ಹರ್ಯಾಣ ಚುನಾವಣಾ ಸೋಲು | ಮುಡಾ ಹಗರಣ ಕಾರಣ ಎಂದ ಕೆ ಬಿ ಕೋಳಿವಾಡ

ಕಳೆದ ವಾರ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಸೂಕ್ತ ಎಂಬ ಹೇಳಿಕೆ ಮೂಲಕ ವಿವಾದಕ್ಕೆ ಕಾರಣವಾಗಿದ್ದ ಮಾಜಿ ಸ್ಪೀಕರ್ ಕೆ ಬಿ ಕೋಳಿವಾಡ, ಇದೀಗ ಹರ್ಯಾಣ ಚುನಾವಣಾ ಸೋಲಿಗೂ ಮುಡಾ ಹಗರಣವೇ ಕಾರಣ ಎನ್ನುವ ಮೂಲಕ ಮತ್ತೊಂದು ವಿವಾದಕ್ಕೆ ತುಪ್ಪ ಸುರಿದಿದ್ದಾರೆ.;

Update: 2024-10-08 08:55 GMT

ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಗೆ ಹಿನ್ನಡೆ ಉಂಟಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ ಕಾರಣ ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆ ಬಿ ಕೋಳಿವಾಡ ಹೇಳಿದ್ದಾರೆ.

ಕಳೆದ ವಾರ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಸೂಕ್ತ ಎಂಬ ಹೇಳಿಕೆ ಮೂಲಕ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ವಿಧಾನಸಭಾ ಮಾಜಿ ಸ್ಪೀಕರ್ ಹಾಗೂ ಮಾಜಿ ಸಚಿವ ಕೆ ಬಿ ಕೋಳಿವಾಡ, ಇದೀಗ ಹರ್ಯಾಣ ಚುನಾವಣಾ ಸೋಲಿಗೂ ಮುಡಾ ಹಗರಣವೇ ಕಾರಣ ಎನ್ನುವ ಮೂಲಕ ಮತ್ತೊಂದು ವಿವಾದಕ್ಕೆ ತುಪ್ಪ ಸುರಿದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿಬಂದಿರುವ ಮುಡಾ ಹಗರಣದ ಆರೋಪ ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಯಿತು. ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿಯವರು ಮುಡಾ ಹಗರಣದ ಬಗ್ಗೆ ಪದೇಪದೆ ಪ್ರಸ್ತಾಪಿಸುವ ಮೂಲಕ ಪಕ್ಷವನ್ನು ಮುಜಗರಕ್ಕೆ ಸಿಲುಕಿಸಿದರು. ಪರಿಣಾಮವಾಗಿ ಪಕ್ಷಕ್ಕೆ ಅಲ್ಲಿ ಅನಿರೀಕ್ಷಿತ ಹಿನ್ನಡೆಯಾಗಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹರ್ಯಾಣ ಚುನಾವಣಾ ಸೋಲಿಗೂ, ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷಗಳು ಮುಡಾ ಹಗರಣದ ಅಸ್ತ್ರ ಝಳಪಿಸುತ್ತಿರುವುದಕ್ಕೂ ನೇರ ನಂಟಿದೆ ಎಂದಿದ್ದಾರೆ.

ನನ್ನ ಹೇಳಿಕೆಗೆ ಈಗಲೂ ಬದ್ಧ

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಪುನರುಚ್ಛರಿಸಿದ ಕೆ ಬಿ ಕೋಳಿವಾಡ ಅವರು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂಬ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ ಎಂದರು.

ಮುಖ್ಯಮಂತ್ರಿಗಳು ರಾಜೀನಾಮೆ ಕೊಡಲಿ ಎಂದು ನಾನು ನೀಡಿದ ಹೇಳಿಕೆ ಅಳಿಸಿಹಾಕಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ನಾನು ಆ ಮಾತನ್ನು ಹೇಳಿದ್ದೇನೆ. ನನ್ನ ಆ ಹೇಳಿಕೆಯಿಂದ ಪಕ್ಷಕ್ಕೆ ಧಕ್ಕೆ ಆದರೆ ನೋಟಿಸ್ ಕೊಡುತ್ತಾರೆ. ಆದರೆ ನಾನು ಈಗ ಸಕ್ರಿಯ ರಾಜಕಾರಣದಲ್ಲಿ ಇಲ್ಲ, ಪಕ್ಷ ಉಳಿಸಲು ಕೆಲಸ ಮಾಡುತ್ತಿದ್ದೇನೆ ಅಷ್ಟೇ ಎಂದರು.

