ಮೇಘಸ್ಫೋಟ | ಪಶ್ಚಿಮಘಟ್ಟದ ​​ತಪ್ಪಲಿನಲ್ಲಿ ದಿಢೀರ್ ಪ್ರವಾಹ, ವೃದ್ಧೆ ಬಲಿ

ಕಬ್ಬಿನಾಲೆ ಭಾಗದ ಪರ್ವತ ಸಾಲಿನಲ್ಲಿ ಮೇಘ ಸ್ಫೋಟವಾಗಿ ಈ ಭೀಕರ ಪ್ರವಾಹ ಸೃಷ್ಟಿಯಾಗಿದ್ದು, ಜೀವಮಾನದಲ್ಲಿ ಇಂತಹ ಭೀಕರ ಪ್ರವಾಹ ನೋಡಿಲ್ಲವೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

Update: 2024-10-07 08:40 GMT
ಹೆಬ್ರಿಯಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿಹೋದ ಕಾರು

ಭಾನುವಾರ ಸುರಿದ ದಿಢೀರ್ ಮಳೆಗೆ ಹೆಬ್ರಿ ತಾಲೂಕಿನ ಹೆಬ್ರಿಯ ಮುದ್ರಾಡಿ ಗ್ರಾಮದ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ. ಮಧ್ಯಾಹ್ನ ಏಕಾಏಕಿ ಮೇಘಸ್ಫೋಟ ಸಂಭವಿಸಿದ್ದು, ಭಾರೀ ಪ್ರವಾಹದಲ್ಲಿ ಚಂದ್ರಾ ಗೌಡ್ತಿ(85) ಎಂಬ ವೃದ್ಧೆ ಕೊಚ್ಚಿ ಹೋಗಿದ್ದಾರೆ. ಸೋಮವಾರ ಮುಂಜಾನೆ ಬಲ್ಲಾಡಿ ಪರಿಸರದ ಭತ್ತದ ಗದ್ದೆ ಬಳಿ ವೃದ್ಧೆ ಶವ ಪತ್ತೆಯಾಗಿದೆ. 

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಭಾರಿ ಮಳಯಾಗುತ್ತಿದ್ದು, ಆಗುಂಬೆ ಘಾಟ್, ಹೆಬ್ರಿ ಬೆಟ್ಟದ ತಪ್ಪಲಿನಲ್ಲಿ ಧಾರಾಕಾರ ಸುರಿದ ಮಳೆಗೆ ಉಡುಪಿ ಜಿಲ್ಲೆ ಹೆಬ್ರಿಯ ನದಿ ತೊರೆಗಳು ತುಂಬಿ ಹರಿದಿದೆ. ಕಬ್ಬಿನಾಲೆ ಬೆಟ್ಟದ ಪರಿಸರದಲ್ಲಿ ವಿಪರೀತ ಮಳೆಯಾಗಿದ್ದು, ಮಧ್ಯಾಹ್ನ 2.30 ರಿಂದ 4 ಗಂಟೆಯವರೆಗೆ ಸುರಿದ ಭಾರೀ ಮಳೆಗೆ ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಕೆಲಕಾಲ ಜಲಾವೃತಗೊಂಡಿತ್ತು.

ಕಾಂತಾರಬೈಲು 4, ಹೊಸಕಂಬಳ 1, ಕೆಳಕಿಲದಲ್ಲಿ 3 ಮನೆಗೆ ನೀರು ನುಗ್ಗಿತ್ತು. ಸದ್ಯ ಮಳೆ ಇಳಿಮುಖ ಕಂಡಿದ್ದು, ನದಿ ತೊರೆಯಲ್ಲಿ ನೀರು ತಗ್ಗಿವೆ. ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲು ಉಡುಪಿ ಜಿಲ್ಲಾಡಳಿತ ಆದೇಶಿಸಿದೆ. 

