ವಿಜಯಪುರ ಜಿಲ್ಲೆಯ ಚಡಚಣ ಎಸ್‌ಬಿಐನಲ್ಲಿ ದರೋಡೆ; 8 ಕೋಟಿ ರೂ, 50 ಕೆ.ಜಿ. ಚಿನ್ನ ಲೂಟಿ
ಸಂಜೆ 7 ಗಂಟೆ ಸುಮಾರಿಗೆ ಬ್ಯಾಂಕ್ ಸಿಬ್ಬಂದಿ ದಿನದ ಕೆಲಸ ಮುಗಿಸಿ ಮನೆಗೆ ತೆರಳಲು ಸಿದ್ಧರಾಗುತ್ತಿದ್ದಾಗ, ಮಿಲಿಟರಿ ಮಾದರಿಯ ಉಡುಪು ಧರಿಸಿದ್ದ ಏಳೆಂಟಕ್ಕೂ ಹೆಚ್ಚು ದರೋಡೆಕೋರರು ಬ್ಯಾಂಕಿನ ಮುಖ್ಯದ್ವಾರದ ಮೂಲಕ ಏಕಾಏಕಿ ಒಳನುಗ್ಗಿದ್ದಾರೆ.;
ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಗೆ ಮಂಗಳವಾರ ಸಂಜೆ ನುಗ್ಗಿದ ಮುಸುಕುಧಾರಿ ದರೋಡೆಕೋರರ ತಂಡ, ಸಿಬ್ಬಂದಿಯನ್ನು ಬಂಧಿಸಿಟ್ಟು ಗನ್ ತೋರಿಸಿ ಸುಮಾರು 8 ಕೋಟಿ ನಗದು ಹಾಗೂ 50 ಕೆ.ಜಿ. ಚಿನ್ನಾಭರಣ ದೋಚಿ ಪರಾರಿಯಾಗಿದೆ.
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಚಡಚಣ ಪಟ್ಟಣದ ಪಂಢರಪುರ ಮುಖ್ಯರಸ್ತೆಯಲ್ಲಿರುವ ಎಸ್‌ಬಿಐ ಶಾಖೆಯಲ್ಲಿ ಈ ಘಟನೆ ನಡೆದಿದೆ. ಸಂಜೆ 7 ಗಂಟೆ ಸುಮಾರಿಗೆ ಬ್ಯಾಂಕ್ ಸಿಬ್ಬಂದಿ ದಿನದ ಕೆಲಸ ಮುಗಿಸಿ ಮನೆಗೆ ತೆರಳಲು ಸಿದ್ಧರಾಗುತ್ತಿದ್ದಾಗ, ಮಿಲಿಟರಿ ಮಾದರಿಯ ಉಡುಪು ಧರಿಸಿದ್ದ ಏಳೆಂಟಕ್ಕೂ ಹೆಚ್ಚು ದರೋಡೆಕೋರರು ಬ್ಯಾಂಕಿನ ಮುಖ್ಯದ್ವಾರದ ಮೂಲಕ ಏಕಾಏಕಿ ಒಳನುಗ್ಗಿದ್ದಾರೆ.
ಒಳಬಂದ ಕೂಡಲೇ ದರೋಡೆಕೋರರು ನಾಡ ಪಿಸ್ತೂಲ್ ಹಾಗೂ ಇತರ ಮಾರಕಾಸ್ತ್ರಗಳನ್ನು ತೋರಿಸಿ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ್ದಾರೆ. ಬಳಿಕ ಎಲ್ಲರ ಕೈಕಾಲುಗಳನ್ನು ಕಟ್ಟಿ ಹಾಕಿ, ಬ್ಯಾಂಕಿನಲ್ಲಿದ್ದ ಅಂದಾಜು 8 ಕೋಟಿ ನಗದು ಹಾಗೂ ಸುಮಾರು 50 ಕೆ.ಜಿ. ತೂಕದ ಚಿನ್ನಾಭರಣಗಳನ್ನು ದೋಚಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದರೋಡೆಯ ನಂತರ ಕದ್ದ ನಗದು ಮತ್ತು ಚಿನ್ನಾಭರಣಗಳನ್ನು ವಾಹನಗಳಲ್ಲಿ ತುಂಬಿಕೊಂಡು ದರೋಡೆಕೋರರು ಮಹಾರಾಷ್ಟ್ರದ ಕಡೆಗೆ ಪರಾರಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ.
ಪೊಲೀಸರು ಬ್ಯಾಂಕಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಸಿಬ್ಬಂದಿಯಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ದರೋಡೆಕೋರರ ಪತ್ತೆಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಈ ಘಟನೆ ತಿಳಿಯುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬ್ಯಾಂಕಿನ ಮುಂದೆ ಜಮಾಯಿಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ದೋಚಲಾದ ನಗದು ಮತ್ತು ಚಿನ್ನಾಭರಣಗಳ ಖಚಿತ ಮೌಲ್ಯದ ಬಗ್ಗೆ ತನಿಖೆಯ ನಂತರವೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.