿಸಿ ಪ್ರಕರಣದ ಅಂಶಗಳನ್ನು ವಿವರಿಸಲು ಮುಂದಾದರು. ಈ ವೇಳೆ ಬೆಸ್ಕಾಂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪೀಠವು  'ಈ ಬೆಸ್ಕಾಂ ಅಧಿಕಾರಿಗಳು ದೂರು ಬಂದ ಕಡೆ ತಕ್ಷಣವೇ ಹೋಗಿ ಸ್ಥಳ ಪರಿಶೀಲನೆ ಮಾಡುವುದಿಲ್ಲ. ಪಾದಚಾರಿಗಳ ಜೀವವನ್ನು ಸುಲಭವಾಗಿ ತೆಗೆದು ಬಿಡುತ್ತಾರೆ. ಇವರ ನಿರ್ಲಕ್ಷ್ಯದಿಂದ ಇನ್ನೆಷ್ಟು ಸಾವು ಸಂಭವಿಸಬೇಕು. ಪುಣ್ಯ ಎಂದರೆ ಈ ಪ್ರಕರಣದಲ್ಲಿ ಸಾವು ಸಂಭವಿಸಿಲ್ಲ. ಪ್ರಕರಣ ರದ್ದು ಕೋರಿರುವ ಈ ಅರ್ಜಿಗಳನ್ನು ನಾನು ಪರಿಗಣಿಸುವುದೇ ಇಲ್ಲ. ನನಗೇನಾದರೂ ಅವಕಾಶ ಸಿಕ್ಕರೆ ಅರ್ಜಿದಾರರಿಗೆ ಶಿಕ್ಷೆ ವಿಧಿಸುತ್ತೇನೆ' ಎಂದು ಮೌಖಿಕ ಎಚ್ಚರಿಕೆ ನೀಡಿದರು.

ಅರ್ಜಿದಾರರ ವಿರುದ್ದದ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಗೆ ತಡೆ ನೀಡಲು ನಿರಾಕರಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು 2025ರ ಜನವರಿ ಮೊದಲ ವಾರಕ್ಕೆ ಮುಂದೂಡಿದರು.

ಪ್ರಕರಣವೇನು?

ಜಗಳೂರು ತಾಲ್ಲೂಕಿನ ಮೂಡಲ ಮಾಚಿಕೆರೆ ಗ್ರಾಮದ ನಿವಾಸಿ ಆರ್‌ ರವಿ 2020ರ ಅಕ್ಟೋಬರ್‌ 27ರಂದು ಪೊಲೀಸರಿಗೆ ದೂರು ನೀಡಿದ್ದರು. ಅಕ್ಟೋಬರ್‌ 26ರಂದು ಬೆಳಗ್ಗೆ 10.30ಕ್ಕೆ ತಮ್ಮ ಪುತ್ರ ಪಾಂಡುರಂಗ (15) ಹೊಲಕ್ಕೆ ಹೋಗುತ್ತಿದ್ದರು. ಹಸುವೊಂದು ಹೊಲಕ್ಕೆ ಹೋಗುತ್ತಿದ್ದನ್ನು ತಡೆಯಲು ಪಾಂಡುರಂಗ ಮುಂದಾದಾಗಿದ್ದ. ಈ ವೇಳೆ ಆತನ ಕಾಲು ರಸ್ತೆಬದಿ ಕೆಇಬಿ ಕಂಬದ ತಂತಿಗೆ ಸ್ಪರ್ಶವಾಗಿ, ವಿದ್ಯುತ್‌ ಪ್ರವಹಿಸಿದೆ. ಇದರಿಂದ ಪಾಂಡುರಂಗನ ಎರಡು ಕಾಲು ಮತ್ತು ಕೈಗೆ ತೀವ್ರವಾಗಿ ಗಾಯವಾಗಿದೆ. ಘಟನೆಗೆ ಬೆಸ್ಕಾಂನ ದಾವಣಗೆರೆ ವಿಭಾಗದ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ ಜಿ ಎಂ ಪ್ರವೀಣ್‌, ಸೆಕ್ಷನ್‌ ಆಫೀಸರ್‌ ಎಸ್‌ ಸಿ ಚಂದ್ರಶೇಖರ ತಿಲಕ್‌ ಮತ್ತು ಲೈನ್‌ ಮ್ಯಾನ್‌ ಆಸೀಫ್‌ ಸೋಮಲಪುರ ಕಾರಣಕರ್ತರಾಗಿದ್ದಾರೆ ಎಂದು ಆರೋಪಿಸಿದ್ದರು.

ದೂರಿನ ಆಧಾರದಲ್ಲಿ ತನಿಖೆ ನಡೆಸಿದ್ದ ಜಗಳೂರು ಠಾಣಾ ಪೊಲೀಸರು ಅರ್ಜಿದಾರರಾಗಿರುವ ಬೆಸ್ಕಾಂನ ಈ ಮೂವರು ಉದ್ಯೋಗಿಗಳ ವಿರುದ್ಧ ವ್ಯಕ್ತಿಯ ಜೀವಕ್ಕೆ ಅಪಾಯ ಉಂಟು ಮಾಡಿದ ಆರೋಪದ ಮೇಲೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವು ಜಗಳೂರು ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ತಮ್ಮ ವಿರುದ್ಧದ ಈ ಪ್ರಕರಣ ಮತ್ತು ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಅರ್ಜಿದಾರ ಅಧಿಕಾರಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Tags:    

Similar News