ಹೆಗಲತ್ತಿ ಪ್ರಕರಣಕ್ಕೆ ನಾಲ್ಕು ವರ್ಷ: ಗುಡ್ಡ ಜರಿದ ಕಣಿವೆಯ ಭೂಮಿ ಇಂದಿಗೂ ಬರಡು

By :  Uday Sagar
Update: 2024-08-25 02:00 GMT

ಬಿ ಎಸ್‌ ಯಡಿಯೂರಪ್ಪ ಕೊನೇ ಸಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವೇಳೆ 2019ರ ಜುಲೈನಲ್ಲಿ ರಾಜ್ಯದಲ್ಲೆಡೆ ಮಳೆ ಆರ್ಭಟ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಮಲೆಮಹದೇಶ್ವರ ಗುಡ್ಡ ಕುಸಿತ ಪ್ರಕರಣ ಅಲ್ಲ ರಾಜ್ಯದೆಲ್ಲೆಡೆ ಸದ್ದು ಮಾಡಿತ್ತು.

ಶಿರೂರು ಮತ್ತು ವಯನಾಡು ಭೂ ಕುಸಿತದ ಘಟನೆಗಳು ಜನರನ್ನು ಬೆಚ್ಚಿಬೀಳಿಸಿರುವ ಹಿನ್ನೆಲೆಯಲ್ಲಿ ಇದೀಗ ಮಲೆನಾಡಿನಲ್ಲಿ ಹೆಗಲತ್ತಿ ಭೂ ಕುಸಿತ ಮತ್ತೆ ಚರ್ಚೆಗೆ ಬಂದಿದೆ. 

ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದರೆ ನೆರೆ ಎನ್ನುತ್ತಿದ್ದ ಹಿಂಬಾಲಕರಿಗೆ ಮತ್ತೊಂದು ಉದಾಹರಣೆಯಂತೆ ಜಡಿ ಮಳೆ ಭಯ ಮೂಡಿಸಿತ್ತು. ಅಧಿಕಾರ ಪಡೆದು ಕೆಲ ದಿನ ಬೆಂಗಳೂರಿನಲ್ಲೇ ಸುತ್ತಾಡಿದ ಬಿಎಸ್‌ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗಕ್ಕೆ ತರಾತುರಿಯಲ್ಲಿ ಆಗಮಿಸಲು ಮಹಾಮಳೆಯೇ ಕಾರಣವಾಗಿತ್ತು. ಶಿವಮೊಗ್ಗ ಜಿಲ್ಲೆ ಮಂಡಗದ್ದೆ ಹೋಬಳಿಯ ಹೆಗಲತ್ತಿ ಬೆಟ್ಟದ ನೆತ್ತಿ ಜರಿದು ಮೈಲು ದೂರ ಕುಸಿದು ಗದ್ದೆ-ತೋಟಗಳು ಮಣ್ಣಿನಡಿ ಸಮಾಧಿಯಾಗಿದ್ದವು. ರಾತ್ರಿ ಮಳೆಗೆ ಬೆದರಿ ಮಲಗಿದ್ದ ರೈತರು ಮುಂಜಾನೆ ಬೆಚ್ಚಿದ್ದರು. 

ಶಿವಮೊಗ್ಗ ಸಮೀಪದ ಮಂಡಗದ್ದೆಯಿಂದ ಹತ್ತು ಕಿಲೋಮೀಟರ್‌ ದೂರದ ದಟ್ಟ ಅರಣ್ಯದ ನಡುವಿನ ಹೆಗಲತ್ತಿ ಎಂಬಲ್ಲಿ ಆರು ದಶಕಗಳಿಂದ ಕೃಷಿ ಮಾಡಿಕೊಂಡಿದ್ದ ಕುಟುಂಬಗಳ ಪಾಲಿಗೆ ಗುಡ್ಡು ಕುಸಿತ ಬದುಕಿನ ಭರವಸೆಯನ್ನೇ ಮಣ್ಣುಪಾಲು ಮಾಡಿತ್ತು.

