ಕೆರೆಗಳ ಬಫರ್ ಜೋನ್ ವಿವಾದ: ರಾಜ್ಯಪಾಲರಿಂದ ತಿದ್ದುಪಡಿ ವಿಧೇಯಕ ವಾಪಸ್, ಏನಿದು ಪ್ರಕರಣ?
ಪ್ರಸ್ತುತ ನಿಯಮಗಳ ಪ್ರಕಾರ, ಎಲ್ಲಾ ಕೆರೆಗಳ ಸುತ್ತಲೂ 30 ಮೀಟರ್‌ಗಳಷ್ಟು ಬಫರ್ ಜೋನ್ ಕಡ್ಡಾಯವಾಗಿದೆ. ಈ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ಹಿಂದಿನ ಕಾನೂನು ಹೇಳಿದೆ.;
ಕರ್ನಾಟಕದಲ್ಲಿ ಸರ್ಕಾರ ಮತ್ತು ರಾಜಭವನದ ನಡುವಿನ ಸಂಘರ್ಷ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ರಾಜ್ಯ ಸರ್ಕಾರವು ಕೆರೆಗಳ ಸುತ್ತಲಿನ ಬಫರ್ ಜೋನ್ ನಿಯಮಗಳನ್ನು ಸಡಿಲಗೊಳಿಸಲು ರಾಜ್ಯ ಸರ್ಕಾರ ತಂದಿದ್ದ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ-2025ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕದೆ, ಸ್ಪಷ್ಟೀಕರಣ ಕೋರಿ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಈ ಬೆಳವಣಿಗೆಯು ಪರಿಸರವಾದಿಗಳು ಮತ್ತು ಸರ್ಕಾರದ ನಡುವಿನ ಚರ್ಚೆಯನ್ನು ತೀವ್ರಗೊಳಿಸಿದೆ.
ಪ್ರಸ್ತುತ ನಿಯಮಗಳ ಪ್ರಕಾರ, ಎಲ್ಲಾ ಕೆರೆಗಳ ಸುತ್ತಲೂ 30 ಮೀಟರ್‌ಗಳಷ್ಟು ಬಫರ್ ಜೋನ್ ಕಡ್ಡಾಯವಾಗಿದೆ. ಈ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶವಿಲ್ಲ. ಆದರೆ, ಸರ್ಕಾರವು ಈ ನಿಯಮವನ್ನು ಬದಲಾಯಿಸಲು ಮುಂದಾಗಿದ್ದು, ಕೆರೆಯ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್ ಜೋನ್ ನಿಗದಿಪಡಿಸಲು ತಿದ್ದುಪಡಿ ತಂದಿದೆ.
ತಿದ್ದುಪಡಿ ಪ್ರಸ್ತಾಪಗಳು
* 5 ಗುಂಟೆಗಿಂತ ಕಡಿಮೆ: 0 ಮೀಟರ್ ಬಫರ್ ಜೋನ್
* 5 ಗುಂಟೆಯಿಂದ 1 ಎಕರೆ: 3 ಮೀಟರ್
* 1ರಿಂದ 10 ಎಕರೆ: 6 ಮೀಟರ್
* 10ರಿಂದ 25 ಎಕರೆ: 12 ಮೀಟರ್
* 25ರಿಂದ 100 ಎಕರೆ: 24 ಮೀಟರ್
* 100 ಎಕರೆಗಿಂತ ಹೆಚ್ಚು: 30 ಮೀಟರ್
ಈ ತಿದ್ದುಪಡಿಯ ಪ್ರಮುಖಾಂಶವೆಂದರೆ, ಮರುನಿಗದಿಪಡಿಸಿದ ಬಫರ್ ವಲಯದಲ್ಲಿ ರಸ್ತೆ, ಸೇತುವೆಗಳಂತಹ ಮೂಲಸೌಕರ್ಯ ಕಾಮಗಾರಿಗಳಿಗೂ ಅವಕಾಶ ನೀಡುವುದು.
ರಾಜ್ಯಪಾಲರು ವಾಪಸ್ ಕಳುಹಿಸಿದ್ದೇಕೆ?
ಮಳೆಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆಯೂ ಈ ವಿಧೇಯಕ ಅಂಗೀಕಾರಗೊಂಡಿತ್ತು. ಆದರೆ, "ಬೆಂಗಳೂರು ಟೌನ್‌ಹಾಲ್ ಅಸೋಸಿಯೇಷನ್" ಎಂಬ ಸಂಸ್ಥೆಯು ಈ ವಿಧೇಯಕಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತ್ತು.
