ಗ್ರಾಮ ಪಂಚಾಯತಿ ನೌಕರರಿಗೆ ಸಿಹಿ ಸುದ್ದಿ: ಕೌನ್ಸೆಲಿಂಗ್‌ ಮೂಲಕ ವರ್ಗಾವಣೆಗೆ ಸರ್ಕಾರ ಅಧಿಸೂಚನೆ

ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ 1 ಹಾಗೂ ಗ್ರೇಡ್ 2, ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವುದಾಗಿ ರಾಜ್ಯ ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.

Update: 2024-11-20 09:12 GMT

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯತಿ ನೌಕರರು, ಸದಸ್ಯರು ನಡೆಸಿದ್ದ ಅನಿರ್ದಿಷ್ಟಾವಧಿ ಮುಷ್ಕರದ ಪರಿಣಾಮ ನೌಕರರ ವರ್ಗಾವಣೆಗೆ ಅಧಿಸೂಚನೆ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಅಂತಿಮ ಅಧಿಸೂಚನೆ ಹೊರಡಿಸಿದೆ.

ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ 1 ಹಾಗೂ ಗ್ರೇಡ್ 2, ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವುದಾಗಿ ರಾಜ್ಯ ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.


ಶೇ 15 ರಷ್ಟು ವರ್ಗಾವಣೆಗೆ ಒಪ್ಪಿಗೆ

ಗ್ರಾಮ ಪಂಚಾಯತಿಗಳಲ್ಲಿ ಶೇ 15ರಷ್ಟು ವಿವಿಧ ನೌಕರರ ವರ್ಗಾವಣೆಗೆ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ.  ಸಾರ್ವಜನಿಕ ಹಿತಾಸಕ್ತಿ, ಸಾಮಾನ್ಯ ಕೋರಿಕೆಯಲ್ಲಿ ಶೇ. 9, ಪತಿ-ಪತ್ನಿ ಪ್ರಕರಣಗಳಲ್ಲಿ ಶೇ. 3 , ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿರುವ ಒಂಟಿ ಮಹಿಳೆ ಅಥವಾ ಒಂಟಿ ಪೋಷಕರ ಪ್ರಕರಣಗಳು, ದೈಹಿಕವಾಗಿ ಅವಲಂಬಿತ ಪತಿ/ಪತ್ನಿ ಪ್ರಕರಣಗಳು, ವಿಕಲಚೇತನರು, ಗಂಭೀರ ಕಾಯಿಲೆ ಇರುವ ಮಕ್ಕಳನ್ನು ಹೊಂದಿರುವ ನೌಕರರಿಗೆ ಶೇ. 1, ಗಂಭೀರ ಅನಾರೋಗ್ಯ ಪ್ರಕರಣಗಳಲ್ಲಿ ಶೇ. 1, ಅಂಗವಿಕಲತೆಯ ಪ್ರಮಾಣ ಹೆಚ್ಚಿರುವ ನೌಕರರ ಪ್ರಕರಣದಲ್ಲಿ ಶೇ. 1 ಸೇರಿದಂತೆ ಶೇ. 15ರಷ್ಟು ಪ್ರಕರಣಗಳನ್ನು ಕೌನ್ಸೆಲಿಂಗ್‌ ಮೂಲಕ ವರ್ಗಾವಣೆಗೆ ಆದೇಶಿಸಿದೆ.

ಅಂತರ ಜಿಲ್ಲಾ ವರ್ಗಾವಣೆ, ಮುಂಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳ ೀಡೇರಿಕೆಗೆ ಒತ್ತಾಯಿಸಿ ಬೆಂಗಳೂರಿ ಸ್ವಾತಂತ್ರ್ಯ ಉದ್ಯಾನದಲ್ಲಿ ನ.೨೭ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಗ್ರಾಮ ಪಂಚಾಯತಿ ನೌಕರರ ಶ್ರೇಯೋಭಿವೃದ್ಧಿ ಸಂಘ ನಿರ್ಧರಿಸಿ, ಕರೆ ಕೊಟ್ಟಿತ್ತು. ಇದರ ಬೆನ್ನಲ್ಲೇ ವರ್ಗಾವಣೆ ಬೇಡಿಕೆಯನ್ನು ಈಡೇರಿಸಿದೆ. ಆದರೆ, ಉಳಿದ ಬೇಡಿಕೆಗಳ ಕುರಿತು ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ನೌರರ ಸಂಘ ತಿಳಿಸಿದೆ. 

ನೌಕರರ ಬೇಡಿಕೆಗಳೇನು?

