ಸರ್ಕಾರದ ಹೊಸ ಆದೇಶ: ಹಳೆಯ ನೇಮಕಾತಿ ಅಧಿಸೂಚನೆಗಳು ರದ್ದು, ಕೃಷಿ ಇಲಾಖೆ ಪರೀಕ್ಷೆ ಮುಂದೂಡಿಕೆ
ಕೃಷಿ ಇಲಾಖೆ ನೇಮಕಾತಿಯನ್ನು ಮರು ಅಧಿಸೂಚನೆ ಹೊರಡಿಸಬೇಕು ಎಂದು ಪರೀಕ್ಷಾರ್ಥಿಗಳು ಮುಖ್ಯ ಕಾರ್ಯದರ್ಶಿ ಹಾಗೂ ಸಚಿವರುಗಳನ್ನು ಭೇಟಿ ಮಾಡಿ, ಒಳ ಮೀಸಲಾತಿ ಅನ್ವಯವೇ ಪರೀಕ್ಷೆ ನಡೆಸಬೇಕು ಎಂದು ಮನವಿ ಸಲ್ಲಿಸಿದ್ದರು. ಈ ಕುರಿತು ʼದ ಫೆಡರಲ್ ಕರ್ನಾಟಕʼ ವರದಿ ಮಾಡಿತ್ತು.;
ಕರ್ನಾಟಕ ಲೋಕಸೇವಾ ಆಯೋಗ
ರಾಜ್ಯ ಸರ್ಕಾರವು ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಜಾರಿಯಲ್ಲಿರುವ ಒಳ ಮೀಸಲಾತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ, 2024ರ ಅಕ್ಟೋಬರ್ 28ರ ನಂತರ ಹೊರಡಿಸಲಾದ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ.
ರಾಜ್ಯ ಸಚಿವ ಸಂಪುಟದ ನಿರ್ಣಯದಂತೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (ಡಿಪಿಎಆರ್) ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಿದೆ. "ಸರ್ಕಾರ ನಿಗದಿಪಡಿಸಿರುವ ಒಳ ಮೀಸಲಾತಿ ನಿಯಮಗಳ ಅನ್ವಯವೇ ಹೊಸದಾಗಿ ಅಧಿಸೂಚನೆಗಳನ್ನು ಹೊರಡಿಸಿ, ಕಾಲಮಿತಿಯೊಳಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು" ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ.
ರದ್ದಾಗಲು ಕಾರಣವೇನು?
ಸರ್ಕಾರವು ಜಾರಿಗೊಳಿಸಿರುವ ಹೊಸ ಒಳ ಮೀಸಲಾತಿ ನೀತಿಯನ್ನು ಅನೇಕ ನೇಮಕಾತಿ ಅಧಿಸೂಚನೆಗಳು ಪಾಲಿಸಿರಲಿಲ್ಲ. ಈ ಅಧಿಸೂಚನೆಗಳು ಹೊರಬಿದ್ದ ನಂತರ, ಸರ್ಕಾರವು ಕ್ರೀಡಾಪಟುಗಳಿಗೆ ಶೇ. 2ರಷ್ಟು ಮೀಸಲಾತಿಯನ್ನು ಕಲ್ಪಿಸಿ ಆದೇಶ ಹೊರಡಿಸಿತ್ತು. ಈ ಬದಲಾವಣೆಗಳನ್ನು ಹಳೆಯ ಅಧಿಸೂಚನೆಗಳಲ್ಲಿ ಸೇರಿಸದ ಕಾರಣ, ಗೊಂದಲಗಳು ಉಂಟಾಗಿದ್ದವು. ಈ ಹಿನ್ನೆಲೆಯಲ್ಲಿ, ಪಾರದರ್ಶಕತೆ ಮತ್ತು ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸಲು ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದೆ.
ಕೃಷಿ ಇಲಾಖೆ ಪರೀಕ್ಷೆ ಮುಂದೂಡಿಕೆ
ಸರ್ಕಾರದ ಈ ಹೊಸ ಆದೇಶದ ನೇರ ಪರಿಣಾಮವಾಗಿ, ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಕೃಷಿ ಇಲಾಖೆಯ 945 'ಬಿ' ವೃಂದದ ಅಧಿಕಾರಿಗಳ ಹುದ್ದೆಗಳ ನೇಮಕಾತಿಗಾಗಿ ನಡೆಸಲು ಉದ್ದೇಶಿಸಿದ್ದ ಪರೀಕ್ಷೆಗಳನ್ನು ಮುಂದೂಡಿದೆ.
