ಅಮೆರಿಕದಲ್ಲಿ ಅಪರೇಷನ್‌ಗೂ ಮುನ್ನ ತಿರುಪತಿಯಲ್ಲಿ ಮುಡಿಕೊಟ್ಟ ಶಿವರಾಜಕುಮಾರ್ ದಂಪತಿ
ಪಿತ್ತಕೋಶದಲ್ಲಿ ಸೋಂಕು ಇರುವುದು ಗೊತ್ತಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಚಿಕಿತ್ಸೆ ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಅಮೇರಿಕಾದಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ.;
ನಟ ಶಿವರಾಜಕುಮಾರ್ ಸದ್ಯದಲ್ಲೇ ಅಮೇರಿಕಾಗೆ ಹೋಗುತ್ತಿರುವುದು, ಅಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವ ವಿಷಯ ಗೊತ್ತೇ ಇದೆ. ಈಗಾಗಲೇ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅಮೇರಿಕಾಗೆ ಹೊರಡುವ ಮೊದಲು ಶಿವರಾಜಕುಮಾರ್ ತಮ್ಮ ಕುಟುಂಬದೊಂದಿಗೆ ಶುಕ್ರವಾರ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮತ್ತು ಅವರ ಪತ್ನಿ ಗೀತಾ ಶಿವರಾಜಕುಮಾರ್, ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ.
ಶಿವರಾಜಕುಮಾರ್ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಸುದ್ದಿಯೊಂದು ಕೆಲವು ತಿಂಗಳುಗಳ ಹಿಂದೆ ಕೇಳಿ ಬಂದಿತ್ತು. ಇಷ್ಟಕ್ಕೂ ಶಿವರಾಜಕುಮಾರ್ ಅವರಿಗಾಗಿರುವ ಸಮಸ್ಯೆಯೇನು ಎಂಬ ಪ್ರಶ್ನೆಗೆ ನಿರ್ಧಿಷ್ಟವಾದ ಉತ್ತರ ಸಿಗುವುದಿಲ್ಲವಾದರೂ, ಮೂಲಗಳ ಪ್ರಕಾರ ಅವರು ಪಿತ್ತಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಪಿತ್ತಕೋಶದಲ್ಲಿ ಸೋಂಕು ಇರುವುದು ಗೊತ್ತಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರಂತೆ. ಈಗಾಗಲೇ ಚಿಕಿತ್ಸೆ ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಅಮೇರಿಕಾದಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆಯಂತೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಶಿವಣ್ಣ ಅಮೇರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ.
ಅದಕ್ಕೂ ಮೊದಲು, ಶುಕ್ರವಾರ ರಾತ್ರಿ ಶಿವರಾಜ್‌ಕುಮಾರ್, ಪತ್ನಿ ಗೀತಾ ಸೇರಿ ಅವರ ಆಪ್ತ ಬಳಗ ತಿರುಪತಿಗೆ ಭೇಟಿ ನೀಡಿದೆ. ತಿಮ್ಮಪ್ಪನ ದರ್ಶನ ಮಾಡುವುದರ ಜೊತೆಗೆ, ಇದೇ ವೇಳೆ ಶಿವಣ್ಣ, ಗೀತಾ ಮತ್ತು ಕೆಲವು ಆಪ್ತರು ಮುಡಿ ನೀಡಿದ್ದಾರೆ. ಈ ಸಂದರ್ಭದಲ್ಲಿ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಸಹ ಹಾಜರಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗಿವೆ. ಫೋಟೋಗಳನ್ನು ನೋಡಿದ ಅಭಿಮಾನಿಗಳು, ಶಿವಣ್ಣ ಅವರಿಗೆ ಆದಷ್ಟು ಬೇಗ ಹುಷಾರಾಗಿ ವಾಪಸ್ಸಾಗಿ ಎಂದು ಹಾರೈಸಿದ್ದಾರೆ.
