HMT Land Issue | ಎಚ್‌ಎಂಟಿ ಜಾಗಕ್ಕೆ ಈಶ್ವರ್ ಖಂಡ್ರೆ ಅತಿಕ್ರಮ ಪ್ರವೇಶ- ಎಚ್‌ಡಿಕೆ ಆರೋಪ
ಎಚ್ಎಂಟಿ ಆವರಣದಲ್ಲಿ ಸಚಿವರು ಭೇಟಿ ನೀಡಿದ್ದ ಜಾಗ 2002ರಲ್ಲಿಯೇ ಕೆನರಾ ಬ್ಯಾಂಕಿಗೆ ನೀಡಲಾಗಿದೆ. ಖಂಡ್ರೆ ಅವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಎಚ್ಎಂಟಿ ಜಾಗ ತೆರವು ಸಂಬಂಧ ಈಗಾಗಲೇ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ.;
ಪೀಣ್ಯ-ಜಾಲಹಳ್ಳಿ ಬಳಿಯ ಎಚ್ಎಂಟಿ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮಾಹಿತಿ ಹಾಗೂ ಜ್ಞಾನದ ಕೊರತೆ ಇದೆ. ಎರಡು ದಿನಗಳಲ್ಲಿ ದಾಖಲೆ ಸಮೇತ ಮಾಹಿತಿ ಬಹಿರಂಗಪಡಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಚ್ಎಂಟಿ ಆವರಣದಲ್ಲಿ ಸಚಿವರು ಭೇಟಿ ನೀಡಿದ್ದ ಜಾಗ 2002ರಲ್ಲಿಯೇ ಕೆನರಾ ಬ್ಯಾಂಕಿಗೆ ನೀಡಲಾಗಿದೆ. ಖಂಡ್ರೆ ಅವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಎಚ್ಎಂಟಿ ಜಾಗ ತೆರವು ಸಂಬಂಧ ಈಗಾಗಲೇ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರು, ಕೊಡಗು, ಬೆಂಗಳೂರು ಸೇರಿದಂತೆ ಅನೇಕ ಕಡೆ ದೊಡ್ಡ ಪ್ರಮಾಣದಲ್ಲಿ ಅರಣ್ಯ ಭೂಮಿ ಒತ್ತುವರಿ ಆಗಿದೆ. ಅದನ್ನೆಲ್ಲ ಬಿಟ್ಟು ಅರಣ್ಯ ಸಚಿವರು ಎಚ್ಎಂಟಿ ಮೇಲೆ ಮಾತ್ರ ಕಾಳಜಿ ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮುಡಾ ದಾಖಲೆಗಳೇ ಮಂಗಮಾಯ
ಮುಡಾ ಹಗರಣದಲ್ಲಿ ಇಡಿ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು; ಕಳೆದ ನಾಲ್ಕೈದು ವಾರಗಳಿಂದ ಇಡಿ ಅಧಿಕಾರಿಗಳು ಹಲವಾರು ವ್ಯಕ್ತಿಗಳ ಮೇಲೆ ದಾಳಿ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ದಾಖಲೆಗಳು ಮಂಗಮಾಯ ಆಗಿವೆ ಎಂದು ಹೇಳಲಾಗುತ್ತಿದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಮಾತ್ರ ಸತ್ಯ ಮೇವ ಜಯತೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಜಾಹೀರಾತಿನಲ್ಲೂ ಸತ್ಯಮೇವ ಜಯತೇ, ಭಾಷಣದಲ್ಲೂ ಸತ್ಯಮೇವ ಜಯತೇ ಎನ್ನುತ್ತಿದ್ದಾರೆ. ಈಗ ಎಲ್ಲಾ ಸತ್ಯ ಮೇವ ಜಯತೆಗಳ ಅಸಲಿ ವಿಷಯ ಹೊರಗಡೆ ಬರುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ನಾನೇ ಅವರ ದೊಡ್ಡ ಟಾರ್ಗೆಟ್
