ಗ್ಯಾರಂಟಿ ಗದ್ದಲ | ನಿಲ್ಲಿಸಿ ಎಂದ ಶಾಸಕ ಗವಿಯಪ್ಪ; ಬಾಯಿಬಿಟ್ರೆ ಹುಷಾರ್ ಎಂದ ಡಿ ಕೆ
ಇಷ್ಟು ದಿನ ಆಡಳಿತ ಪಕ್ಷ ಮತ್ತು ಸರ್ಕಾರದ ವಿರುದ್ಧ ವಾಗ್ದಾಳಿಗೆ ಪ್ರತಿಪಕ್ಷಗಳ ಪಾಲಿಗೆ ಅಸ್ತ್ರವಾಗುತ್ತಿದ್ದ ಗ್ಯಾರಂಟಿ ಯೋಜನೆಗಳು ಇದೀಗ ಆಡಳಿತ ಪಕ್ಷದ ಒಳಗೇ ಸಂಚಲನ ಹುಟ್ಟಿಸಿವೆ.;
ಉಪ ಚುನಾವಣೆಯ ಕಣದಲ್ಲಿ ಗ್ಯಾರಂಟಿ ಯೋಜನೆಗಳು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಅಸ್ತ್ರಗಳಾಗಿದ್ದವು. ಆಡಳಿತರೂಢ ಕಾಂಗ್ರೆಸ್ ಆಡಳಿತ ವೈಫಲ್ಯ, ಅಭಿವೃದ್ಧಿ ಹಿನ್ನಡೆಯ ಬಗ್ಗೆ ಪ್ರಸ್ತಾಪಿಸುವಾಗೆಲ್ಲಾ ಪ್ರತಿಪಕ್ಷ ಮುಖಂಡರು ಗ್ಯಾರಂಟಿ ಯೋಜನೆಗಳನ್ನೇ ಗುರಿಯಾಗಿಸಿ ವಾಗ್ದಾಳಿ ನಡೆಸುತ್ತಿದ್ದರು. ಇದೀಗ ಚುನಾವಣೆ ಮುಗಿದ ಬೆನ್ನಲ್ಲೇ ಗ್ಯಾರಂಟಿ ಯೋಜನೆಗಳು ಸ್ವತಃ ಆಡಳಿತ ಪಕ್ಷದ ಶಾಸಕರ ದಾಳಿಗೆ ಒಳಗಾಗಿವೆ.
ಐದು ಗ್ಯಾರಂಟಿ ಯೋಜನೆಗಳ ಜಾರಿಯ ಹೊರೆ ರಾಜ್ಯ ಬಜೆಟ್ ಮೇಲೆ ಬಿದ್ದಿದೆ. ಹಾಗಾಗಿ ತಮ್ಮ ಶಾಸಕರ ಅನುದಾನಕ್ಕೆ ಕತ್ತರಿ ಬೀಳುತ್ತಿದೆ ಎಂಬ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಶಾಸಕರು ಮತ್ತೊಮ್ಮೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಕೂಗು ಎತ್ತಿದ್ದಾರೆ.
ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್ ಆರ್ ಗವಿಯಪ್ಪ ಇದೀಗ ಗ್ಯಾರಂಟಿ ಯೋಜನೆಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಈ ಯೋಜನೆಗಳಿಂದಾಗಿ ಕ್ಷೇತ್ರದ ಅಭಿವೃದ್ಧಿ ಅನುದಾನಕ್ಕೆ ಕತ್ತರಿ ಬಿದ್ದಿದೆ ಎಂದು ಹೇಳಿದ್ದಾರೆ.
“ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಎರಡನ್ನು ಕೈ ಬಿಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ” ಎಂದು ಹೇಳಿರುವ ಅವರು, “ಗ್ಯಾರಂಟಿಗಳಿಂದ ಆಶ್ರಯ ಮನೆಗಳು ಬರುತ್ತಿಲ್ಲ. ಶಕ್ತಿ ಯೋಜನೆ ಸೇರಿದಂತೆ ಗ್ಯಾರಂಟಿಗಳನ್ನು ಕಡಿತ ಮಾಡಲು ಮುಖ್ಯಮಂತ್ರಿಗಳಿಗೆ ಹೇಳುತ್ತೇವೆ. ಅವರೇನು ತೀರ್ಮಾನ ಮಾಡುತ್ತಾರೆ ನೋಡೋಣ” ಎಂದಿದ್ದಾರೆ.
ಆ ಮೂಲಕ ಗ್ಯಾರಂಟಿ ಯೋಜನೆಗಳಿಂದಾಗಿ ತಮಗೆ ಬರಬೇಕಿದ್ದ ಕ್ಷೇತ್ರಾಭಿವೃದ್ಧಿ ಅನುದಾನ ಬರುತ್ತಿಲ್ಲ ಎಂಬ ಅಸಮಾಧಾನವನ್ನು ಅವರು ತೋಡಿಕೊಂಡಿದ್ದಾರೆ. ಅಲ್ಲದೆ, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ ಎಂದೂ ಈ ಮೊದಲು ಹೇಳಿದ್ದ ಅವರು, ಇದೀಗ ಅನುದಾನ ಬರದೇ ಇರೋದಕ್ಕೆ ಗ್ಯಾರಂಟಿ ಯೋಜನೆಗಳೇ ಕಾರಣ ಎಂದೂ ಹೇಳಿದ್ದಾರೆ.
