ಕೆನಡಾದಲ್ಲಿ ಕಾಂತಾರ ಸಿನಿಮಾ ಪ್ರದರ್ಶಿಸುತ್ತಿದ್ದ ಥಿಯೇಟರ್​​ ಮೇಲೆ ಗುಂಡಿನ ದಾಳಿ

ಅಕ್ಟೋಬರ್ 2ರಂದು ಮುಂಜಾನೆ 1.50ಕ್ಕೆ, ಮತ್ತೊಬ್ಬ ಶಂಕಿತ ಚಿತ್ರಮಂದಿರದ ಪ್ರವೇಶದ್ವಾರದ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದಾನೆ.

Update: 2025-10-03 09:09 GMT

ಭಾರತೀಯ ಚಲನಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಕೆನಡಾದ ಚಿತ್ರಮಂದಿರವೊಂದರ ಮೇಲೆ ವಾರದ ಅಂತರದಲ್ಲಿ ಎರಡು ಬಾರಿ ಹಿಂಸಾತ್ಮಕ ದಾಳಿಗಳು ನಡೆದಿದ್ದು, ಇದರ ಬೆನ್ನಲ್ಲೇ ಚಿತ್ರಮಂದಿರವು ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ. ಓಕ್‌ವಿಲ್‌ನಲ್ಲಿರುವ 'ಫಿಲ್ಮ್.ಕಾ ಸಿನಿಮಾಸ್' (Film.ca Cinemas) ಚಿತ್ರಮಂದಿರವು ಈ ನಿರ್ಧಾರ ಕೈಗೊಂಡಿದೆ. 'ಕಾಂತಾರ- ಚಾಪ್ಟರ್ 1' ಮತ್ತು 'ದೇ ಕಾಲ್ ಹಿಮ್ ಓಜಿ' (OG) ಚಿತ್ರಗಳ ಪ್ರದರ್ಶನದ ವೇಳೆ ದಾಳಿಗಳು ನಡೆದಿದ್ದವು.

ಸೆಪ್ಟೆಂಬರ್ 25ರಂದು ಮುಂಜಾನೆ 5.20ಕ್ಕೆ, ಇಬ್ಬರು ಶಂಕಿತರು ಕೆಂಪು ಗ್ಯಾಸ್ ಕ್ಯಾನ್‌ಗಳನ್ನು ಬಳಸಿ ಚಿತ್ರಮಂದಿರದ ಪ್ರವೇಶದ್ವಾರಕ್ಕೆ ಬೆಂಕಿ ಹಚ್ಚಲು ಯತ್ನಿಸಿದ್ದರು. ಅದೃಷ್ಟವಶಾತ್ ಬೆಂಕಿಯು ಹೊರಭಾಗಕ್ಕಷ್ಟೇ ತಗುಲಿದ್ದು. ಹೊರಭಾಗಕ್ಕೆ ಸಣ್ಣಪುಟ್ಟ ಹಾನಿಯಾಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಹ್ಯಾಲ್ಟನ್ ಪ್ರಾದೇಶಿಕ ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 2ರಂದು ಮುಂಜಾನೆ 1.50ಕ್ಕೆ, ಮತ್ತೊಬ್ಬ ಶಂಕಿತ ಚಿತ್ರಮಂದಿರದ ಪ್ರವೇಶದ್ವಾರದ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದಾನೆ. ಈ ದಾಳಿಯ ಸಂದರ್ಭದಲ್ಲಿಯೂ ಚಿತ್ರಮಂದಿರ ಮುಚ್ಚಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಎರಡೂ ದಾಳಿಗಳು 'ಉದ್ದೇಶಪೂರ್ವಕ' ಮತ್ತು 'ಯೋಜಿತ' ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.

ಪ್ರದರ್ಶನ ರದ್ದತಿಗೆ ಕಾರಣವೇನು?

ಈ ದಾಳಿಗಳು ಚಿತ್ರಮಂದಿರದಲ್ಲಿ ದಕ್ಷಿಣ ಏಷ್ಯಾದ (ಭಾರತೀಯ) ಚಲನಚಿತ್ರಗಳನ್ನು ಪ್ರದರ್ಶಿಸುತ್ತಿರುವುದಕ್ಕೆ ಆಕ್ಷೇಪ ಎನ್ನಲಾಗಿದೆ. ದಾಳಿಗಳಿಗೆ ಜಗ್ಗುವುದಿಲ್ಲ ಮತ್ತು ಪ್ರದರ್ಶನವನ್ನು ಮುಂದುವರಿಸುವುದಾಗಿ ಚಿತ್ರಮಂದಿರದ ಸಿಇಒ ಜೆಫ್ ನೋಲ್ ಅವರು ಆರಂಭದಲ್ಲಿ ವಿಡಿಯೋ ಹೇಳಿಕೆ ನೀಡಿದ್ದರು.

ಗುರುವಾರ (ಅಕ್ಟೋಬರ್ 2) ಬಿಡುಗಡೆ ಮಾಡಿದ ಹೊಸ ಹೇಳಿಕೆಯಲ್ಲಿ, "ನಮ್ಮ ಚಿತ್ರಮಂದಿರದಲ್ಲಿ ಮತ್ತು ಗ್ರೇಟರ್ ಟೊರೊಂಟೊ ಏರಿಯಾದ (GTA) ಇತರ ಚಿತ್ರಮಂದಿರಗಳಲ್ಲಿ ನಡೆಯುತ್ತಿರುವ ಈ ಘಟನೆಗಳಿಗೆ ದಕ್ಷಿಣ ಏಷ್ಯಾದ ಚಲನಚಿತ್ರಗಳ ಪ್ರದರ್ಶನವೇ ಕಾರಣ. ನಾವು ಬೆದರಿಕೆಗಳಿಗೆ ಮಣಿಯಲು ಬಯಸುವುದಿಲ್ಲವಾದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾದ ಹಂತಕ್ಕೆ ತಲುಪಿದೆ" ಎಂದು ತಿಳಿಸಿದೆ.

ಕೆನಡಾದ ಮತ್ತೊಂದು ಚಿತ್ರಮಂದಿರವಾದ ಯಾರ್ಕ್ ಸಿನಿಮಾಸ್ ಕೂಡ ಸಿಬ್ಬಂದಿ ಮತ್ತು ಪ್ರೇಕ್ಷಕರ ಸುರಕ್ಷತೆಯ ದೃಷ್ಟಿಯಿಂದ ದಕ್ಷಿಣ ಏಷ್ಯಾದ ಚಲನಚಿತ್ರಗಳ ಪ್ರದರ್ಶನವನ್ನು ರದ್ದುಗೊಳಿಸಿದೆ. ಮುಂಗಡವಾಗಿ ಟಿಕೆಟ್ ಖರೀದಿಸಿದ ಗ್ರಾಹಕರಿಗೆ ಹಣವನ್ನು ಮರುಪಾವತಿಸಲಾಗುವುದು ಎಂದು ಅದು ಹೇಳಿದೆ.  

Tags:    

Similar News