ಹೆಬ್ರಿ ತಾಲೂಕಿನ ಬಲ್ಲಾಡಿಯ ಬಮ್ಮಗುಂಡಿ ಈಶ್ವರನಗರ ಸಮೀಪದ ಹೊಳೆ ಉಕ್ಕಿ ಹರಿದಿದ್ದು ಭಾರೀ ನೀರು ಮನೆಗೆ ನುಗ್ಗಿದೆ. ಭಾರೀ ನೆರೆಯಿಂದ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಕಾರು ಹಾಗೂ ಎರಡು ಬೈಕ್‌ಗಳು ಕೊಚ್ಚಿಕೊಂಡು ಹೋಗಿವೆ.

ಪಶ್ಚಿಮಘಟ್ಟ ಸಾಲಿನಲ್ಲಿ ಮಧ್ಯಾಹ್ನ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದ್ದು, ಇದರಿಂದಾಗಿ ನದಿಯಲ್ಲಿ ಹಠಾತ್ ಆಗಿ ಕೆಸರು ಮಿಶ್ರಿತ ನೀರು ಏರಿಕೆಯಾಗಿದೆ. ಕೇರಳ ಮೂಲದ ವ್ಯಕ್ತಿಗೆ ಸೇರಿದ್ದ ರಬ್ಬರ್ ತೋಟಕ್ಕೆ ನುಗ್ಗಿದ ನೀರು ಅಲ್ಲಿಂದ ಮನೆಗೆ ನುಗ್ಗಿ ಅಂಗಳದಲ್ಲಿ ನಿಲ್ಲಿಸಿದ್ದ ಆಲ್ಲೋ ಕಾರು ಹಾಗೂ ಎರಡು ಬೈಕ್ ಗಳನ್ನು ಕೊಚ್ಚಿಕೊಂಡುಹೋಗಿದೆ.

ಪ್ರವಾಹದ ಭೀಕರತೆ ಸ್ಥಳೀಯರು ಮಾಡಿರುವ ವಿಡಿಯೋವೊಂದರಲ್ಲಿ ಸೆರೆಯಾಗಿದೆ. ಇದಲ್ಲದೇ ಹೊಸಕಂಬ್ಬ ಕೃಷ್ಣ ಪೂಜಾರಿ ಎಂಬವರ ಮನೆಯಲ್ಲಿ ನಿಲ್ಲಿಸಿದ್ದ ಓಮ್ಮಿ ಕಾರು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಮಧ್ಯಾಹ್ನ 2.25ಕ್ಕೆ ಆರಂಭವಾದ ಮಳೆ 5 ಗಂಟೆವರೆಗೆ ಮುಂದುವರಿದಿತ್ತು. 

ಮುದ್ರಾಡಿ ಸುತ್ತಮುತ್ತಲಿನ ಹೊಸ ಕಂಬಳ, ಕಂಠಾರಬೈಲ್, ಕೆಳಕಿಲ ಎಂಬಲ್ಲಿನ ಎಂಟು ಮನೆಗಳಿಗೆ ನೀರು ನುಗ್ಗಿದೆ. ಆ ಮನೆಗಳ ನಿವಾಸಿಗಳನ್ನು ಹಗ್ಗ ಮತ್ತು ಏಣಿ ಬಳಸಿ ಸ್ಥಳಾಂತರಿಸಲಾಯಿತು.

 ಮನೆಗಳ ನಿವಾಸಿಗಳನ್ನು ಹಗ್ಗ ಮತ್ತು ಏಣಿ ಬಳಸಿ ಸ್ಥಳಾಂತರಿಸಲಾಯಿತು.