ಕೆಪಿಎಸ್‌ಸಿ, 2024ರ ಸೆಪ್ಟೆಂಬರ್ 20ರಂದು ಈ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ನಂತರ, ಕ್ರೀಡಾಪಟುಗಳ ಮೀಸಲಾತಿ ಸೇರಿಸಿ ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಿತ್ತು. ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 6 ಮತ್ತು 7ರಂದು ಹಾಗೂ ಇತರ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 27 ಮತ್ತು 28ರಂದು ಪರೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಿ, ಪ್ರವೇಶ ಪತ್ರಗಳನ್ನೂ ಬಿಡುಗಡೆ ಮಾಡಿತ್ತು.
ಆದರೆ, ಒಳ ಮೀಸಲಾತಿಯನ್ನು ಸರಿಯಾಗಿ ಅಳವಡಿಸಿಲ್ಲ ಎಂದು ಆರೋಪಿಸಿ, ಪರೀಕ್ಷಾರ್ಥಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮತ್ತು ಸಚಿವರಿಗೆ ಮನವಿ ಸಲ್ಲಿಸಿದ್ದರು. ಅಭ್ಯರ್ಥಿಗಳ ಈ ಮನವಿಯನ್ನು ಪರಿಗಣಿಸಿದ ಸರ್ಕಾರ, ಇದೀಗ ಎಲ್ಲಾ ಹಳೆಯ ಅಧಿಸೂಚನೆಗಳನ್ನು ರದ್ದುಗೊಳಿಸಿ, ಹೊಸದಾಗಿ ಪ್ರಕ್ರಿಯೆ ಆರಂಭಿಸಲು ಆದೇಶಿಸಿದೆ.
ಈ ನಿರ್ಧಾರದಿಂದಾಗಿ, ಕೃಷಿ ಇಲಾಖೆಯ ಪರೀಕ್ಷೆಗಳು ಮಾತ್ರವಲ್ಲದೆ, ಇದೇ ರೀತಿ ಹೊರಡಿಸಲಾಗಿದ್ದ ಇತರ ಇಲಾಖೆಗಳ ನೇಮಕಾತಿ ಪ್ರಕ್ರಿಯೆಗಳ ಮೇಲೂ ಪರಿಣಾಮ ಬೀರಲಿದೆ. ಶೀಘ್ರದಲ್ಲೇ ಒಳ ಮೀಸಲಾತಿ ನಿಯಮಗಳನ್ನು ಅನುಸರಿಸಿ, ಹೊಸ ಅಧಿಸೂಚನೆಗಳನ್ನು ಹೊರಡಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಕೆಪಿಎಸ್‌ಸಿಯ ಈ ನಿರ್ಧಾರದ ವಿರುದ್ಧ ಪರೀಕ್ಷಾರ್ಥಿಗಳು ಮುಖ್ಯ ಕಾರ್ಯದರ್ಶಿ ಹಾಗೂ ಸಚಿವರುಗಳನ್ನು ಭೇಟಿ ಮಾಡಿ ಒಳ ಮೀಸಲಾತಿ ಅನ್ವಯವೇ ಪರೀಕ್ಷೆ ನಡೆಸಬೇಕು ಎಂದು ಮನವಿ ಸಲ್ಲಿಸಿದ್ದರು. ಈ ಕುರಿತು ʼದ ಫೆಡರಲ್ ಕರ್ನಾಟಕʼ ವರದಿ ಮಾಡಿತ್ತು. ಇದೀಗ ಸರ್ಕಾರ ಆದೇಶ ಹೊರಡಿಸಿರುವುದರಿಂದ ಕೃಷಿ ಇಲಾಖೆಯ ಪರೀಕ್ಷೆಗಳನ್ನು ಕೆಪಿಎಸ್‌ಸಿ ಮುಂದೂಡಿದೆ.