ಮಧ್ಯಮ-ಕೆಳ ಸಮುದಾಯಗಳ ಜೊತೆ ಪರ ಊರಿನವರೂ ಸಹ ಈ ಭಾಗದಲ್ಲಿ ಜಮೀನು ಮಾಡಿಕೊಂಡಿದ್ದಾರೆ. 2013ರಲ್ಲಿ ಈ ಗ್ರಾಮದ 162 ಎಕರೆ ಪ್ರದೇಶದಲ್ಲಿ ಅಕ್ರಮ ಭೂ ಮಂಜೂರಾತಿ ವಿಷಯಕ್ಕೆ ಸದ್ದು ಮಾಡಿತ್ತು. ಒಟ್ಟು 1535 ಎಕರೆ ಇನಾಂ ಜಮೀನು 1954ರ ಇನಾಂ ರದ್ದತಿ ಕಾನೂನು ಮೂಲಕ ಸರ್ಕಾರಕ್ಕೆ ಹಸ್ತಾಂತರವಾಗಿ, 1981ರಲ್ಲಿ ಮೀಸಲು ಅರಣ್ಯವಾಯ್ತು. ಅಲ್ಲಿಂದೀಚೆಗೆ ಸಾಕಷ್ಟು ಜನವಸತಿಗಳು ಈ ಭಾಗದಲ್ಲಿ ನೆಲೆಕಂಡಿವೆ. ಗೇಣಿ ಹಕ್ಕು ಅಡಿ ಸಾಕಷ್ಟು ಜನರಿಗೆ ಭೂಮಿ ಮಂಜೂರಾಗಿದೆ. 2013ರಲ್ಲಿ ಅಂದಿನ ಶಿವಮೊಗ್ಗ ಜಿಲ್ಲಾಧಿಕಾರಿ ವೇದಮೂರ್ತಿ ಭೂ ಮಂಜೂರಾತಿ ರದ್ಧತಿಗೆ ಆದೇಶ ಮಾಡಿದ್ದು ಈ ತನಕವೂ ಭೂ ಹಕ್ಕು ಕದನ ರಾಜಕೀಯ ಸ್ವರೂಪದೊಂದಿಗೆ ದಿನದೂಡುತ್ತಾ ಬಂದಿದೆ.


ಇಂತಹ ಕಾನೂರಿಗೆ ಮುಕುಟದಂತಿದ್ದ, ಸ್ಥಳೀಯವಾಗಿ ಮಲೆಮಹದೇಶ್ವರ ಗುಡ್ಡ ಎಂದೇ ಕರೆಯುತ್ತಿದ್ದ ಕಾಡಿನ ತುದಿ 2019ರ ಆಗಸ್ಟ್‌ 8ರ ಮಧ್ಯ ರಾತ್ರಿ ಜರಿದು ಊರಿನೊಳಗಿನ ಕೆರೆ ತನಕ ಜರಿದು ಹೋಗಿತ್ತು. ಗುಡ್ಡದಿಂದ ಕೆಳಕ್ಕೆ ಆಳ ಕಂದರ ನಿರ್ಮಾಣವಾಗಿ ನೀರು ಹರಿಯುತ್ತಿತ್ತು. ಹೀಗೆ ರಾತ್ರಿ ಕಳೆದು ಬೆಳಗಾಗುವುದರಲ್ಲಿ ನೆಲಸಮವಾದ ಜಾಗ ಈಗ ಹೇಗಿದೆ..? ಬದಲಾಗಿದೆಯಾ ಅಥವಾ ಪುನಃ ಗುಡ್ಡ ಕುಸಿವ ಭೀತಿ ಇದೆಯಾ..? ಇಂತಹ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ʼದ ಫೆಡರಲ್‌ ಕರ್ನಾಟಕʼ ಹೆಗಲತ್ತಿಗೆ ಭೇಟಿ ನೀಡಿದೆ..

ಅಂದು ಮುಖ್ಯಮಂತ್ರಿಯಾಗಿ ಶಿವಮೊಗ್ಗ ಮೊದಲ ಭೇಟಿ ಹೆಗಲತ್ತಿ ಗ್ರಾಮಕ್ಕೆ ಮೀಸಲಿಟ್ಟಿದ್ದ ಬಿ ಎಸ್ ಯಡಿಯೂರಪ್ಪ ಅಧಿಕಾರಿಗಳನ್ನು ಕರೆದು ಶೀಘ್ರ ಪರಿಹಾರ ಹಾಗೂ ಶಾಶ್ವತ ಕ್ರಮಕ್ಕೆ ಸೂಚನೆ ನೀಡಿದ್ದರು. ಅದಾದ ಬಳಿಕ ಅಧಿಕಾರಿಗಳು, ಸಂಶೋಧಕರು ಬಂದು ಪರಿಸ್ಥಿತಿ ಅವಲೋಕನ ಮಾಡಿ ಹೋದರು. ಹಲವರಿಗೆ ಪರಿಹಾರ ಸಿಗಲು ತೊಡಕಿರುವುದರಿಂದ ಗುಡ್ಡ ತೇಲಿ ಬಂದ ಹಾದಿಗೆ ಅಡ್ಡಲಾಗಿ ಅಗಳ ಹೊಡೆದು ಅಲ್ಲಿಂದ ಬಸಿ ಕಾಲುವೆ ತರಹ ಮಳೆ ನೀರನ್ನು ಹೊಲದ ಪಕ್ಕ ಹರಿಸಿದ್ದಾರೆ. ಆದರೆ ಯಾವುದೇ ಶಾಶ್ವತ ಕ್ರಮವಿಲ್ಲ.