ಡಿ ಕೆ ಶಿವಕುಮಾರ್ ಗರಂ
ಆದರೆ, ಶಾಸಕ ಗವಿಯಪ್ಪ ಅವರ ಈ ಹೇಳಿಕೆ ಪಕ್ಷದ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕಣ್ಣು ಕೆಂಪಾಗಿಸಿದೆ. ಗ್ಯಾರಂಟಿ ಯೋಜನೆಗಳ ಕುರಿತು ಯಾವುದೇ ಶಾಸಕರಿರಲಿ ಅಥವಾ ಕಾರ್ಯಕರ್ತರಿರಲಿ ಬಹಿರಂಗ ಹೇಳಿಕೆ ನೀಡಬಾರದು ಎಂದು ಅವರು ಮಂಗಳವಾಡ ಫರ್ಮಾನು ಹೊರಡಿಸಿದ್ದಾರೆ.
ಶಾಸಕ ಗವಿಯಪ್ಪ ಹೇಳಿಕೆಯ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ಸಿನ ಯಾವ ಶಾಸಕರು ಕೂಡ ಗ್ಯಾರಂಟಿಯ ಬಗ್ಗೆ ಮಾತನಾಡಬಾರದು. ನಾವು ಗ್ಯಾರಂಟಿ ಘೋಷಣೆ ಮಾಡಿದ್ದೇವೆ ಮುಂದುವರಿಸುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ನಮ್ಮ ಶಾಸಕರು ಮತ್ತು ಕಾರ್ಯಕರ್ತರು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತಾಡಬಾರದು. ಜನರಿಗೆ ನಾವು ಭರವಸೆ ಕೊಟ್ಟಿದ್ದೇವೆ. ಅದರಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಜಾರಿಗೆ ಬಂದಿರುವ ಯಾವುದೇ ಗ್ಯಾರಂಟಿ ಯೋಜನೆಯೂ ನಿಲ್ಲಿಸುವುದಿಲ್ಲ. ಯೋಜನೆಗಳ ಪ್ರಯೋಜನ ಪಡೆಯಲು ಯಾರು ಅರ್ಹರಲ್ಲವೋ ಅವರನ್ನು ಪತ್ತೆ ಮಾಡುತ್ತೇವೆ. ಬಿಪಿಎಲ್ ಕಾರ್ಡ್ ರೀತಿ ಪರಿಶೀಲನೆ ಮಾಡುತ್ತೇವೆ. ಗವಿಯಪ್ಪ ಹಾಗೆ ಹೇಳಿದ್ದಾರೆ ಅಂತ ನಾನು ಅಂದುಕೊಳ್ಳಲ್ಲ. ನಮ್ಮ ಪಕ್ಷ ಈಗಾಗಲೇ ಬಜೆಟ್ ಘೋಷಣೆ ಮಾಡಿದೆ. ಅದರ ಅಡಿಯಲ್ಲಿ ಅನುದಾನ ಹಂಚಿಕೆ ಆಗುತ್ತದೆ. ಗ್ಯಾರಂಟಿ ನಿಲ್ಲಿಸುವಂತೆ ಹೇಳಿದ್ದಾರೆ ಅಂತ ನಾನು ಒಪ್ಪಲ್ಲ. ಎಲ್ಲಾ ಶಾಸಕರಿಗೂ ಅನುದಾನ ನೀಡಿದ್ದೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬಹಿರಂಗ ಹೇಳಿಕೆ ನೀಡಿದರೆ ಕ್ರಮ
ಅಲ್ಲದೆ, ಶಾಸಕ ಗವಿಯಪ್ಪ ಅವರಿಗೆ ಎಚ್ಚರಿಕೆಯನ್ನೂ ನೀಡಿದ ಡಿ ಕೆ ಶಿವಕುಮಾರ್, ಗವಿಯಪ್ಪಗೆ ಸರಿಯಾದ ಮಾಹಿತಿ ಇಲ್ಲಾ ಅನ್ಸುತ್ತೆ. ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದೇವೆ. ಗವಿಯಪ್ಪ ಜೊತೆಗೆ ನಾನು ಮಾತನ್ನಾಡುತ್ತೇನೆ. ಅವರಿಂದ ಸ್ಪಷ್ಟನೆ ಕೇಳುತ್ತೇನೆ. ಬೇರೆ ಯಾವುದೇ ಶಾಸಕರು ಗ್ಯಾರಂಟಿ ಯೋಜನೆಗಳ ಕುರಿತು ಬಹಿರಂಗ ಹೇಳಿಕೆ ನೀಡಬಾರದು. ಒಂದು ವೇಳೆ ಹೇಳಿಕೆ ನೀಡಿದರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ, ಇಷ್ಟು ದಿನ ಆಡಳಿತ ಪಕ್ಷ ಮತ್ತು ಸರ್ಕಾರದ ವಿರುದ್ಧ ವಾಗ್ದಾಳಿಗೆ ಪ್ರತಿಪಕ್ಷಗಳ ಪಾಲಿಗೆ ಅಸ್ತ್ರವಾಗುತ್ತಿದ್ದ ಗ್ಯಾರಂಟಿ ಯೋಜನೆಗಳು ಇದೀಗ ಆಡಳಿತ ಪಕ್ಷದ ಒಳಗೇ ಸಂಚಲನ ಹುಟ್ಟಿಸಿವೆ.