ಸರ್ಕಾರ ಪತನ ಆಗಲ್ಲ, ಬಿಜೆಪಿ– ಜೆಡಿಎಸ್‌ನವರೇ ಬರಲಿದ್ದಾರೆ: ಸಚಿವ ಎಂ.ಬಿ ಪಾಟೀಲ್

ʻಲೋಕಸಭೆ ಚುನಾವಣೆಯ ನಂತರ ರಾಜ್ಯ ಸರ್ಕಾರ ಬೀಳಲಿದೆ ಎನ್ನುವುದು ಕೇವಲ ರಾಜಕೀಯ ಹೇಳಿಕೆಯಷ್ಟೇ. ರಾಜ್ಯ ಸರ್ಕಾರ ಬೀಳಲಿದೆ ಎಂದು ಎಚ್.ಡಿ ಕುಮಾರಸ್ವಾಮಿ ಕನಸು ಕಾಣುತ್ತಿದ್ದಾರೆʼ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಎಂ.ಬಿ ಪಾಟೀಲ್ ಹೇಳಿದರು.;

Update: 2024-05-11 13:24 GMT
ಎಂ.ಬಿ ಪಾಟೀಲ್‌, ಸಚಿವ

ʻಲೋಕಸಭೆ ಚುನಾವಣೆಯ ನಂತರ ರಾಜ್ಯ ಸರ್ಕಾರ ಬೀಳಲಿದೆ ಎನ್ನುವುದು ಕೇವಲ ರಾಜಕೀಯ ಹೇಳಿಕೆಯಷ್ಟೇ. ರಾಜ್ಯ ಸರ್ಕಾರ ಬೀಳಲಿದೆ ಎಂದು ಎಚ್.ಡಿ ಕುಮಾರಸ್ವಾಮಿ ಕನಸು ಕಾಣುತ್ತಿದ್ದಾರೆʼ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಎಂ.ಬಿ ಪಾಟೀಲ್ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻಲೋಕಸಭಾ ಚುನಾವಣೆಯ ನಂತರ ನಮ್ಮ ಸರ್ಕಾರ ಪತನವಾಗುವುದಕ್ಕೆ ಸಾಧ್ಯವೇ ಇಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವುದು ಅಷ್ಟು ಸುಲಭವಲ್ಲ. ಕನಿಷ್ಟವೆಂದರೂ ನಮ್ಮ ಪಕ್ಷದಿಂದ 65 ಶಾಸಕರು ಪಕ್ಷ ಬಿಡಬೇಕು. ಒಂದಿಬ್ಬರು ಕಾಂಗ್ರೆಸ್ ಶಾಸಕರು ಸಹ ಹೋಗುವುದಿಲ್ಲ. ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರೇ ಕಾಂಗ್ರೆಸ್ ಸೇರ್ಪಡೆಯಾಗುವುದಕ್ಕೆ ಸಿದ್ಧರಾಗಿದ್ದಾರೆʼ ಎಂದು ಹೇಳಿದರು.

ʻಬಿಜೆಪಿಯ ಹಲವು ಶಾಸಕರು ಕಾಂಗ್ರೆಸ್‌ನ ಸಂಪರ್ಕದಲ್ಲಿ ಇದ್ದಾರೆ. ಜೆಡಿಎಸ್ ಮುಳುಗುವ ಹಡಗು, ಅಲ್ಲಿಂದಲೇ ಇಲ್ಲಿಗೆ ಹಲವು ಮುಖಂಡರು ಬರುವುದಕ್ಕೆ ಸಿದ್ಧರಾಗಿದ್ದಾರೆ. ಜೆಡಿಎಸ್‌ನಲ್ಲಿರುವವರು ಅತಂತ್ರರಾಗಿದ್ದಾರೆ. ಜೆಡಿಎಸ್ ಪಕ್ಷದ ನಾಯಕರಿಗೆ ಪೆನ್‌ಡ್ರೈವ್‌ ಪ್ರಕರಣ ತಲೆನೋವಾಗಿ ಪರಿಣಮಿಸಿದೆʼ ಎಂದರು.

20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು

ʻರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರ ಮನಸ್ಸನ್ನು ಗೆದಿದ್ದು, ಕರ್ನಾಟಕದಲ್ಲಿ ಕನಿಷ್ಟ 20 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ವಿಜಯಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಲೀನ್‌ಚಿಟ್‌ಗಾಗಿ ಸಿಬಿಐ ಮೊರೆ 

ʻಪ್ರಜ್ವಲ್ ರೇವಣ್ಣ ಕಾಮಕಾಂಡ (ಪೆನ್‌ಡ್ರೈವ್‌ ಪ್ರಕರಣ) ವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಈ ರೀತಿ ಮಾಡುವ ಮೂಲಕ ಕ್ಲೀನ್ ಚಿಟ್ ಪಡೆದು, ಬಿಜೆಪಿಯಿಂದ ಪರಿಶುದ್ಧತೆಯ ಸರ್ಟಿಫಿಕೇಟ್ ತೆಗೆದುಕೊಳ್ಳುವ ಪ್ಲಾನ್ ಮಾಡಿದ್ದಾರೆʼ ಎಂದು ದೂರಿದರು.  

ಚುನಾವಣೆಯ ನಂತರ ರಾಜಕೀಯ ಧ್ರುವೀಕರಣ

ʻಲೋಕಸಭೆ ಚುನಾವಣೆಯ ನಂತರ ರಾಜ್ಯದಲ್ಲಿ ಖಂಡಿತವಾಗಿಯೂ ರಾಜಕೀಯ ಧ್ರುವೀಕರಣ ನಡೆಯಲಿದೆ. ಬಿಜೆಪಿ– ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರಲಿದ್ದಾರೆʼ ಎಂದರು. ರಾಜ್ಯ ಕಾಂಗ್ರೆಸ್‌ನಲ್ಲಿ ಬದಲಾವಣೆ ಆಗಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಎಂ.ಬಿ ಪಾಟೀಲ್‌, ʻಕಾಂಗ್ರೆಸ್ ಹೈಕಮಾಂಡ್ ಸೂಕ್ತ ಕಾಲದಲ್ಲಿ ತೀರ್ಮಾನ ತೆಗೆದುಕೊಳ್ಳಲಿದೆʼ ಎಂದಷ್ಟೇ ಉತ್ತರಿಸಿದರು.

Tags:    

Similar News