ಬಾಕಿ ಪ್ರಕರಣ ಇಲ್ಲ ಎಂಬ ರಾಜ್ಯಪಾಲರ ಹೇಳಿಕೆ ಪರಿಶೀಲನೆ: ಡಿ.ಕೆ. ಶಿವಕುಮಾರ್
"ರಾಜ್ಯಪಾಲರು ನಮಗೆ ಟೀ, ಕಾಫಿ ಮತ್ತು ಉಪಾಹಾರ ಕೊಟ್ಟು ಉಪಚರಿಸಿದರು. ಎಲ್ಲದಕ್ಕಿಂತ ಮುಖ್ಯವಾಗಿ ನಿಮಗೆ ನ್ಯಾಯ ನೀಡುತ್ತೇವೆ ಎಂದು ಭರವಸೆ ನೀಡಿದರು" ಎಂದೂ ಶಿವಕುಮಾರ್ ತಿಳಿಸಿದರು.;
"ನನ್ನ ಬಳಿ ಪ್ರಾಸಿಕ್ಯೂಷನ್ ಕೋರಿ ಬಂದಿರುವ ಯಾವುದೇ ಕೋರಿಕೆಗಳೂ ಬಾಕಿ ಇಲ್ಲ ಎಂದು ರಾಜ್ಯಪಾಲರು ತಿಳಿಸಿದ್ದಾರೆ. ರಾಜ್ಯಪಾಲರು ಏಕೆ ಹೀಗೆ ಹೇಳುತ್ತಿದ್ದಾರೆ ಎಂದು ಮತ್ತೊಮ್ಮೆ ಪರಿಶೀಲನೆ ಮಾಡಲಾಗುವುದು. ಇದು ನಿಜವೋ, ಸುಳ್ಳೋ.. ಅನುಮತಿ ಕೋರಿಕೆ ಕಳಿಸಿರುವುದು ನಿಜವೋ, ಸುಳ್ಳು ಎಂದು ಪರಿಶೀಲಿಸಲಾಗುವುದು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ರಾಜ್ಯಪಾಲರ ಪಕ್ಷಪಾತ ಧೋರಣೆ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಶನಿವಾರ ಹಮ್ಮಿಕೊಂಡಿದ್ದ ರಾಜಭವನ ಚಲೋ ಪ್ರತಿಭಟನೆ ಬಳಿಕ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿ, ರಾಜ್ಯಪಾಲರು ತಮ್ಮ ಮನವಿಗೆ ನೀಡಿದ ಪ್ರತಿಕ್ರಿಯೆ ಕುರಿತು ಮಾಹಿತಿ ನೀಡಿದರು.
ರಾಜಭವನಕ್ಕೆ ತಾವು ತೆರಳಿ, ಪ್ರತಿಪಕ್ಷಗಳ ನಾಲ್ವರು ಮುಖಂಡರ ವಿರುದ್ಧ ಬಾಕಿ ಇರುವ ಪ್ರಕರಣಗಳಲ್ಲಿ ಕೂಡಲೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂಬ ನಮ್ಮ ಬೇಡಿಕೆಗೆ, ರಾಜ್ಯಪಾಲರು ತಮ್ಮ ಬಳಿ ಯಾವುದೇ ಪ್ರಾಸಿಕ್ಯೂಷನ್ ಕೋರಿಕೆ ಅರ್ಜಿ ಬಾಕಿ ಉಳಿದಿಲ್ಲ ಎಂದಿದ್ದಾರೆ. ಇದು ಯಾಕೆ ಹಾಗೆ ಹೇಳಿದರು ಎಂಬ ಬಗ್ಗೆ ಗೊಂದಲವಿದೆ. ಆ ಬಗ್ಗೆ ಪೊಲೀಸ್ ಮತ್ತು ತನಿಖಾ ಸಂಸ್ಥೆಗಳಿಂದ ಮಾಹಿತಿ ಪಡೆದು ಪ್ರತಿಕ್ರಿಯಿಸಲಾಗುವುದು ಎಂದು ಡಿಸಿಎಂ ಹೇಳಿದರು.
"ಸಿದ್ದರಾಮಯ್ಯ ಅವರ ಕೇಸಿನ ವಿಚಾರದಲ್ಲಿ ನಾವು ರಾಜಭವನ ಚಲೋ ಹಮ್ಮಿಕೊಂಡಿಲ್ಲ. ಈ ಪ್ರಕರಣ ನ್ಯಾಯಾಲಯದಲ್ಲಿ ಇದ್ದು. ಅಲ್ಲಿ ನಮ್ಮ ಹೋರಾಟ ಮಾಡುತ್ತಾ ಇದ್ದೇವೆ. ಅಲ್ಲಿ ತೀರ್ಮಾನವಾದ ನಂತರ ಪ್ರತಿಕ್ರಿಯೆ ನೀಡುತ್ತೇವೆ" ಎಂದರು.
