ಕೆಜಿಎಫ್‌ನಲ್ಲಿ ಬಿಇಎಂಎಲ್ ನೌಕರರ ಧರಣಿ | ನಾಲ್ಕು ದಿನದಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಎಚ್‌ಡಿಕೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಬಿಇಎಂಎಲ್ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತೇನೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎಂಬ ಭರವಸೆ ಇದೆ ಎಂದು ಎಚ್‌ಡಿಕೆ ಹೇಳಿದರು;
ಬಿಇಎಂಎಲ್ ಹೊರಗುತ್ತಿಗೆ ಕಾರ್ಮಿಕರ ಸಮಸ್ಯೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸಿ, ಗುರುವಾರದೊಳಗೆ ನಿಮ್ಮನ್ನು ಮತ್ತೆ ಭೇಟಿಯಾಗುತ್ತೇನೆ. ಎಲ್ಲರೂ ಕೆಲಸಕ್ಕೆ ಹಾಜರಾಗಿ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ಕೆಜಿಎಫ್ ನಲ್ಲಿ ಕಳೆದ 13 ದಿನಗಳಿಂದ ಕಾರ್ಮಿಕರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಕೋಲಾರ ಸಂಸದ ಮಲ್ಲೇಶ್ ಬಾಬು, ಶಾಸಕರಾದ ವೆಂಕಟ ಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್ ಅವರೊಂದಿಗೆ ಭೇಟಿ ನೀಡಿ ನೀಡಿ ಧರಣಿ ನಿರತರೊಂದಿಗೆ ಮಾತುಕತೆ ನಡೆಸಿದರು.
ನಿಮ್ಮ ಬೇಡಿಕೆಗಳ ಬಗ್ಗೆ ಈಗಾಗಲೇ ಕಂಪನಿಯ ಸಿಎಂಡಿ (ಅಧ್ಯಕ್ಷ - ವ್ಯವಸ್ಥಾಪಕ ನಿರ್ದೇಶಕ) ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಅವರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ನಾನು ನಾಳೆ (ಸೋಮವಾರ) ಬೆಳಿಗ್ಗೆ ದೆಹಲಿಗೆ ತೆರಳುತ್ತಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತೇನೆ. ಸಿಂಗ್ ಅವರಿಗೆ ಕರ್ನಾಟಕದ ಬಗ್ಗೆ ವಿಶೇಷ ಕಾಳಜಿ ಇದ್ದು, ನಿಮ್ಮ ಸಮಸ್ಯೆಗಳಿಗೆ ಖಂಡಿತಾ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎನ್ನುವ ಭರವಸೆ ಇದೆ ಎಂದರು ಸಚಿವರು.
ಬಿಇಎಂಎಲ್ ಕೇಂದ್ರ ಸರ್ಕಾರಿ ಸ್ವಾಮ್ಯದ ಬೃಹತ್ ಕೈಗಾರಿಕೆ. 13 ದಿನಗಳಿಂದ ಧರಣಿಗೆ ಅವಕಾಶ ಮಾಡಿಕೊಡುವ ಪರಿಸ್ಥಿತಿ ಸೃಷ್ಟಿ ಆಗಿದ್ದೇ ಕಳವಳಕಾರಿ. ಇದು ಕಂಪನಿಗಾಗಲಿ, ದೇಶಕ್ಕಾಗಲಿ ಅಥವಾ ಕಾರ್ಮಿಕರ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಆದ್ದರಿಂದ ನನ್ನ ಮಾತಿನ ಮೇಲೆ ಭರವಸೆ ಇಡಿ. ತಕ್ಷಣ ನಿಮ್ಮ ಧರಣಿ ಅಂತ್ಯಗೊಳಿಸಿ ಕೆಲಸಕ್ಕೆ ಹಾಜರಾಗಿ. ನಾನು ಗುರುವಾರದೊಳಗೆ ರಕ್ಷಣಾ ಸಚಿವರ ಜತೆ ಚರ್ಚೆ ನಡೆಸಿದ ಬಳಿಕ ಶುಕ್ರವಾರ ಬೆಳಿಗ್ಗೆ ನಾನೇ ಸ್ವತಃ ಇಲ್ಲಿಗೆ ಬಂದು ನಿಮ್ಮೆಲ್ಲರಿಗೂ ಒಳ್ಳೆಯ ಸುದ್ದಿ ಕೊಡುತ್ತೇನೆ ಎಂದು ಮನವಿ ಮಾಡಿದರು.
ಸಚಿವರ ಮಾತಿಗೆ ಸ್ಪಂದಿಸಿದ ಕಾರ್ಮಿಕರು; ಈ ಕೂಡಲೇ ನಾವು ಕೆಲಸಕ್ಕೆ ಹಾಜರಾಗಬೇಕು ಎನ್ನುವ ನಿಮ್ಮ ಒತ್ತಾಸೆಯ ಬಗ್ಗೆ ಚರ್ಚೆ ನಡೆಸುತ್ತೇವೆ. ಇಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಕಳಕಳಿಗೆ ವಿರುದ್ಧವಾದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.
ಚುನಾವಣೆ ಮುಗಿದ ನಂತರ ಧರಣಿ ಸ್ಥಳಕ್ಕೆ ಬಂದ ಎಚ್ಡಿಕೆ
ಕೆಜಿಎಫ್‌ನಲ್ಲಿ 13 ದಿನಗಳಿಂದ ಕಾರ್ಮಿಕರು ಧರಣಿ ನಡೆಸುತ್ತಿದ್ದರೂ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ನಿರತರಾಗಿದ್ದರು. ನ.13 ರಂದು ಮತದಾನ ಮುಗಿದು ನಾಲ್ಕು ದಿನಗಳಾದ ಬಳಿಕ ಧರಣಿ ನಿರತರ ಭೇಟಿಗೆ ಬಂದ ಸಚಿವರ ಕ್ರಮ ಹಲವರ ಆಕ್ಷೇಪಕ್ಕೂ ಕಾರಣವಾಗಿದೆ.