ಕಬ್ಬಿನಾಲೆ ಭಾಗದ ಪರ್ವತ ಸಾಲಿನಲ್ಲಿ ಮೇಘ ಸ್ಫೋಟವಾಗಿ ಈ ಭೀಕರ ಪ್ರವಾಹ ಸೃಷ್ಟಿಯಾಗಿದ್ದು, ಜೀವಮಾನದಲ್ಲಿ ಇಂತಹ ಭೀಕರ ಪ್ರವಾಹ ನಾವು ನೋಡಿಲ್ಲವೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಪರಿಸದಲ್ಲಿ ಭಾರಿ ಗಾಳಿಗೆ ಮರಗಳು ಬಿದ್ದಿದ್ದು 25ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗುರುಳಿವೆ. ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಬಮ್ಮಗುಂಡಿ ನದಿಯ ಸುತ್ತಮುತ್ತಲಿನ ಪ್ರದೇಶದ ಒಟ್ಟು 150 ಎಕರೆ ಕಟಾವಿಗೆ ಬಂದಿದ್ದ ಬತ್ತ, ರಬ್ಬರ್, ಅಡಕೆ, ತೆಂಗು, ಬಾಳೆ ತೋಟ ಸಂಪೂರ್ಣ ನಾಶವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ವಿಪತ್ತು ನಿರ್ವಹಣಾ ತಂಡಗಳು ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಓಟಕ್ಕಿತ್ತ ಪ್ರವಾಸಿಗರು

ಕಬ್ಬಿನಾಲೆ ಅಬ್ಬಿ ಜಲಪಾತ ವೀಕ್ಷಿಸುತಿದ್ದ ವೇಳೆ ಜಲಪಾತದ ನೀರು ಭಾರೀ ಏರಿಕೆಯಾಯಿತು ಹಾಗೂ ಒಮ್ಮೆಲೆ ಸುರಿದ ಭಾರಿ ಮಳೆಯನ್ನು ಗಮನಿಸಿ ಪ್ರವಾಸಿಗರು ಸ್ಥಳದಿಂದ ಓಡಿ ಪಾರಾಗಿದ್ದಾರೆ. ಕಬ್ಬಿನಾಲೆ ಸೇತುವೆ ಮೇಲೆಯೂ ಪ್ರವಾಹದ ನೀರು ಹರಿದಿದ್ದು ಸಂಪೂರ್ಣ ಜಲಾವೃತವಾಗಿತ್ತು. 

ಭಾರೀ ಮಳೆ ಮುನ್ನೆಚ್ಚರಿಕೆ

ರಾಜ್ಯದ 15 ಜಿಲ್ಲೆಗಳಲ್ಲಿ ಅಕ್ಟೋಬರ್ 10ರವರೆಗೂ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ ಐದು ದಿನಗಳ ಕಾಲ ರಾಜ್ಯದ ಕರಾವಳಿ ಮತ್ತು ಕರಾವಳಿಗೆ ಹೊಂದಿಕೊಂಡಿರುವ ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನಲ್ಲಿ ಗುಡುಗು ಮಿಂಚು ಮತ್ತು ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಶಿವಮೊಗ್ಗ, ವಿಜಯನಗರ, ಕೋಲಾರದಲ್ಲಿ ಸಾಧಾರಣ ಮಳೆಯಾಗಲಿದೆ. ನಾಪೋಕ್ಲು, ಬಂಡೀಪುರ, ಕಾರ್ಕಳ, ನರಗುಂದ, ರಾಮನಗರ, ಮಸ್ಕಿ, ಕನಕಪುರ, ಮಾಗಡಿ, ಎಚ್​ಡಿ ಕೋಟೆ, ಮುಂಡಗೋಡು, ಕುಮಟಾ, ಲಕ್ಷ್ಮೇಶ್ವರ, ಕೊಟ್ಟಿಗೆಹಾರ, ಹಾಸನ, ಹೊಸಕೋಟೆ, ಶ್ರವಣಬೆಳಗೊಳ, ಕೋಲಾರ, ತ್ಯಾಗರ್ತಿ, ಪೊನ್ನಂಪೇಟೆ, ಹೊನ್ನಾಳಿ, ಯಲ್ಲಾಪುರ, ಸುಳ್ಯ, ಕಿರವತ್ತಿ, ಉಪ್ಪಿನಂಗಡಿ, ಗಂಗಾವತಿ, ಮೈಸೂರು, ನಾಗಮಂಗಲದಲ್ಲಿ ಮಳೆಯಾಗಿದೆ.

Tags:    

Similar News