ಪಡಿತರ ಸಾಗಣೆ ಲಾರಿ ಮಾಲೀಕರಿಗೆ 244.10 ಕೋಟಿ ರೂಪಾಯಿ ಪಾವತಿಸಿದ ಸರ್ಕಾರ; ಮುಷ್ಕರ ಅಂತ್ಯ
ಈ ನಿರ್ಧಾರದ ಹಿನ್ನೆಲೆಯಲ್ಲಿ ಲಾರಿ ಮಾಲೀಕರ ಬೇಡಿಕೆ ಈಡೇರಿದ್ದು ಅವರು ತಮ್ಮ ಮುಷ್ಕರವನ್ನು ಹಿಂಪಡೆದು ಎಂದಿನಂತೆ ಸಾಗಣೆ ಕಾರ್ಯವನ್ನು ಪುನರಾರಂಭಿಸಿದ್ದಾರೆ.;
ಪಡಿತರ ಧಾನ್ಯಗಳನ್ನು ಸಾಗಿಸಿದ್ದ ಲಾರಿ ಮಾಲೀಕರಿಗೆ ಸರ್ಕಾರ ಹಲವು ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದ 244.10 ಕೋಟಿ ರೂಪಾಯಿಯನ್ನು ಕೊನೆಗೂ ಸರ್ಕಾರ ಬಿಡುಗಡೆ ಮಾಡಿದೆ. ಈ ಸಂಬಂಧ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದ್ದು, ಬಾಕಿ ಹಣ ಪಾವತಿಯಾಗದ ಕಾರಣ ನಡೆಸುತ್ತಿದ್ದ ಲಾರಿ ಮಾಲೀಕರ ಮುಷ್ಕರ ಅಂತ್ಯಗೊಂಡಿದೆ.
ರಾಜ್ಯಾದ್ಯಂತ ಪಡಿತರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳಿಗೆ ಸಾಗಿಸುವ ನೂರಾರು ಲಾರಿ ಮಾಲೀಕರು, ಕಳೆದ ಕೆಲವು ತಿಂಗಳಿಂದ ತಮ್ಮ ಬಾಕಿ ಬಿಲ್‌ಗಳನ್ನು ಪಾವತಿಸಿಲ್ಲ ಎಂದು ಆರೋಪಿಸಿದ್ದರು. ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮಾಲೀಕರು, ತಮ್ಮ ಕುಟುಂಬ ನಿರ್ವಹಣೆಗೂ ಕಷ್ಟಪಡುವಂತಾಗಿತ್ತು. ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದ ಕಾರಣ, ಅನಿವಾರ್ಯವಾಗಿ ಸಾಗಣೆ ಕಾರ್ಯವನ್ನು ಸ್ಥಗಿತಗೊಳಿಸಿ ಮುಷ್ಕರಕ್ಕೆ ಕರೆ ನೀಡಿದ್ದರು. ಈ ಮುಷ್ಕರದಿಂದ ಪಡಿತರ ವಿತರಣೆಯಲ್ಲಿ ವ್ಯತ್ಯಯವಾಗುವ ಆತಂಕ ಸೃಷ್ಟಿಯಾಗಿತ್ತು.
ಲಾರಿ ಮಾಲೀಕರ ಬೇಡಿಕೆಗಳಿಗೆ ಸ್ಪಂದಿಸಿದ ಸರ್ಕಾರ, ಬಾಕಿ ಉಳಿಸಿಕೊಂಡಿದ್ದ 24410.22 ಲಕ್ಷ ರೂಪಾಯಿಗಳಷ್ಟು ಹಣವನ್ನು ಬಿಡುಗಡೆ ಮಾಡಲು ಆದೇಶಿಸಿದೆ. ಈ ನಿರ್ಧಾರವು ಲಾರಿ ಮಾಲೀಕರಲ್ಲಿ ಸಂತಸ ಮೂಡಿಸಿದ್ದು, ಅವರು ತಮ್ಮ ಮುಷ್ಕರವನ್ನು ಹಿಂಪಡೆದು ಎಂದಿನಂತೆ ಸಾಗಣೆ ಕಾರ್ಯವನ್ನು ಪುನರಾರಂಭಿಸಿದ್ದಾರೆ.