ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ: ಶಾಲಾ ಕಾಲೇಜುಗಳಿಗೆ ರಜೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಗಾಳಿ ಮಳೆಯಾಗುತ್ತಿದ್ದು, ಭದ್ರಾ, ತುಂಗಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.;
ರಾಜ್ಯದಲ್ಲಿ ಜುಲೈ 10 ರವರೆಗೆ ಭಾರೀ ಮಳೆಯಾಗಲಿದೆ.
ರಾಜ್ಯದ ಕರಾವಳಿ, ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು. ಜುಲೈ 10ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಲೆನಾಡಿನ ನದಿಗಳು ತುಂಬಿ ಹರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಗಾಳಿ ಮಳೆಯಾಗುತ್ತಿದ್ದು, ಭದ್ರಾ, ತುಂಗಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು (ಜುಲೈ 5) ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ ಈಗಾಗಲೇ ಮುಂಗಾರು ಮಳೆ ಚುರುಕುಗೊಂಡಿದ್ದು, ಕೆಲವೆಡೆ ನೀರು ನಿಂತಿದೆ, ರಸ್ತೆಗಳು ಜಲಾವೃತವಾಗಿವೆ. ಹಲವೆಡೆ ಭೂಕುಸಿತದ ಆತಂಕವಿದೆ. ಆಯಾ ಜಿಲ್ಲಾಡಳಿತಗಳು ನದಿ ತೀರದ ಜನರಿಗೆ ಎಚ್ಚರಿಕೆ ನೀಡಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ. ಕರಾವಳಿ ಪ್ರದೇಶದಲ್ಲಿ ಸಾಧಾರಣ ಗಾಳಿಯೊಂದಿಗೆ ಗಂಟೆಗೆ 40 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶಾಲೆಗಳಿಗೆ ರಜೆ ಘೊಷಣೆ
ಭಾರೀ ಮಳೆ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು, ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್ಆರ್ ಪುರ ತಾಲೂಕಿನಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಜೋಯಿಡಾ, ಸಿದ್ದಾಪುರ ತಾಲೂಕಿನಲ್ಲಿ ಶಾಲೆಗಳಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ ತಾಲೂಕಿನಾದ್ಯಂತ ಭಾರೀ ಮಳೆ ಹಿನ್ನೆಲೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಎಲ್ಲೆಲ್ಲಿ ಮಳೆ ಅಲರ್ಟ್
ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಜುಲೈ 6 ಮತ್ತು 7 ರಂದು ಕರಾವಳಿಗೆ ಆರೆಂಜ್ ಅಲರ್ಟ್ ಹಾಗೂ ಜುಲೈ 11 ರವರೆಗೆ ಯೆಲ್ಲೋ ಅಲರ್ಟ್ ಮುಂದುವರೆಯಲಿದೆ. ಬೆಳಗಾವಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸೋಮವಾರವೂ ಇದೇ ರೀತಿ ಮಳೆ ಮುಂದುವರೆಯುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಮಳೆ ಸಾಧ್ಯತೆ
ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಬೆಂಗಳೂರು ನಗರದಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಚಾಮರಾಜನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ ಮತ್ತು ಬೀದರ್ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಕೊಡಗಿನಲ್ಲಿ ಭೂಕುಸಿತದ ಭೀತಿ
ಅವಧಿಗೂ ಮುನ್ನ ಮುಂಗಾರು ಆರಂಭವಾಗಿದ್ದು ಕೊಡಗಿನಲ್ಲಿ ವಾಡಿಕೆಗೂ ಮೀರಿ ಮಳೆಯಾಗುತ್ತಿದೆ. ಹೀಗಾಗಿ ಭೂಕುಸಿತದ ಭೀತಿ ಉಂಟಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಮುಂಜಾಗೃತ ಕ್ರಮ ಕೈಗೊಂಡಿದೆ. ಎನ್‌ಡಿಆರ್‌ಎಫ್ ಹಾಗೂ ಜಿಲ್ಲಾಡಳಿತ ಜಿಲ್ಲೆಯ 14 ಹೋಬಳಿಗಳ ಹಲವು ಗ್ರಾಮ ಅಥವಾ ವಾರ್ಡ್‌ಗಳನ್ನು ಭೂಕುಸಿತ, ಪ್ರವಾಹ ಅಪಾಯವಿರುವ ಪ್ರದೇಶಗಳೆಂದು ಗುರುತಿಸಿದೆ. ಮಡಿಕೇರಿ ತಾಲೂಕಿನ ಸಂಪಾಜೆ, ಭಾಗಮಂಡಲ, ನಾಪೋಕ್ಲು, ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ಬಾಳೆಲೆ, ಹುದಿಕೇರಿ, ಸೋಮವಾರಪೇಟೆ, ಶಾಂತಳ್ಳಿ, ಕೊಡ್ಲಿಪೇಟೆ, ಸುಂಟಿಕೊಪ್ಪ ಹಾಗೂ ಕುಶಾಲನಗರ ವ್ಯಾಪ್ತಿಯ ಕೆಲ ಬಡಾವಣೆ ಹಾಗೂ ಗ್ರಾಮಗಳನ್ನು ಪ್ರವಾಹ ಪೀಡಿತ ಅಥವಾ ಭೂಕುಸಿತ ಅಪಾಯವಿರುವ ಸ್ಥಳಗಳೆಂದು ಗುರುತಿಸಲಾಗಿದೆ.