ಯಾರಿರಲಿ ಬಿಡಲಿ, ಪಕ್ಷ ಇರುತ್ತದೆ

ಸಿಎಂ ರಾಜೀನಾಮೆ ವಿಷಯವಾಗಿ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಎಐಸಿಸಿ ನಾಯಕರು ಎಚ್ಚರಿಕೆ ನೀಡಿದ್ದಾರೆಯೇ? ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು ಯಾಕೆ ನನಗೆ ಎಚ್ಚರಿಕೆ ನೀಡುತ್ತಾರೆ? ನಾನು ಕಾಂಗ್ರೆಸ್ನ ಹಿರಿಯ ನಾಯಕ. ನಾನು ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ನೇಹಿತರು. ನನ್ನ ಅಭಿಪ್ರಾಯವನ್ನು ನಾನು ಹೇಳಿದ್ದೇನೆ. ಖರ್ಗೆಯವರೂ ಕೂಡ ತಾವು ಇರಬಹುದು, ಇಲ್ಲದೇ ಇರಬಹುದು, ಪಕ್ಷ ಇರುತ್ತದೆ ಎಂದು ಹೇಳಿದ್ದಾರೆ ಎಂದು ಹೇಳುವ ಮೂಲಕ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ ಎಂದರು.

ಜಾತಿ ಗಣತಿಯಿಂದ ಅನ್ಯಾಯವಾಗದು

ಕಾಂತರಾಜ ವರದಿ ಕೇವಲ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಜನಗಣತಿ ಮಾತ್ರವಲ್ಲ. ಅದು ಜಾತಿ ಜನಗಣತಿ ಕೂಡ ಹೌದು. ಆ ವರದಿ ಅವೈಜ್ಞಾನಿಕ ಅಂದರೆ ಹೇಗೆ ಅಂತ ಅರ್ಥವಾಗುತ್ತಿಲ್ಲ. ಜಾತಿ ಗಣತಿ ವರದಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗುತ್ತದೆ ಎಂದು ಅನಿಸುವುದಿಲ್ಲ. ಆ ವರದಿಯ ಜಾರಿಗೆಗೆ ವಿಳಂಬ ಮಾಡುವ ಅವಶ್ಯಕತೆ ಇಲ್ಲ. ಜಾತಿಗಣತಿ ಜಾರಿಗೆ ನನ್ನ ಬೆಂಬಲ ಇದೆ. ವರದಿ ಜಾರಿ ಘೋಷಿಸಿ ಒಂದು ತಿಂಗಳು ಸಮಯ ಕೊಟ್ಟು ಏನಾದರೂ ಬದಲಾವಣೆ ಇದ್ದರೆ ಮಾಡಲಿ. ಜಾತಿ ಜನಗಣತಿ ಮಾಡುವಾಗ ನಾನೇ ವೈಯಕ್ತಿಕವಾಗಿ ಹಲವು ಕಡೆ ಹೋಗಿದ್ದೇನೆ. ಪ್ರತಿಯೊಂದು ಮನೆಗೆ ಭೇಟಿ ನೀಡಿದ್ದಾರೆ. ಉಪಜಾತಿಯನ್ನೂ ಕೂಡ ದಾಖಲು ಮಾಡಿಕೊಂಡಿದ್ದಾರೆ. ಬಹಳ ಉತ್ತಮವಾಗಿ ಜನಗಣತಿ ಮಾಡಿದ್ದಾರೆ ಎಂದು ಕೆ ಬಿ ಕೋಳಿವಾಡ ಅವರು ಜಾತಿ ಗಣತಿ ವರದಿಯನ್ನು ಸಮರ್ಥಿಸಿಕೊಂಡರು.

Tags:    

Similar News