ಪ್ರಜ್ವಲ್‌ ಲೈಂಗಿಕ ಹಗರಣ | ಮಾಜಿ ಸಚಿವ ಎಚ್‌.ಡಿ ರೇವಣ್ಣ ಬಂಧನ

ತಮ್ಮ ಪುತ್ರ ಪ್ರಜ್ವಲ್‌ ರೇವಣ್ಣನ ಲೈಂಗಿಕ ಹಗರಣದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ರೇವಣ್ಣ ಅವರ ನಿರೀಕ್ಷಣಾ ಜಾಮೀನನ್ನು ಬೆಂಗಳೂರು ನ್ಯಾಯಾಲಯ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ನಿವಾಸದಿಂದಲೇ ವಶಕ್ಕೆ ಪಡೆಯಲಾಗಿತ್ತು. ಈ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿರುವ ನೂರಾರು ಮಹಿಳೆಯರ ಜತೆ ಲೈಂಗಿಕ ಕೃತ್ಯ ನಡೆಸಿ, ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿರುವ ಹಾಗೂ ಕೆಲವರಿಗೆ ಅತ್ಯಾಚಾರವನ್ನೂ ಮಾಡಿರುವ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಲೆಗೆ ಬಿದ್ದಂತಾಗಿದೆ.

Update: 2024-05-04 13:24 GMT

ಮಾಜಿ ಸಚಿವ ಹಾಗೂ ಹೊಳೆನರಸೀಪುರದ ಹಾಲಿ ಶಾಸಕ ಹಾಗೂ ಪೆನ್‌ಡ್ರೈವ್‌ ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್‌ ರೇವಣ್ಣ ತಂದೆ ಎಚ್‌.ಡಿ. ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ತೆಗೆದುಕೊಂಡಿದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಪದ್ಮನಾಭನಗರದ ಮನೆಯಿಂದಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ. 

ಈ ಮೂಲಕ ರಾಜ್ಯದ ರಾಜಕೀಯವನ್ನು ಆಳಿದ್ದ ಜೆಡಿಎಸ್‌ ಪರಮೋಚ್ಛ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಕುಟುಂಬ ತೀವ್ರ ಮುಜುಗರಕ್ಕೆ ಒಳಗಾಗಿದೆ.

ಎಸ್‌ಐಟಿ ಎಸ್‌ಪಿ ಸಿಎ ಸೈಮನ್‌ ನೇತೃತ್ವದ ತಂಡ ದೇವೇಗೌಡರ ಮನೆಯಲ್ಲಿದ್ದ ಎಚ್‌.ಡಿ. ರೇವಣ್ಣ ಅವರನ್ನು ವಶಕ್ಕೆ ತೆಗೆದುಕೊಂಡಿದೆ.  ಸಂಜೆ ರೇವಣ್ಣ ಅವರನ್ನು ವಶಕ್ಕೆ  ತೆಗೆದುಕೊಂಡಿದ್ದ ಎಚ್‌ಡಿ ರೇವಣ್ಣ ಅವರ ಬಂಧನ ಪ್ರಕ್ರಿಯೆಯನ್ನು ರಾತ್ರಿ  ವಿಶೇಷ ತನಿಖಾ ತಂಡ (ಎಸ್‌ಐಟಿ) ಖಚಿತಪಡಿಸಿದೆ. ಬಂಧನದ ಬಳಿಕ ರೇವಣ್ಣ ಅವರನ್ನು ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಬಳಿಕ ಸಿಐಡಿಗೆ ಕರೆತಂದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಮ್ಮ ಪುತ್ರನ ಲೈಂಗಿಕ ಹಗರಣದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ರೇವಣ್ಣ ಅವರ ನಿರೀಕ್ಷಣಾ ಜಾಮೀನನ್ನು ಬೆಂಗಳೂರು ನ್ಯಾಯಾಲಯ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿರುವ ನೂರಾರು ಮಹಿಳೆಯರ ಜತೆ ಲೈಂಗಿಕ ಕೃತ್ಯ ನಡೆಸಿ, ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿರುವ ಹಾಗೂ ಕೆಲವರಿಗೆ ಅತ್ಯಾಚಾರವನ್ನೂ ಮಾಡಿರುವ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯೊಬ್ಬರು ಬಲೆಗೆ ಬಿದ್ದಂತಾಗಿದೆ. ಈ ಮೊದಲು ರೇವಣ್ಣ ಅವರ ಸಹಾಯಕ ಸತೀಶ್‌ ಬಾಬಣ್ಣನನ್ನು ಬಂಧಿಸಲಾಗಿತ್ತು.

ದೇವೇಗೌಡರ ಮೊದಲ ಪುತ್ರ ಎಚ್‌.ಡಿ. ರೇವಣ್ಣ ಅವರ ಹೆಸರು ಪುತ್ರ ಪ್ರಜ್ವಲ್‌ ರೇವಣ್ಣ ಜತೆ ಲೈಂಗಿಕ ಹಗರಣ ಪ್ರಕರಣದಲ್ಲಿ ತಳಕುಹಾಕಿಕೊಂಡಿತ್ತು. ಬಳಿಕ ಸಂತ್ರಸ್ತೆಯೊಬ್ಬರು ಹಾಸನದ ಹೊಳೆನರಸೀಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತಮಗೆ ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್‌ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪ್ರಕರಣ ದಾಖಲಿಸಿದ್ದರು. ಮಹಿಳೆಯ ಘನತೆಗೆ ಧಕ್ಕೆ ಪ್ರಕರಣದಲ್ಲಿ ರೇವಣ್ಣ ಮೊದಲ ಆರೋಪಿಯಾಗಿದ್ದರು.