ರಾಜ್ಯಪಾಲರ ಸ್ಪಂದನೆಯಿಂದ ನ್ಯಾಯ ದೊರೆಯುತ್ತದೆ ಎನ್ನುವ ಭರವಸೆ ಮೂಡಿದೆಯೇ ಎಂದು ಕೇಳಿದಾಗ "ನಾವು ನಮ್ಮ ಕರ್ತವ್ಯವನ್ನು ಮಾಡಿದ್ದೇವೆ. ನಾವು ರಾಜ್ಯದ ಜನತೆಯ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ರಾಜ್ಯಪಾಲರ ಬಳಿ ಪರ್ಯಾಯ ದಾರಿಗಳಿಲ್ಲ. ಅವರು ನಾಲ್ವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲೇಬೇಕು" ಎಂದರು.
ಅರ್ಜಿಗಳು ಇತ್ಯರ್ಥ ಆಗಿವೆಯೇ? ಎಂದು ರಾಜ್ಯಪಾಲರು ನಿಮಗೆ ತಿಳಿಸಿದ್ದಾರೆಯೇ ಎಂದಾಗ "ಒಳಗಿನ ವಿಚಾರವನ್ನು ನಾನು ನಿಮ್ಮ ಬಳಿ ಚರ್ಚೆ ಮಾಡುವುದಿಲ್ಲ. ಅವರು ನನ್ನ ಬಳಿ ಯಾವುದೇ ಅರ್ಜಿಗಳಿಲ್ಲ ಎಂದು ಹೇಳಿದ್ದಾರೆ. ಅದನ್ನು ನಾವು ಪರಿಶೀಲಿಸುತ್ತೇವೆ" ಎಂದರು.
"ರಾಜ್ಯಪಾಲರು ನಮಗೆ ಟೀ, ಕಾಫಿ ಮತ್ತು ಉಪಾಹಾರ ಕೊಟ್ಟು ಉಪಚರಿಸಿದರು. ಎಲ್ಲದಕ್ಕಿಂತ ಮುಖ್ಯವಾಗಿ ನಿಮಗೆ ನ್ಯಾಯ ನೀಡುತ್ತೇವೆ ಎಂದು ಭರವಸೆ ನೀಡಿದರು" ಎಂದೂ ಶಿವಕುಮಾರ್ ತಿಳಿಸಿದರು.
ಶನಿವಾರ ಬೆಳಿಗ್ಗೆ ವಿಧಾನಸೌಧದ ಆವರಣದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು, ಬಳಿಕ ರಾಜಭವನದವರೆಗೆ ಕಾಲ್ನಡಿಗೆಯಲ್ಲಿ ಸಾಗಿ ರಾಜಭವನ ಚಲೋ ನಡೆಸಿದರು.
ಲೋಕಾಯುಕ್ತ ಎಸ್ ಐಟಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಮತ್ತು ಜನಾರ್ಧನ ರೆಡ್ಡಿ ಅವರ ವಿಚಾರಣೆಗೆ ಅನುಮತಿ ನೀಡಿ ಎಂದು ಸಲ್ಲಿಸಿರುವ ಮನವಿಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದರು.
"ನಾಲ್ಕು ಜನರ ವಿರುದ್ಧ ವಿಚಾರಣೆಗೆ ಅನುಮತಿ ನೀಡಬೇಕು. ರಾಜ್ಯಪಾಲರ ಕಚೇರಿ ಘನತೆಯನ್ನು ಉಳಿಸಿಕೊಳ್ಳಬೇಕು. ಕಾನೂನನ್ನು ಉಳಿಸಬೇಕು, ರಾಜ್ಯಪಾಲರ ಹುದ್ದೆಗೆ ಇರುವ ಘನತೆ, ಗೌರವವನ್ನು ಉಳಿಸಬೇಕು. ಪಕ್ಷಪಾತ ಧೋರಣೆ ಮಾಡದೆ ಕೆಲಸ ಮಾಡಬೇಕು ಎಂದು ಮನದಟ್ಟು ಮಾಡಿದ್ದೇವೆ. ಹಾಗೂ ನನ್ನ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯ ನಿರ್ಧಾರಗಳನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದೇವೆ" ಎಂದು ಶಿವಕುಮಾರ್ ಮಾಹಿತಿ ನೀಡಿದರು.