ಜಿಎಸ್‌ಟಿ ಸ್ವರೂಪ ಬದಲಾಗಲಿದೆ: ನಿರ್ಮಲಾ ಸೀತಾರಾಮನ್‌

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕುರಿತು ರಾಜ್ಯವಾರು ಇರುವ ಎಲ್ಲ ಗೊಂದಲಗಳೂ ಶೀಘ್ರ ಬಗೆಹರಿಯಲಿದ್ದು, ವರ್ತಕ-ಉದ್ಯಮಿ ಸ್ನೇಹಿ ತೆರಿಗೆಯ ಸ್ವರೂಪ ಪಡೆಯಲಿದೆ.

Update: 2024-04-23 06:22 GMT
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

ಬೆಂಗಳೂರು: ʻಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕುರಿತು ರಾಜ್ಯವಾರು ಇರುವ ಎಲ್ಲ ಗೊಂದಲಗಳೂ ಶೀಘ್ರ ಬಗೆಹರಿಯಲಿದ್ದು, ವರ್ತಕ-ಉದ್ಯಮಿ ಸ್ನೇಹಿ ತೆರಿಗೆಯ ಸ್ವರೂಪ ಪಡೆಯಲಿದೆʼ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

'ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್‌ ಅಕೌಂಟೆಂಟ್ಸ್ ಆಫ್ ಇಂಡಿಯಾ' ಸೋಮವಾರ ( ಏಪ್ರಿಲ್‌ 22) ರಂದು ಹಮ್ಮಿಕೊಂಡಿದ್ದ 'ಅಮೃತ ಕಾಲ- 2047' ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಎಸ್‌ಟಿಯ ಲೋಪಗಳನ್ನು ಹಂತಹಂತವಾಗಿ ಸರಿಪಡಿಸಲಾಗಿದೆ. ಒಂದು ರಾಜ್ಯಕ್ಕೂ ಮತ್ತೊಂದರ ಮಧ್ಯೆ ಭಿನ್ನತೆಗಳಿವೆ. ಎಲ್ಲ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಕಂಡುಕೊಳ್ಳಲಾಗಿದೆ. ಚಹಾ, ತರಕಾರಿ ಮಾರಾಟಗಾರರು ಸೇರಿದಂತೆ ಸಣ್ಣಸಣ್ಣ ವ್ಯಾಪಾರಿಗಳು ತೆರಿಗೆ ವ್ಯವಸ್ಥೆ ಅರ್ಥಮಾಡಿಕೊಂಡು ವಹಿವಾಟು ನಡೆಸಿದರೆ ಸಾಕಷ್ಟು ಲಾಭ ಗಳಿಸಬಹುದು ಎಂದು ಅವರು ಹೇಳಿದರು.

'ಭಾರತದ ಇದುವರೆಗಿನ ನೀತಿಗಳ ಫಲವಾಗಿ ದೇಶದ ಸಂಪನ್ಮೂಲ, ಪ್ರತಿಭೆ ವಿದೇಶಗಳ ಪಾಲಾಗುತ್ತಿತ್ತು. ಮೋದಿ ಅವರ ಆರ್ಥಿಕ ನೀತಿಗಳ ಫಲವಾಗಿ ವಿದೇಶಿ ಹೂಡಿಕೆ, ಪ್ರತಿಭೆಗಳೂ ಭಾರತವನ್ನು ಪ್ರವೇಶಿಸುತ್ತಿವೆ. ಇಂದು ಭಾರತ ಸ್ವಾತಂತ್ರೋತ್ಸವದ ಅಮೃತ ಕಾಲಘಟ್ಟದಲ್ಲಿದೆ. ಅಂದು ವಕೀಲರು, ಚಾರ್ಟಡ್‌ ಅಕೌಂಟೆಂಟ್‌ಗಳು ಸೇರಿದಂತೆ ಬಹುತೇಕರು ತಮ್ಮ ಉದ್ಯೋಗ ತೊರೆದು ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಮುಂದಿನ 25 ವರ್ಷಗಳ ವಿಕಸಿತ ಭಾರತದ ಕನಸು ನನಸು ಮಾಡಲು ಯಾರೂ ಉದ್ಯೋಗ ತೊರೆಯುವ ಅಗತ್ಯವಿಲ್ಲ. ಮಾಡುವ ಕೆಲಸಗಳ ಮೂಲಕವೇ ಕೊಡುಗೆ ನೀಡಬಹುದು. ಆ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಅರ್ಥ ವ್ಯವಸ್ಥೆ ನೀಡಬಹುದು' ಎಂದು ಹೇಳಿದರು.

'ಜಾಗತಿಕ ಹೂಡಿಕೆಗೆ ಭಾರತ ತೆರೆದುಕೊಂಡಿದೆ. ಭಾರತವು ಜಾಗತಿಕಮಟ್ಟದಲ್ಲಿ ಅಮೆರಿಕ, ಚೀನಾ, ಜಪಾನ್‌ ಮತ್ತು ಜರ್ಮನಿ ಬಳಿಕ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ. ದೇಶದ ಜಿಡಿಪಿ ಗಾತ್ರವು 2027-28ನೇ ಹಣಕಾಸು ವರ್ಷಕ್ಕೆ ₹415 ಲಕ್ಷ ಕೋಟಿಗೆ (5 ಟ್ರಿಲಿಯನ್ ಡಾಲರ್) ತಲುಪಲಿದ್ದು, ಚೀನಾ, ಅಮೆರಿಕದ ಬಳಿಕ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. 2047ರ ವೇಳೆಗೆ ದೇಶದ ಆರ್ಥಿಕತೆಯ ಗಾತ್ರವು ₹2,490 ಲಕ್ಷ ಕೋಟಿಗೆ (30 ಟ್ರಿಲಿಯನ್ ಡಾಲರ್) ತಲುಪುವ ನಿರೀಕ್ಷೆಯಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tags:    

Similar News