ಎತ್ತಿನಹೊಳೆ ಬಳಿಕ ಅರ್ಕಾವತಿ ನೀರಾವರಿ ಯೋಜನೆಯತ್ತ ಸರ್ಕಾರದ ಚಿತ್ತ
ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದ ಬಳಿಕ ಈಗ ಮಂಡ್ಯ, ಬೆಂಗಳೂರು ಗ್ರಾಮಾಂತರ ಭಾಗಗಳ ರೈತರಿಗೆ ನೀರು ನೀಡುವ ಅರ್ಕಾವತಿ ಬಲದಂಡೆ ನಾಲೆ ಏತ ನೀರಾವರಿ ಯೋಜನೆಯ ಪುನಶ್ಚೇತನಕ್ಕೆ ಸರ್ಕಾರ ಮುಂದಾಗಿದೆ.
ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದ ಬಳಿಕ ಈಗ ಮಂಡ್ಯ, ಬೆಂಗಳೂರು ಗ್ರಾಮಾಂತರ ಭಾಗಗಳ ರೈತರಿಗೆ ನೀರು ನೀಡುವ ಅರ್ಕಾವತಿ ಬಲದಂಡೆ ನಾಲೆ ಏತ ನೀರಾವರಿ ಯೋಜನೆಯ ಪುನಶ್ಚೇತನಕ್ಕೆ ಸರ್ಕಾರ ಮುಂದಾಗಿದೆ.
ಅರ್ಕಾವತಿ ಜಲಾಶಯ ಬಲದಂಡೆ ನಾಲೆಯ ಏತ ನೀರಾವರಿ ಪುನಶ್ಚೇತನ ಕಾಮಗಾರಿಯ ಪರೀಕ್ಷಾರ್ಥ ಚಾಲನೆಯನ್ನು ಉದ್ಘಾಟಿಸಿದ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಈ ವಿಷಯ ಪ್ರಕಟಸಿದ್ದಾರೆ.
"ಮಲೆನಾಡು ಸೇರಿದಂತೆ ಇತರೆ ಕಡೆ ಉತ್ತಮ ಮಳೆಯಾಗುತ್ತಿದೆ. ಮಂಡ್ಯ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಉತ್ತಮ ಮಳೆಯಾಗಿಲ್ಲ ಆದ ಕಾರಣಕ್ಕೆ ಅರ್ಕಾವತಿ ಬಲದಂಡೆ ನಾಲೆ ಏತ ನೀರಾವರಿ ಯೋಜನೆಯನ್ನು ತುರ್ತಾಗಿ ಪುನಶ್ಚೇತನ ಮಾಡಿ ಚಾಲನೆ ನೀಡಿದ್ದೇವೆ. ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವನಾಗಿದ್ದಾಗ ಒತ್ತಾಯ ಮಾಡಿ ಅವರನ್ನು ಕರೆದುಕೊಂಡು ಬಂದು ಅರ್ಕಾವತಿ ಬಲದಂಡೆ ನಾಲೆಯ ಏತ ನೀರಾವರಿ ಕಾಮಗಾರಿಯನ್ನು ಉದ್ಘಾಟಿಸಲಾಗಿತ್ತು. ಇದು ನನ್ನ ಬಹುದಿನದ ಕನಸು. ಇದರಿಂದ ಸಾವಿರ ಎಕರೆಗೂ ಹೆಚ್ಚು ಭೂಮಿಗೆ ನೀರಾವರಿ ಅನುಕೂಲವಾಗಲಿದೆ," ಎಂದು ಅವರು ಹೇಳಿದ್ದಾರೆ.
