ರಾಜ್ಯಕ್ಕೆ ಬಂದ ʼಕೈʼಕಮಾಂಡ್ ನಾಯಕರು ; ಕಾಂಗ್ರೆಸ್ ಶಾಸಕರ ಜೊತೆ ಇಂದಿನಿಂದ ಸಭೆ, ಅಸಮಾಧಾನ‌ ತಣಿಸುವ ಯತ್ನ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬೆಂಗಳೂರಿಗೆ ಆಗಮಿಸಿದ್ದು, ಇಂದಿನಿಂದ ಮೂರು ದಿನಗಳ ಕಾಲ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.;

Update: 2025-06-30 04:13 GMT

ಅನುದಾನದ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದ ಸ್ವಪಕ್ಷಿಯ ಶಾಸಕರ ಮನವೊಲಿಕೆಗೆ ಹೈಕಮಾಂಡ್ ನಾಯಕರು ರಾಜ್ಯಕ್ಕೆ ಆಗಮಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬೆಂಗಳೂರಿಗೆ ಆಗಮಿಸಿದ್ದು, ಇಂದಿನಿಂದ ಮೂರು ದಿನಗಳ ಕಾಲ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯಲಿದೆ. ರಾಜ್ಯ ಸರ್ಕಾರದ ವಿರುದ್ಧ ಬಹಿರಂಗವಾಗಿ‌ ಅಸಮಾಧಾನದ ಹೇಳಿಕೆ ನೀಡಿರುವ ಆಯ್ದ 45 ಶಾಸಕರಿಗೆ ಖುದ್ದು ಕರೆ ಮಾಡಿ ಕೆಪಿಸಿಸಿ ಕಚೇರಿಗೆ ಬರುವಂತೆ ಸೂಚಿಸಲಾಗಿದೆ.

ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಒಬ್ಬೊಬ್ಬ ಶಾಸಕರ ಜೊತೆ ಪ್ರತ್ಯೇಕ ಚರ್ಚೆ ನಡೆಸಲಿದ್ದಾರೆ. ಮೊದಲ ದಿನ 15 ಶಾಸಕರ ಸಭೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.

ಶಾಸಕರಾದ ಬಿ.ಆರ್. ಪಾಟೀಲ್, ರಾಜು ಕಾಗೆ, ಕೊತ್ತೂರು ಮಂಜುನಾಥ್, ಸುಬ್ಬಾರೆಡ್ಡಿ, ಪ್ರದೀಪ್ ಈಶ್ವರ್ , ನಾರಾಯಣಸ್ವಾಮಿ ಸೇರಿದಂತೆ 15 ಶಾಸಕರ ಜತೆ ಮೊದಲ ದಿನ ಸಭೆ ನಡೆಸಲಿದ್ದಾರೆ.

ಅನುದಾನ ಹಂಚಿಕೆ ವಿಚಾರವಾಗಿ ಶಾಸಕರು ರಣದೀಪ್ ಸಿಂಗ್ ಸುರ್ಜೆವಾಲಾ ಅವರಿಗೆ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದೇ ವೇಳೆ ಸಚಿವರ ಕಾರ್ಯವೈಖರಿ ಶಾಸಕರ ಬೇಡಿಕೆಗಳಿಗೆ ಸ್ಪಂದ‌ನೆ ಮಾಡದಿರುವ ಬಗ್ಗೆ ಹೈಕಮಾಂಡ್ ನಾಯಕರ ಗಮನ ಸೆಳೆಯಲು ಶಾಸಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷದ ಐವರು ಶಾಸಕರು ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು. ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರದ ಆರೋಪವನ್ನೂ ಮಾಡಿದ್ದರು.

ಇದರಿಂದ ಮುಜುಗರಕ್ಕೆ ಒಳಗಾಗಿದ್ದ ಹೈಕಮಾಂಡ್ ನಾಯಕರು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡು ಶಾಸಕರ ಜೊತೆ ಮಾತನಾಡುವಂತೆ ಸೂಚಿಸಿದ್ದರು.

Tags:    

Similar News