ತಜ್ಞರ ಪ್ರಕಾರ, ಪ್ರಸ್ತುತ ಇರುವ 30 ಮೀಟರ್ ಬಫರ್ ಜೋನ್ ಕೂಡ ಸಾಕಾಗುವುದಿಲ್ಲ. ಪರಿಸರ ಸಮತೋಲನಕ್ಕಾಗಿ ಇದನ್ನು 300 ಮೀಟರ್‌ಗೆ ಹೆಚ್ಚಿಸಬೇಕು. ಸರ್ಕಾರವು ವಿಧೇಯಕ ತಿದ್ದುಪಡಿಗೆ ಮುನ್ನ ತಜ್ಞರೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಈ ತಿದ್ದುಪಡಿಯು ಸಂವಿಧಾನ ಮತ್ತು ಕಾನೂನಿನ ಉಲ್ಲಂಘನೆಯಾಗಿದ್ದು, ನಾಗರಿಕರ ಜಲ ಭದ್ರತೆ ಮತ್ತು ಆರೋಗ್ಯಕರ ಪರಿಸರಕ್ಕೆ ಹಾನಿ ಉಂಟುಮಾಡುತ್ತದೆ.
ಈ ಆಕ್ಷೇಪಣೆಗಳನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯಪಾಲರು, ವಿಧೇಯಕವು ಪರಿಸರ ಮತ್ತು ಜಲಮೂಲಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸ್ಪಷ್ಟೀಕರಣ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ವಿಧೇಯಕವನ್ನು ಹಿಂದಿರುಗಿಸಿದ್ದಾರೆ.
ವಿವಾದದ ಮೂಲ ಮತ್ತು ಪರಿಣಾಮಗಳೇನು?
ಕೆರೆಗಳ ಬಫರ್ ಜೋನ್ ಕಡಿಮೆ ಮಾಡುವುದರಿಂದ ರಿಯಲ್ ಎಸ್ಟೇಟ್ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಭೂಮಿ ಲಭ್ಯವಾಗುತ್ತದೆ ಎಂಬುದು ಸರ್ಕಾರದ ಚಿಂತನೆಯಾಗಿರಬಹುದು. ಆದರೆ, ಪರಿಸರವಾದಿಗಳ ಪ್ರಕಾರ, ಇದು ಕೆರೆಗಳ ಅಳಿವಿಗೆ ಕಾರಣವಾಗುತ್ತದೆ. ಬಫರ್ ಜೋನ್‌ಗಳು ಕೆರೆಗಳಿಗೆ ಕಲುಷಿತ ನೀರು ಸೇರುವುದನ್ನು ತಡೆಯುವ ನೈಸರ್ಗಿಕ ಫಿಲ್ಟರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಇವುಗಳನ್ನು ಕಡಿಮೆ ಮಾಡುವುದರಿಂದ ಜಲಮೂಲಗಳು ನಾಶವಾಗಿ, ಅಂತರ್ಜಲ ಮಟ್ಟ ಕುಸಿಯುತ್ತದೆ ಮತ್ತು ನಗರಗಳಲ್ಲಿ ಪ್ರವಾಹದಂತಹ ಸಮಸ್ಯೆಗಳು ಹೆಚ್ಚಾಗುತ್ತವೆ.
ಮುಂದೇನು?
ಈಗ ಸರ್ಕಾರವು ರಾಜ್ಯಪಾಲರು ಎತ್ತಿರುವ ಪ್ರಶ್ನೆಗಳಿಗೆ ಸಮರ್ಪಕ ಸ್ಪಷ್ಟೀಕರಣವನ್ನು ನೀಡಿ, ವಿಧೇಯಕವನ್ನು ಮರುಸಲ್ಲಿಕೆ ಮಾಡಬೇಕಾಗುತ್ತದೆ. ಸರ್ಕಾರ ನೀಡುವ ಸ್ಪಷ್ಟೀಕರಣವನ್ನು ಆಧರಿಸಿ, ರಾಜ್ಯಪಾಲರು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದು ವೇಳೆ ಸರ್ಕಾರವು ವಿಧೇಯಕವನ್ನು ಯಥಾವತ್ತಾಗಿ ಎರಡನೇ ಬಾರಿಗೆ ಅಂಗೀಕರಿಸಿ ಕಳುಹಿಸಿದರೆ, ಆಗ ರಾಜ್ಯಪಾಲರು ಅಂಕಿತ ಹಾಕಬೇಕಾದ ಸಾಂವಿಧಾನಿಕ ಪರಿಸ್ಥಿತಿ ಎದುರಾಗಲಿದೆ. ಆದರೆ, ಈ ಪ್ರಕ್ರಿಯೆಯು ಸರ್ಕಾರದ ಪರಿಸರ ಕಾಳಜಿಯನ್ನು ಪ್ರಶ್ನಿಸುವಂತೆ ಮಾಡಿದೆ.