ರೋಡ್​​ ರೇಜ್​ ಪ್ರಕರಣಕ್ಕೆ ಹೈಕೋರ್ಟ್ ತೆರೆ: ವಿಂಗ್​ ಕಮಾಂಡರ್​, ವಿಕಾಸ್​ ವಿರುದ್ಧದ ದೂರುಗಳು ರದ್ದು

ಶಿಲಾದಿತ್ಯ ಬೋಸ್ ಅವರ ಪತ್ನಿ ಮಧುಮಿತಾ ದತ್ತಾ ಮತ್ತು ವಿಕಾಸ್ ಕುಮಾರ್ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಿ, ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿರುವುದಾಗಿ ಪ್ರಮಾಣಪತ್ರ ಸಲ್ಲಿಸಿದರು.;

Update: 2025-09-11 16:47 GMT

ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡಿದ್ದ ಬೆಂಗಳೂರಿನ ಬೀದಿ ಜಗಳ (ರೋಡ್ ರೇಜ್​) ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ತೆರೆ ಎಳೆದಿದೆ. ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಮತ್ತು ಕಾಲ್ ಸೆಂಟರ್ ಉದ್ಯೋಗಿ ವಿಕಾಸ್ ಕುಮಾರ್ ಪರಸ್ಪರ ದಾಖಲಿಸಿದ್ದ ದೂರು-ಪ್ರತಿದೂರುಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ.

2025ರ ಏಪ್ರಿಲ್ 21ರಂದು ಹಳೆಯ ಮದ್ರಾಸ್ ರಸ್ತೆಯಲ್ಲಿ ನಡೆದಿದ್ದ ಈ ಘಟನೆಯಲ್ಲಿ, ಶಿಲಾದಿತ್ಯ ಬೋಸ್ ಅವರು ತಮಗೆ ಕನ್ನಡ ಬರುವುದಿಲ್ಲ ಎಂಬ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ, ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನಂತರ, ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾದಾಗ, ಇಬ್ಬರ ನಡುವೆಯೂ ಕೈ-ಕೈ ಮಿಲಾಯಿಸಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ, ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧವೂ ಕೊಲೆ ಯತ್ನ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿದ್ದವು.

ಪ್ರಕರಣ ರದ್ದತಿಗೆ ಕಾರಣವೇನು?

ಗುರುವಾರ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಪೀಠದ ಮುಂದೆ ಈ ಪ್ರಕರಣದ ವಿಚಾರಣೆ ನಡೆಯಿತು. ಈ ವೇಳೆ, ಶಿಲಾದಿತ್ಯ ಬೋಸ್ ಅವರ ಪತ್ನಿ ಮಧುಮಿತಾ ದತ್ತಾ ಮತ್ತು ವಿಕಾಸ್ ಕುಮಾರ್ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಿ, ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿರುವುದಾಗಿ ಪ್ರಮಾಣಪತ್ರ ಸಲ್ಲಿಸಿದರು. "ಇದು ರಸ್ತೆಯಲ್ಲಿ ನಡೆದ ಸಣ್ಣ ಜಗಳವಾಗಿದ್ದು, ಮಾತಿನ ಚಕಮಕಿ ಹೊರತುಪಡಿಸಿ ಯಾವುದೇ ದೈಹಿಕ ಹಲ್ಲೆ ನಡೆದಿಲ್ಲ. ನಮಗೆ ಯಾವುದೇ ಗಾಯಗಳಾಗಿಲ್ಲ, ಆದ್ದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಲು ನಾವು ಸಿದ್ಧರಿದ್ದೇವೆ," ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಈ ಹೇಳಿಕೆಗಳನ್ನು ಪರಿಗಣಿಸಿದ ನ್ಯಾಯಾಲಯ, "ಪ್ರಕರಣದಲ್ಲಿ ಕೊಲೆ ಯತ್ನದಂತಹ ಗಂಭೀರ ಆರೋಪಗಳಿದ್ದರೂ, ಎರಡೂ ಕಡೆಯವರು ಸ್ವಇಚ್ಛೆಯಿಂದ ಪ್ರಕರಣವನ್ನು ಅಂತ್ಯಗೊಳಿಸಲು ಒಪ್ಪಿದ್ದಾರೆ. ಇಂತಹ ಸಂದರ್ಭದಲ್ಲಿ ವಿಚಾರಣೆಯನ್ನು ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ," ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ, "ಒಬ್ಬರು ವಾಯುಪಡೆಯ ಅಧಿಕಾರಿಯಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಕ್ರಿಮಿನಲ್ ಮೊಕದ್ದಮೆ ಎದುರಿಸುವುದು ಸರಿಯಲ್ಲ" ಎಂದು ಹೇಳಿದ ನ್ಯಾಯಪೀಠ, ಭವಿಷ್ಯದಲ್ಲಿ ಇಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ಇಬ್ಬರಿಗೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ, ಪ್ರಕರಣಗಳನ್ನು ರದ್ದುಪಡಿಸಿ ಆದೇಶಿಸಿತು. 

Tags:    

Similar News