ಗಾಯಗೊಂಡಂತೆ ಕಾಣುತ್ತಿದ್ದ ದೂರದ ಗುಡ್ಡದಲ್ಲಿ ಈಗ ಮಣ್ಣು ಗಟ್ಟಿಯಾಗಿದೆ. ಪೊದೆ ಬೆಳೆದುಕೊಂಡಿದೆ. ಆದರೆ ಗಿಡ-ಗಂಟಿಗಳ ಕುರುಹುಗಳೇನೂ ಕಾಣುತ್ತಿಲ್ಲ. ಫಲವತ್ತಾದ ಕಾಡು ಮಣ್ಣಲ್ಲಿ ಬೆಳೆದ ಹತ್ತಾರು ಎಕರೆ ಅಡಿಕೆ ತೋಟಗಳು ನೆಲಸಮವಾದ ಬಳಿಕ ಆ ಜಾಗದಲ್ಲಿ ಮರಳು ಮಣ್ಣು ತುಂಬಿಕೊಂಡಿತ್ತು. ಪುನಃ ಅಡಿಕೆ ಗಿಡ ನೆಟ್ಟಿದ್ದ ಜನರು ಚಿಂತೆಗೀಡಾಗಿದ್ದಾರೆ. ನಾಲ್ಕು ವರ್ಷವಾದರೂ ಅಡಿಕೆ ಗಿಡಗಳು ನೆಲಬಿಟ್ಟು ಏಳುತ್ತಲೇ ಇಲ್ಲ. ಅಳಿದುಳಿದ ಅಡಿಕೆ ತೋಟದಲ್ಲಿ ಕಾಯಿಗಳು ನಿಲ್ಲುತ್ತಿಲ್ಲ. ಕಿಲೋಮೀಟರ್‌ ಉದ್ದ ಮರಳುಗಾಡಿನಂತಾಗಿದೆ.

ಈ ಬಗ್ಗೆ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಅರವತ್ತು ದಾಟಿದ ಶಂಕರ್‌ ಪೂಜಾರಿ ಅಡಿಕೆ ತೋಟದಲ್ಲೇ ಹಸುಗಳನ್ನು ಮೇಯಿಸುತ್ತಾ, ಕುಬ್ಜ ಅಡಿಕೆ ಗಿಡಗಳತ್ತ ಕೈ ತೋರಿಸಿ ನಾಲ್ಕು ವರ್ಷ ಕಳೆದರೂ ಗಿಡ ಮೇಲೇಳ್ತಿಲ್ಲ ಎಂದು ಮರುಗುತ್ತಿದ್ದು. ತಾವೆಂದೂ ಈ ತರಹದ ಘಟನೆಯನ್ನು ಕಂಡಿಲ್ಲ. ಫಲವತ್ತಾದ ಮಣ್ಣೂ ತೊಳೆದು ಹೋಯ್ತು. ನಂಜಾಗಿರುವ ಮಣ್ಣಿಗೆ ಎರಡು ವರ್ಷಗಳಿಂದ ಮೇಲು ಗೊಬ್ಬರ ನಿರಂತರವಾಗಿ ಹಾಕಿದರೂ ಅಡಿಕೆ ಸಸಿಗಳು ಮೇಲೆ ಏಳುತ್ತಿಲ್ಲ ಎನ್ನುತ್ತಾರೆ.


ಶಂಕರ್‌ ಮೂಲ ಕರಾವಳಿ ಕಡೆಯವರು. ತೀರ್ಥಹಳ್ಳಿ ಕಟ್ಟೆಹಕ್ಲು ಭಾಗದಲ್ಲಿ ಗೇಣಿ ಜಮೀನು ಮಾಡುತ್ತಿದ್ದ ಅವರ ತಂದೆ ಐವತ್ತು ವರ್ಷಗಳ ಹಿಂದೆ ಹೆಗಲತ್ತಿ ಕಾಡಿಗೆ ಬಂದರು.