ಆದರೆ ಮೈಸೂರು ಕೆ.ಆರ್‌. ನಗರದಲ್ಲಿ ದಾಖಲಾದ ಪ್ರಕರಣದಲ್ಲಿ ಪ್ರಜ್ವಲ್‌ನಿಂದ ಲೈಂಗಿಕ ಕಿರುಕುಳಕ್ಕೆ ಈಡಾದ ಪ್ರಕರಣದ ಸಂತ್ರೆಸ್ತೆಯೊಬ್ಬರನ್ನು ರೇವಣ್ಣ ಅವರ ಆಣತಿ ಮೇರೆಗೆ ಅವರ ಸಹಾಯಕ ಸತೀಶ್‌ ಬಾಬಣ್ಣ ಅಪಹರಣ ಮಾಡಿದ ಆರೋಪವಿತ್ತು. ಸಂತ್ರಸ್ತೆಯ ಪುತ್ರ ನೀಡಿದ ದೂರಿನಲ್ಲಿ ರೇವಣ್ಣ ಮೊದಲ ಆರೋಪಿ. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ರೇವಣ್ಣ ನ್ಯಾಯಾಲಯದ ಮೊರೆ ಹೋಗಿದ್ದಳು.

ಶನಿವಾರ ಎಸ್‌ಐಟಿ ಪೊಲೀಸರು ಹುಣಸೂರು ಬಳಿಯ ತೋಟದ ಕಾಳೇನಹಳ್ಳಿ ಬಳಿ ಅಪಹರಣಕ್ಕೆ ಒಳಗಾದ ಮಹಿಳೆಯನ್ನು ರಕ್ಷಿಸಿರುವುದು ಪ್ರಕರಣಕ್ಕೆ ಇನ್ನೊಂದು ಆಯಾಮವನ್ನು ಸೃಷ್ಟಿಸಿದೆ. ಆಕೆಯ ಹೇಳಿಕೆಯೂ ರೇವಣ್ಣ ಅವರಿಗೆ ಕಾನೂನು ಕಂಟಕ ತರಲಿದೆ. ವಿಶೇಷವೆಂದರೆ ಅಪಹರಣ ಮಾಡಿದ ರೇವಣ್ಣ ಸಹಾಯಕ ಸತೀಶ್‌ ಬಾಬು ಅವರು ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ಪತ್ನಿಯಾಗಿರುವುದು ರೇವಣ್ಣ ಕುಟುಂಬಕ್ಕೂ ಪ್ರಜ್ವಲ್‌ ಪ್ರಕರಣಕ್ಕೂ ಸಂಬಂಧವಿರುವ ಬಗ್ಗೆ ಮಹತ್ವದ ಸುಳಿವು ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವೆಲ್ಲ ಅಂಶಗಳ ನಡುವೆ ಜಾಮೀನು ರಹಿತ ಬಂಧನದ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡುವುದನ್ನು ನಿರಾಕರಿಸಿದೆ.

Full View

ದೇವೇಗೌಡರಿಗೆ ನೋವು

ಪ್ರಜ್ವಲ್‌ ರೇವಣ್ಣ ಪ್ರಕರಣದ ಬಳಿಕ ಮಾಜಿ ಪ್ರಧಾನಿ ಹಾಗೂ ವಯೋವೃದ್ಧ ಎಚ್‌.ಡಿ. ದೇವೇಗೌಡರು ನೊಂದುಕೊಂಡಿದ್ದು ಅರೋಗ್ಯದಲ್ಲೂ ಏರುಪೇರಾಗಿದೆ ಎಂದು ಅವರ ಕುಟುಂಬ ಮೂಲಗಳಳು ತಿಳಿಸಿವೆ. ಈ ಪ್ರಕರಣದಿಂದ ರಾಷ್ಟ್ರಮಟ್ಟದಲ್ಲಿ ದೇವೇಗೌಡರ ವರ್ಚಸ್ಸಿಗೆ ಧಕ್ಕೆಯಾಗಿದೆ. ಇದುವರೆಗೆ ರಾಷ್ಟ್ರ ಹಾಗೂ ರಾಜ್ಯ ರಾಜಕೀಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ದೇವೇಗೌಡರು, ಅವರ ಪುತ್ರ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಇತರರು ತಮ್ಮದೇ ಛಾಪುಮೂಡಿಸಿದ್ದರು.

ಎಸ್‌ಐಟಿ ಅಧಿಕಾರಿಗಳ ಸಭೆ ನಡೆಸಿದ್ದ ಸಿಎಂ

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್​ಐಟಿ ಅಧಿಕಾರಿಗಳೊಂದಿಗೆ ಶನಿವಾರ ಮಧ್ಯಾಹ್ನ ಮಹತ್ವದ ಸಭೆ ನಡೆಸಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದರು.

ಪ್ರಕರಣ ಸಂಬಂಧ ಇದುವರೆಗಿನ ಬೆಳವಣಿಗೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ಸಹಿಸಲಾಗದು ಎಂದು ಖಡಕ್ ಸೂಚನೆ ನೀಡಿದ್ದರು.

ಎಚ್.ಡಿ. ರೇವಣ್ಣ ಬಂಧನ ಬಳಿಕ ಚಿಕ್ಕೋಡಿಯಲ್ಕಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಈ ಪ್ರಕರಣದಲ್ಲಿ ತಾವು ಮಧ್ಯಪ್ರವೇಶಿಸುವುದಿಲ್ಲ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು "ಕುಮಾರಣ್ಣ ಏನೋ ಹೇಳಿದ್ದಾರೆ.. ಹಾಗೇ ಆಗುತ್ತೆ. ಉಪ್ಪು ತಿಂದವರು ನೀರು ಕುಡೀಬೇಕುʼ ಎಂದು ವ್ಯಂಗ್ಯವಾಡಿದ್ದಾರೆ.

Tags:    

Similar News