ಈ ಭಾಗದ ರೈತರು ಈ ಯೋಜನೆ ಸಾಕಾರಗೊಳ್ಳುವ ವೇಳೆಯಲ್ಲಿ ಕೇವಲ ಮೂರು- ನಾಲ್ಕು ಸಾವಿರಕ್ಕೆ ತಮ್ಮ ಜಮೀನುಗಳನ್ನು ಕಳೆದುಕೊಂಡಿದ್ದಾರೆ. ಈ ವಿಚಾರ ನನಗೆ ಈಗಲೂ ಬೇಸರ ತರಿಸುತ್ತದೆ. ಹಣಕ್ಕೆ ಕಷ್ಟವಿದ್ದ ಕಾಲದಲ್ಲೂ ಎಸ್. ಎಂ. ಕೃಷ್ಣ ಅವರ ಕೈಯಿಂದ ಸುಮಾರು 300 ಜನ ರೈತರಿಗೆ ಎಕರೆ ಇಂತಿಷ್ಟು ಎಂದು ಹೆಚ್ಚುವರಿಯಾಗಿ ಏಳು ಕೋಟಿ ಪರಿಹಾರ ಕೊಡಿಸಲಾಯಿತು ಎಂದು ಡಿ.ಕೆ ಶಿವಕುಮಾರ್ ವಿವರಿಸಿದರು.
ದೇವರ ಅನುಗ್ರಹದಿಂದ ನಾನೇ ಇಂದು ನೀರಾವರಿ ಸಚಿವನಾಗಿದ್ದೇನೆ. ಇಂತಹ ನೂರು ಯೋಜನೆಗಳನ್ನು ಮಾಡುವ ಶಕ್ತಿ ನೀಡಿದ್ದಾನೆ. ಶಿಂಷಾ ನೀರನ್ನು ಸಾತನೂರು ಹಾಗೂ ಕೆಂಪಮ್ಮನ ದೊಡ್ಡಿವರೆಗೂ ತೆಗೆದುಕೊಂಡು ಹೋಗಲಾಗುತ್ತಿದೆ. ದೊಡ್ಡ ಆಲಹಳ್ಳಿ ಕೆರೆಗೂ ನೀರನ್ನು ತುಂಬಿಸಲಾಗುತ್ತಿದೆ. ಕೈಲಾಂಚ, ಮಾಗಡಿ, ಮಾತೂರು ಕೆರೆ, ಚನ್ನಪಟ್ಟಣ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಲಾಯಿತು ಎಂದರು.
ನೀರಿನ ಮಹತ್ವ ಗೊತ್ತಾಗಬೇಕು
ಈ ಭಾಗದ ಜನಕ್ಕೆ ನೀರಿನ ಮಹತ್ವ ಗೊತ್ತಾಗಬೇಕು ಎಂದರೆ, ಕೋಲಾರ ಚಿಕ್ಕಬಳ್ಳಾಪುರ ಭಾಗಕ್ಕೆ ಹೋಗಿ ನೋಡಬೇಕು. ತರಕಾರಿ ಮತ್ತು ಹಣ್ಣುಗಳನ್ನು ಬೆಳೆದು ರೈತರು ಬದುಕುತ್ತಿದ್ದಾರೆ. 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಕೆ.ಸಿ ವ್ಯಾಲಿ ಯೋಜನೆಯನ್ನು ಕಾರ್ಯಗತಗೊಳಿಸಿ, ಕೊಳಚೆ ನೀರನ್ನು ಶುದ್ಧೀಕರಣ ಮಾಡಿ ಕೋಲಾರದ ಕೆರೆಗಳನ್ನು ತುಂಬಿಸಿದ್ದೇವೆ. ಈಗ ಎತ್ತಿನಹೊಳೆಯಿಂದ ಕುಡಿಯುವ ನೀರನ್ನು ಕೊಡಲಾಗುತ್ತದೆ ಎಂದರು.
ಬಯಲು ಸೀಮೆ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಅಷ್ಟಾಗಿ ಮಳೆ ಬಿದ್ದಿಲ್ಲ. ಕಡಲೆಕಾಯಿ, ಹುರುಳಿಯನ್ನು ಹಾಕಿಕೊಳ್ಳಬಹುದು ಹೊರತು ಅಷ್ಟೊಂದು ಅನುಕೂಲವಾಗಿಲ್ಲ. ಈ ಯೋಜನೆಯಿಂದ ಅಂತರ್ಜಲ ಹೆಚ್ಚಾಗುತ್ತದೆ. ರೇಷ್ಮೆ ಸೇರಿದಂತೆ ಇತರೆ ಬೆಳೆಗೆ ಅನುಕೂಲವಾಗಬಹುದು.