ಶಂಕರ್‌ ಮಗ ಗುರು ಪ್ರಸಾದ್‌ ಅರಣ್ಯ ಇಲಾಖೆಯಲ್ಲಿ ವಾಚರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಘಟನೆ ಹಿಂದಿನ ದಿನ ರಾತ್ರಿ ಇದೇ ಗುಡ್ಡದಲ್ಲಿದ್ದ ದನಗಳನ್ನು ಮನೆಗೆ ಅಟ್ಟಿಕೊಂಡು ಬಂದು ಮಲಗಿದ್ದರು. ಕೆಲವೇ ಗಂಟೆಗಳಲ್ಲಿ ಗುಡ್ಡವೇ ಜರಿದು ಮನೆ ಎದುರು ಹಾಸಿತ್ತು ಎಂದು ಘಟನೆ ನೆನಪು ಮಾಡಿಕೊಳ್ಳುತ್ತಾರೆ. ತೋಟದ ಬಾವಿಯೇ ಮಣ್ಣು ತುಂಬಿಕೊಂಡು ಬೇಸಿಗೆಯಲ್ಲಿ ಕುಡಿವ ನೀರಿಗೂ ಪರಿತಪಿಸಿದ ಬಗ್ಗೆ ಹೇಳಿಕೊಳ್ಳುತ್ತಾರೆ. ಹೊಲದ ಅಂಚಿನಲ್ಲಿ ಅಗಳ ತೆಗೆದು ನೀರು ಹರಿಸಲು ಬಸಿಗಾಲುವೆ ತರಹ ಮಾಡಿದ್ದು ಬಿಟ್ಟರೆ ಮೂವತ್ತು ಸಾವಿರ ಬೆಳೆ ಪರಿಹಾರ ನೀಡಿದರು ಅಷ್ಟೇ. ಫಲವತ್ತತೆ ಕಳೆದುಕೊಂಡ ಜಮೀನಿಗೆ ಯಾವುದೇ ಪರಿಹಾರ ಕಾಣಲಿಲ್ಲ ಎನ್ನುತ್ತಾರೆ.

ಗುಡ್ಡದ ತಪ್ಪಲಿನಲ್ಲೇ ವಾಸವಿರುವ ದಿವಾಕರ್‌ಗೆ ಅಂದಿನ ಘಟನೆ ಗೊತ್ತಾಗಿದ್ದೇ ಬೆಳಿಗ್ಗೆ ಹತ್ತು ಗಂಟೆಗೆ. ಮಳೆಗೆ ಹಾನಿಯಾದ ಮನೆ ಬುಡದಲ್ಲೇ ಇದ್ದ ತೋಟ ಸುತ್ತು ಹಾಕಿ ಪರಿಶೀಲನೆ ಮಾಡುತ್ತಿದ್ದಾಗ ಊರಿನ ಜನ ಮನೆ ಮೇಲಿನ ಗುಡ್ಡವೇ ಜಾರಿದ್ದು ಎಂದು ಹೇಳಿದ್ದರು. ಈ ಬಗ್ಗೆ ಮಾತನಾಡಿದ ದಿವಾಕರ್‌ ಸಾಕಷ್ಟು ಜನ ಬಂದರು. ಸಂಶೋಧಕರು ಭೇಟಿ ನೀಡಿದರು. ಯಾರನ್ನೋ ಮಾತನಾಡಿಸಿಕೊಂಡು, ಏನನ್ನೋ ಬರೆದುಕೊಂಡು ಹೋದರು. ಪರಿಹಾರವೂ ಸಮರ್ಪಕವಾಗಿ ಸಿಗಲಿಲ್ಲ ಎಂದು ಹೇಳಿದರು. ಗುಡ್ಡದ ತಪ್ಪಲಿನಲ್ಲಿರುವ ದಿವಾಕರ್‌ ಇನ್ನೆಂದೂ ಈ ತರಹದ ಘಟನೆ ಮರುಕಳಿಸದೇ ಇದ್ದರೆ ಸಾಕು ಎನ್ನುತ್ತಾರೆ.

ಗೋಂಡಾರಣ್ಯದಂತಿದ್ದ ಹೆಗಲತ್ತಿ ಗ್ರಾಮದಲ್ಲಿ ಇಂದಿಗೂ ಭೂ ಹಕ್ಕಿನ ಹೋರಾಟ ನಡೆದುಕೊಂಡು ಬಂದಿದೆ. ಗುಡ್ಡ ಕುಸಿತ ಪ್ರಕರಣ ಇಂದಿಗೂ ಕೌತುಕವಾಗಿಯೇ ಉಳಿದಿದೆ.

Tags:    

Similar News