ಪ್ರಚೋದನಕಾರಿ ಹೇಳಿಕೆ | ಕೆ ಎಸ್ ಈಶ್ವರಪ್ಪ ವಿರುದ್ಧ ಸು-ಮೋಟೊ ಪ್ರಕರಣ
ಮುಸ್ಲಿಮ್ ಸಮುದಾಯದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ವಿರುದ್ಧ ಶಿವಮೊಗ್ಗ ಪೊಲೀಸರು ಸು-ಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಬುಧವಾರ(ನ.13) ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಕೆ ಎಸ್ ಈಶ್ವರಪ್ಪ, ವಕ್ಫ್ ವಿವಾದದ ಕುರಿತು ಪ್ರತಿಕ್ರಿಯಿಸುತ್ತಾ, ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷದ ಮಾತುಗಳನ್ನು ಆಡಿದ್ದರು.
ಆ ಹಿನ್ನೆಲೆಯಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಆರೋಪದ ಮೇಲೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಸು-ಮೋಟೊ ಪ್ರಕರಣ ದಾಖಲಾಗಿದೆ.
ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?
“ರಾಜ್ಯದಲ್ಲಿ ವಕ್ಫ್ ಹೆಸರಿಗೆ ರೈತರ ಜಮೀನು ನೋಂದಣಿ ಪ್ರಕರಣಗಳು ಹೆಚ್ಚುತ್ತಿವೆ. ಇದು ಹೀಗೆ ಮುಂದುವರಿದರೆ ಸಾಧು ಸಂತರು, ಧರ್ಮಾಭಿಮಾನಿಗಳ ನೇತೃತ್ವದಲ್ಲಿ ಹಿಂದೂಗಳು ದಂಗೆ ಏಳಬೇಕಾಗುತ್ತದೆ. ಕಾಂಗ್ರೆಸ್ಸಿಗರನ್ನು ಹುಡುಕಿ ಹುಡುಕಿ ಹೊಡೆಯುವ ಕಾಲ ಬರುತ್ತದೆ. ಮಹಾ ಪುರುಷರಿಗೆ ಅಪಮಾನ ಮಾಡುವವರನ್ನೂ ರಸ್ತೆ ರಸ್ತೆಯಲ್ಲಿ ಕೊಲ್ಲುವ ದಿನ ಬರುತ್ತದೆ” ಎಂದು ಕೆ.ಎಸ್. ಈಶ್ವರಪ್ಪ ಶಿವಮೊಗ್ಗದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
“ರಾಜ್ಯದಲ್ಲಿ ಪ್ರತಿನಿತ್ಯ ಮುಸ್ಲಿಂ ಅನ್ಯಾಯ ಹೆಚ್ಚುತ್ತಿದೆ. ಮುಸಲ್ಮಾನರು ಮಾಡುವ ಅಚಾತುರ್ಯ ಗಳನ್ನೆಲ್ಲಾ ಗಮನಿಸಿದರೂ ಕೂಡ ಕಾಂಗ್ರೆಸ್ ಸರ್ಕಾರ ಸುಮ್ಮನಿದೆ. ರೈತರು, ದೇವಸ್ಥಾನ, ಸಾಧು ಸಂತರ, ಪುರಾತತ್ವ ಇಲಾಖೆ ಆಸ್ತಿಗಳನ್ನೆಲ್ಲಾ ವಕ್ಸ್ ಆಸ್ತಿ ಅಂತ ಮಾಡಿಕೊಂಡಿದ್ದಾರೆ. ವಕ್ಸ್ ಆಸ್ತಿ ಆಗಲು ಬಿಡಲ್ಲ ಅಂತಾ ಒಬ್ಬ ಕಾಂಗ್ರೆಸ್ಸಿಗನ ಬಾಯಲ್ಲಿ ಬರಲಿಲ್ಲ. ನೋಟಿಸ್ ವಾಪಸ್ ತಗೊಂಡಿದ್ದೇವೆ ಅಂತ ಸಿಎಂ ಸಮರ್ಥನೆ ನೀಡುತ್ತಾರೆ” ಎಂದು ಕಿಡಿ ಕಾರಿದ್ದರು.
“ಇಸ್ಲಾಮೀಕರಣಕ್ಕೆ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದೆ. ಕಾಂಗ್ರೆಸ್ ನಾಯಕನೊಬ್ಬ, ಅಂಬೇಡ್ಕರ್ ಅವರು ಇಸ್ಲಾಂ ಧರ್ಮ ಸ್ವೀಕಾರ ಮಾಡಲು ಸಿದ್ದರಿದ್ದರು ಅಂತಾ ಹೇಳಿದರೂ, ಈ ಬಗ್ಗೆ ಒಬ್ಬ ಕಾಂಗ್ರೆಸ್ ನಾಯಕನೂ ಖಂಡನೆ ಮಾಡಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ಘೋಷಣೆ ಮಾಡಲು ಹೊರಟಿದ್ದಾರೆ. ಕೇಳಿದರೆ ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಇವರೇನು ಹಿಂದೂಸ್ಥಾನವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರಾ?” ಎಂದು ಪ್ರಶ್ನಿಸಿದ್ದರು.