ಆಸ್ತಿಗಳನ್ನು ಮಾರಿಕೊಳ್ಳಬೇಡಿ
ಈ ಭಾಗದ ಜನರಿಗೆ ನಾನು ಸಲಹೆ ನೀಡುತ್ತಿದ್ದೇನೆ. ನಿಮ್ಮಗ ಆಸ್ತಿಗಳ ಮೌಲ್ಯವನ್ನು ಹೆಚ್ಚು ಮಾಡುತ್ತೇನೆ, ಯಾರು ಮಾಡಿಕೊಳ್ಳಬೇಡಿ. ನನ್ನ ತಲೆಯಲ್ಲಿ ಒಂದಷ್ಟು ಲೆಕ್ಕಾಚಾರಗಳಿವೆ, ನನ್ನ ಆಲೋಚನೆಗಳು ನಿಮಗೆ ಈಗ ಅರ್ಥವಾಗುತ್ತಿರಬಹುದು.
ಮೇಕೆದಾಟು ವಿಚಾರ
ಬಿಜೆಪಿ ಸರ್ಕಾರ ಸಹಕಾರ ಕೊಟ್ಟರೆ ಎಲ್ಲವೂ ಸಾಧ್ಯ. ನ್ಯಾಯಾಲಯದಲ್ಲಿ ಮೇಕೆದಾಟು ವಿಚಾರವಾಗಿ ನಮಗೆ ನ್ಯಾಯ ದೊರೆಯುವ ಭರವಸೆ ಇದೆ. ಕನಕಪುರ ಭಾಗದ ಜನರಿಗೆ ಅನುಕೂಲವಾಗದೆ ಇರಬಹುದು. ಆದರೆ ರಾಜ್ಯದ ಹಿತಕ್ಕೆ ಒಳ್ಳೆಯದಾಗುತ್ತದೆ. ಕಾವೇರಿ ಭಾಗದ ಜನರಿಗೆ, ಬೆಂಗಳೂರಿನ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಸುಮಾರು 550 ಎಕರೆಯಷ್ಟು ರೈತರ ಜಮೀನು ಹೋಗಬಹುದು. ಅವರಿಗೆ ಉತ್ತಮ ಪರಿಹಾರ ನೀಡಿ, ಪರ್ಯಾಯ ಭೂಮಿಯನ್ನು ಕಲ್ಪಿಸಲಾಗುವುದು. ಪಡುವಣ, ಸಂಗಮ ಇವುಗಳಿಗೆ ಸ್ವಲ್ಪ ತೊಂದರೆ ಆಗಬಹುದು ಆದರೆ ರಾಜ್ಯದ ಹಿತ ಮುಖ್ಯ.
ಎತ್ತಿದ ಹೊಳೆ ನಮ್ಮ ಬದುಕಿಗೆ ಕಿರೀಟ
ನಮ್ಮ ಬದುಕಿಗೆ ದೊಡ್ಡ ಕಿರೀಟವಾದಂತಹ ಎತ್ತಿನ ಹೊಳೆ ಯೋಜನೆಗೆ ಬಾಗಿನ ಅರ್ಪಿಸಿದ್ದೇನೆ. ಸಮ್ಮಿಶ್ರ ಸರ್ಕಾರ ಇದ್ದಾಗ ನೀರಾವರಿ ಸಚಿವನಾಗಿದ್ದೆ. ಆಗ ಯಾವ ಸ್ಥಿತಿಯಲ್ಲಿತ್ತೊ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಅದೇ ಸ್ಥಿತಿಯಲ್ಲಿತ್ತು. ಅಲ್ಲಿದ್ದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ, ಇನ್ನೊಂದು ವರ್ಷದಲ್ಲಿ ಇಲ್ಲಿನ ನೀರು ಎತ್ತದಿದ್ದರೆ ನಾನು ಇಲ್ಲಿಗೆ ಮತ್ತೆ ಬರುವುದಿಲ್ಲ ಎಂದು ಶಪಥ ಮಾಡಿ ಛಲತೊಟ್ಟು ಮುಗಿಸಿದೆ ಎಂದರು