ಜನರ ತೆರಿಗೆ ದುಡ್ಡು ಲೂಟಿ: ಎಚ್ಡಿಕೆ ಕಿಡಿ
ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿದೆ ಎಂದು ನಾನು ಹೇಳುವುದಿಲ್ಲ, ಬದಲಿಗೆ ಆರ್ಥಿಕ ಅದಕ್ಷತೆ, ಅಸಮರ್ಪಕ ನಿರ್ವಹಣೆಯಿಂದ ಖಜಾನೆ ಬರಿದಾಗಿ ರಾಜ್ಯವು ಸಾಲದ ದವಡೆಗೆ ಸಿಲುಕಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಕೋಲಾರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಆಗುತ್ತಿದೆ. ಅಲ್ಲದೆ ನಿರಂತರವಾಗಿ ತೆರಿಗೆ, ಶುಲ್ಕ ಹೆಚ್ಚಿಸುತ್ತಾ ಬಂದಿದೆ. ಗ್ಯಾರಂಟಿಗಳಿಗೆ ವರ್ಷಕ್ಕೆ ₹52,000 ರಿಂದ ₹60,000 ಕೋಟಿ ಆಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಸಂಗ್ರಹ ಆಗುತ್ತಿರುವ ಜನರ ತೆರಿಗೆ ದುಡ್ಡು ಎಲ್ಲಿ ಹೋಗುತ್ತಿದೆ? ಇದಕ್ಕೆ ಉತ್ತರ ಕೊಡಬೇಕಲ್ಲವೇ? ಎಂದು ಪ್ರಶ್ನಿಸಿದರು.
ಮುದ್ರಾಂಕ ಮತ್ತು ನೋಂದಣಿ ಶುಲ್ಕ ಏರಿಕೆ, ಮದ್ಯದ ದರ ಹೆಚ್ಚಳ, ವಿದ್ಯುತ್ ದುಬಾರಿಯಾಗುತ್ತಿದೆ. ಪ್ರತಿಯೊಂದಕ್ಕೂ ಗ್ಯಾರಂಟಿಗಳ ನೆಪ ಮಾಡಿಕೊಂಡು ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಬೆಂಗಳೂರು ರಸ್ತೆಗಳಲ್ಲಿ ಗುಂಡಿ ಮುಚ್ಚಲು ಹಣ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ. ಹಾಗಾದರೆ, ಜನರಿಂದ ತೆರಿಗೆ ರೂಪದಲ್ಲಿ ವಸೂಲಿ ಮಾಡಿದ ಹಣ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದರು.
11 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಕಾರ್ಡುಗಳನ್ನಾಗಿ ಮಾಡಲಾಗುತ್ತಿದೆ. ಅಂದರೆ 11 ಲಕ್ಷ ಕುಟುಂಬಗಳ ಅನ್ನವನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆ. ಈ ಬದಲಾವಣೆಗೆ ಕೈ ಹಾಕಿರುವ ಸರ್ಕಾರದ ಬಗ್ಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಎಲ್ಲೂ ರಾಜ್ಯಕ್ಕೆ ಕೊಡುತ್ತಿರುವ ಅಕ್ಕಿ ಕಡಿತ ಮಾಡಿಲ್ಲ. ಇವರು ಮಾಡಿರುವ ತಪ್ಪಿನಿಂದ ಎಪಿ ಎಲ್ ಕಾರ್ಡುದಾರರು ಇನ್ನು ಮುಂದೆ ಹಣ ಕೊಟ್ಟು ಅಕ್ಕಿ ಖರೀದಿ ಮಾಡಬೇಕು, ಅಲ್ಲವೇ? ಎಂದು ಕೇಳಿದರು.
ವಕ್ಫ್ ವಿವಾದಕ್ಕೆ ಸರ್ಕಾರವೇ ತೆರೆ ಎಳೆಯಲಿ
ರೈತರ ಆಸ್ತಿಗಳು, ದೇವಾಲಯಗಳು ವಕ್ಫ್ ಆಸ್ತಿ ಎಂದು ಬರುತ್ತಿರುವ ಬಗ್ಗೆ ಸರ್ಕಾರವೇ ಕಾರಣ. ಈ ವಿವಾದಕ್ಕೆ ಕೂಡಲೇ ತೆರೆ ಎಳೆಯಬೇಕು. ಸ್ವತಃ ಮುಖ್ಯಮಂತ್ರಿ ಅವರೇ ಸೂಚನೆ ಕೊಟ್ಟ ಕಾರಣ ಇಷ್ಟೆಲ್ಲಾ ಮಾಡುತ್ತಿದ್ದೇವೆ ಎಂದು ವಕ್ಫ್ ಸಚಿವರೇ ಹೇಳಿದ್ದಾರೆ. ಅವರ ಹೇಳಿಕೆಯ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದೆ. ಹೀಗಿದ್ದ ಮೇಲೆ ಸ್ವತಃ ಮುಖ್ಯಮಂತ್ರಿ ಅವರೇ ಈ ಗೊಂದಲ ಸರಿ ಮಾಡಬೇಕು ಎಂದು ಒತ್ತಾಯ ಮಾಡಿದರು.