ರಾಜ್ಯದ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು ‘ಬಿ’ ಗುಂಪಿನ ಹುದ್ದೆಗಳಾಗಿ ಉನ್ನತೀಕರಿಸಬೇಕು. ವೇತನ ಶ್ರೇಣಿ ನಿಗದಿ ಮಾಡಬೇಕು. ಸೇವಾಹಿರಿತನ ಹೊಂದಿರುವ ನೌಕರರಿಗೆ ಕಾಲಮಿತಿಯೊಳಗೆ ಮುಂಬಡ್ತಿ ನೀಡಬೇಕು. ಪಂಚಾಯತ್ ರಾಜ್ ಇಲಾಖೆಗೆ ಬೇರೆ ಇಲಾಖೆ ಅಧಿಕಾರಿಗಳು ಮತ್ತು ನೌಕರರು ನಿಯೋಜಿಸಿರುವುದನ್ನು ರದ್ದುಪಡಿಸಬೇಕು. ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರ ಗೌರವ ಧನ ಹೆಚ್ಚಿಸಬೇಕು. ಜೇಷ್ಠತಾ ಪಟ್ಟಿ ಅಂತಿಮಗೊಳಿಸಬೇಕು. ಕಾರ್ಮಿಕರ ರಾಜ್ಯ ವಿಮೆ ಮತ್ತು ಭವಿಷ್ಯ ನಿಧಿ ನೀಡಬೇಕು ಎಂದು ಆಗ್ರಹಿಸಿ ಮುಷ್ಕರ ನಡೆಸಿದ್ದರು.

ಈ ಮಧ್ಯೆ, ಗ್ರಾಮ ಪಂಚಾಯತಿ ನೌಕರರ ಶ್ರೇಯೋಭಿವೃದ್ಧಿ ಸಂಘವು ನ.27ರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಗ್ರಾಮ ಪಂಚಾಯತಿ ನೌಕರರನ್ನು ಸಿ ಮತ್ತು ಡಿ ದರ್ಜೆಗೇರಿಸಬೇಕು;  ಸರ್ಕಾರದ ಸಿ ಮತ್ತು ಡಿ ಗ್ರೂಪ್‌ ನೌಕರರಿಗೆ ಇರುವಂತೆ ಪಂಚಾಯತಿ ನೌಕರರಿಗೂ ವೃಂದ ಮತ್ತು ನೇಮಕಾತಿ ನಿಯಮ ರೂಪಿಸಿ ಅನುಷ್ಠಾನಗೊಳಿಸಬೇಕು; ಗ್ರಾಮ ಪಂಚಾಯತಿ ನೌಕರರಿಗೆ ಸಮರ್ಪಕ ವೇತನ ಶ್ರೇಣಿ ನಿಗದಿಪಡಿಸಬೇಕು;  ಆರೋಗ್ಯ ಭದ್ರತೆ, ಆರ್ಥಿಕ ಭದ್ರತೆ ಒದಗಿಸಬೇಕು; ಪಂಚಾಗಳಲ್ಲಿ 20-25 ವರ್ಷ ಸೇವೆ ಸಲ್ಲಿಸಿರುವ ನೌಕರರಿಗೆ ಮುಂಬಡ್ತಿ ನೀಡಬೇಕು;  ಕಾರ್ಮಿಕ ಇಲಾಖೆಯು ಕಾಲ ಕಾಲಕ್ಕೆ ಕನಿಷ್ಠ ವೇತನ ಪರಿಷ್ಕರಿಸಬೇಕು. ಕ್ಲರ್ಕ್, ಡಿಇಓ, ಬಿಲ್ ಕಲೆಕ್ಟರ್ ಹಾಗೂ ಡಾಟಾ ಎಂಟ್ರಿ ಅಪರೇಟರ್‌ಗಳಿಗೆ ಸಿ ದರ್ಜೆ ಸ್ಥಾನಮಾನ ನೀಡಬೇಕು;  ಅಟೆಂಡರ್, ಕ್ಲೀನರ್, ವಾಟರ್ ಮ್ಯಾನ್/ ಪಂಪು ಚಾಲಕ ಇತ್ಯಾದಿ ವೃಂದದವರಿಗೆ ಡಿ ದರ್ಜೆ ಸ್ಥಾನಮಾನ ನೀಡಬೇಕು ಎಂಬುದು ಅವರ ಬೇಡಿಕೆಗಳಾಗಿವೆ.

ಮಾತುಕತೆ

ಈ ಹಿಂದೆ ಗ್ರಾಮ ಪಂಚಾಯತಿ ಸದಸ್ಯರು, ಅಧಿಕಾರಿಗಳು ಹಾಗೂ ನೌಕರರ ನ್ಯಾಯಯುತ ಬೇಡಿಕೆಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ಅಗತ್ಯವಿರುವ ತಜ್ಞರ ಸಮಿತಿ ರಚಿಸುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು.  ಈ ಸಂಬಂಧ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯರಾದ ದಿನೇಶ್ ಗೂಳಿಗೌಡ ಅವರು ಗ್ರಾಮ ಪಂಚಾಯತಿ ನೌಕರರ ಬೇಡಿಕೆ ಈಡೇರಿಸಲು ತಜ್ಞರ ಸಮಿತಿ ರಚಿಸುವಂತೆ ಸಿಎಂ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದಿದ್ದರು.


Tags:    

Similar News