ಉಪ ಚುನಾಣೆಯಲ್ಲಿ ನಿಖಿಲ್ ಸೋಲಿಸಲು ಕಾಂಗ್ರೆಸ್ ಸಾಕಷ್ಟು ಕುತಂತ್ರ ರೂಪಿಸಿದೆ. ಇದರಿಂದ ನನ್ನ ಬೆಳವಣಿಗೆ ಕುಗ್ಗಿಸಬಹುದು ಎಂಬುದು ಅವರ ಲೆಕ್ಕಾಚಾರ. ರಾಜಕೀಯವಾಗಿ ನನ್ನನ್ನು ಮುಗಿಸಲು ಹೊರಟಿದ್ದಾರೆ. ನಾನು ಕೇಂದ್ರ ಮಂತ್ರಿಯಾಗಿರುವುದನ್ನು ಅವರು ಸಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಟಾರ್ಗೆಟ್ ಮುಸ್ಲಿಮರು
ಮುಸ್ಲಿಂ ಮತಗಳಿಗೆ ಎಲ್ಲಾ ರಾಜಕೀಯ ಪಕ್ಷಗಳು ಟಾರ್ಗೆಟ್ ಮಾಡಿವೆ ಎನ್ನುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರು ಯಾವಾಗಲೂ ಟಾರ್ಗೆಟ್ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ಯಾರನ್ನಾದರೂ ಟಾರ್ಗೆಟ್ ಮಾಡಿಕೊಳ್ಳಲಿ. ನಾವು ಮಾತ್ರ ನಮ್ಮ ಕೆಲಸಗಳ ಆಧಾರದ ಮೇಲೆ ಮತ ಕೊಡಿ ಎಂದು ಕೇಳುತ್ತೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಶಿಗ್ಗಾಂವಿ ಕಾಂಗ್ರೆಸ್ ಮುಖಂಡ ಸೈಯದ್ ಅಜೀಂಪೀರ್ ಖಾದ್ರಿ ಅವರನ್ನು ಕಿಡ್ನಾಪ್ ಮಾಡಿ, ಅವರನ್ನು ಕಳೆದ ಒಂದು ವಾರದಿಂದ ಕೂಡಿ ಹಾಕಿ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ನಿಂದ ಕೂಪನ್ ಕುತಂತ್ರ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕೂಪನ್ ಷಡ್ಯಂತ್ರ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಕುಮಾರಸ್ವಾಮಿ ದೂರಿದ್ದಾರೆ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ ಸೇರಿದಂತೆ ರಾಜ್ಯದ ಹಲವಾರು ಕ್ಷೇತ್ರಗಳಲ್ಲಿ ₹3,000,₹5000 ಮೌಲ್ಯದ ಗಿಫ್ಟ್ ಕೂಪನ್ ಹಂಚಲಾಯಿತು. ಚುನಾವಣೆ ಮುಗಿದ ಮೇಲೆ ಆ ಕೂಪನ್ ಗಳನ್ನು ಬೆಂಗಳೂರಿನ ಲುಲು ಮಾಲ್ ಗೆ ಹೋಗಿ ಕೊಡಿ, ಅಲ್ಲಿಗೆ ಹೋಗಿ ನಿಮಗೆ ಬೇಕಾದ ವಸ್ತುವನ್ನು ಖರೀದಿ ಮಾಡಿ ಎಂದು ಆಮಿಷ ಒಡ್ಡಿದ್ದರು. ಇದನ್ನು ನಂಬಿ ಕೂಪನ್ ಹಿಡಿದುಕೊಂಡು ಲುಲು ಮಾಲ್ ಗೆ ಹೋದರೆ ಅಲ್ಲಿ ಕೂಪನ್ ಇಲ್ಲ, ವಸ್ತುಗಳೂ ಇಲ್ಲ ಎಂದು ಕೂಪನ್ ಅಕ್ರಮವನ್ನು ಕೇಂದ್ರ ಸಚಿವರು ಬಿಡಿಸಿಟ್ಟರು.