ತಮ್ಮ ಅನಾರೋಗ್ಯದ ಸಮಸ್ಯೆಯು ಕುರಿತು ಕೆಲವು ದಿನಗಳ ಹಿಂದೆ ಮಾತನಾಡಿದ್ದ ಶಿವರಾಜಕುಮಾರ್, ‘ಎಲ್ಲರಂತೆ ನಾನೂ ಮನುಷ್ಯನೇ. ನನಗೆ ಆರೋಗ್ಯ ಸರಿ ಇಲ್ಲ. ಚಿಕಿತ್ಸೆ ಪಡೆಯುತ್ತಿದ್ದೇನೆ. ಆರಂಭದಲ್ಲಿ ನನಗೂ ಸ್ವಲ್ಪ ಭಯವಿತ್ತು. ಆದರೆ, ಎಲ್ಲರೂ ಧೈರ್ಯ ತುಂಬಿದ್ದಾರೆ. ನಾಲ್ಕು ತರಹದ ಚಿಕಿತ್ಸೆ ಇದೆ. ಆ ನಂತರ ಒಂದು ಆಪರೇಷನ್ ಇದೆ. ಅದಾದ ಮೇಲೆ ಒಂದು ತಿಂಗಳು ಚಿಕಿತ್ಸೆ ಪಡೆಯುಬೇಕಾಗುತ್ತದೆ. ಜನವರಿ ಕೊನೆಯ ಹೊತ್ತಿಗೆ ಎಲ್ಲ ಸರಿ ಹೋಗುತ್ತದೆ. ಅಮೇರಿಕಾದ ಫ್ಲೋರಿಡಾದಲ್ಲಿ ಆಪರೇಷನ್ ನಡೆಯುವ ಸಾಧ್ಯತೆ ಇದೆ. ಊಟ, ವ್ಯಾಯಾಮ ಎಲ್ಲವೂ ಎಂದಿನಂತೆಯೇ ನಡೆಯುತ್ತಿದೆ. ಅದಕ್ಕೆ ಯಾವುದೇ ನಿರ್ಬಂಧ ಇಲ್ಲ. ಅದರೊಟ್ಟಿಗೆ ಚಿಕಿತ್ಸೆಯೂ ನಡೆಯುತ್ತಿದೆ’ ಎಂದು ಹೇಳಿದ್ದರು.
ತಮ್ಮ ಆರೋಗ್ಯದ ಬಗ್ಗೆ ಆತಂಕಪಡುವಂತದ್ದೇನೂ ಇಲ್ಲ ಎಂದಿರುವ ಶಿವರಾಜಕುಮಾರ್, ‘ನಾನು ಹುಷಾರಾಗಿಯೇ ಇದ್ದೇನೆ. ನನ್ನ ಆರೋಗ್ಯದ ಬಗ್ಗೆ ಆತಂಕಪಡುವಂತದ್ದೇನೂ ಇಲ್ಲ. ಈ ವಿಷಯವನ್ನು ಮುಚ್ಚಿಡುವುದಕ್ಕೆ ನನಗೆ ಇಷ್ಟವಿಲ್ಲ. ನನ್ನ ಆರೋಗ್ಯದ ಬಗ್ಗ ಊಹಾಪೋಹಗಳು ಏಳಬಾರದು. ಹಾಗಾಗಿ, ನಾನಾಗಿಯೇ ಇದನ್ನು ಬಹಿರಂಗಪಡಿಸುತ್ತಿದ್ದೇನೆ. ಸದ್ಯ ಚಿಕಿತ್ಸೆ ನಡೆಯುತ್ತಿದೆ. ಯಾವುದೇ ಸಮಸ್ಯೆ ಇಲ್ಲ. ನವೆಂಬರ್ 27ರವರೆಗೂ ಚಿಕಿತ್ಸೆ ನಡೆಯಲಿದೆ. ಅಲ್ಲಿಂದ ಎರಡು ವಾರಗಳ ನಂತರ ಆಪರೇಷನ್ ಇದೆ. ಆಪರೇಷನ್ ಮುಗಿದರೆ ಎಲ್ಲವೂ ಸರಿ ಹೋಗುತ್ತದೆ’ ಎಂದ ಹೇಳಿದ್ದಾರೆ.
ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್’ ಚಿತ್ರವು ನವೆಂಬರ್ 15ರಂದು ಬಿಡುಗಡೆಯಾಗಿದ್ದು, 20 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ.