ಅಣ್ಣನಕುಲೆ, ಅಕ್ಕನಕುಲೆ... ನನ ಗೂಗಲ್‌ಡ್ ತುಳು ಓದುಗನೆ?
ಸೋದರ ಸೋದರಿಯರೇ... ಇನ್ನು ಗೂಗಲ್‌ನಲ್ಲಿ ತುಳು ಓದುತ್ತೀರಾ?. ಇದು ಈ ಸುದ್ದಿಗೆ ಕೊಟ್ಟಿರುವ ತಲೆಬರೆಹದ ಕನ್ನಡ ಭಾಷಾಂತರ. ಇಂಗ್ಲಿಷ್‌ನಲ್ಲಿ Brothers and sisters... did you read Tulu on Google? ಎಂದು ಓದಿಕೊಳ್ಳಬಹುದು. ಅಂತೂ ಗೂಗಲ್ ಕರ್ನಾಟಕ ಕರಾವಳಿಯ ತುಳು ಭಾಷೆಗೆ ಮಾನ್ಯತೆ ಕೊಟ್ಟಿದೆ!
ಸುಮಾರು 2300 ವರ್ಷಗಳ ಹಿಂದಿನ ಭಾಷೆ ಎನ್ನಲಾದ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಸಂಬಂಧ ಚರ್ಚೆ ಕೇಳಿ ಬರುತ್ತಲೇ ಇದೆ. ಈ ಹಿಂದೆ ರಾಜ್ಯದ ಬಿಜೆಪಿ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಅದು ನೆನೆಗುದಿಗೆ ಬಿದ್ದಿದೆ.
ಆದರೆ, ಜಗತ್ತನ್ನೇ ತನ್ನ ಸಂಸ್ಕೃತಿ ಮತ್ತು ವೈಶಿಷ್ಟ್ಯದೊಂದಿಗೆ ಆಕರ್ಶಿಸಿರುವ ಕರಾವಳಿಯ ಮೂಲಭಾಷೆ, ಹಾಗೂ ಪಂಚ ದ್ರಾವಿಡ ಭಾಷೆಗಳಲ್ಲಿ (ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ತುಳು)ವನ್ನು ಈಗ ಜಾಗತಿಕ ಐಟಿ ದೈತ್ಯ ಗೂಗಲ್ ಸಂಸ್ಥೆ ಮಾನ್ಯ ಮಾಡಿದೆ.
ತನ್ನ ಭಾಷಾಂತರ ಮಾಡುವ ಟೂಲ್ "ಗೂಗಲ್ ಟ್ರಾನ್ಸ್ಲೇಟ್ (Google Translate )ನಲ್ಲಿ ತುಳು ಭಾಷೆಯನ್ನೂ ಅಳವಾಡಿಸಲಾಗಿದ್ದು, ಯಾವುದೇ ಭಾಷೆಯಿಂದ ತುಳುವಿಗೂ, ತುಳುವಿನಿಂದ ಗೂಗಲ್ ಮಾನ್ಯ ಮಾಡಿರುವ ಇತರ ಭಾಷೆಗಳಿಗೂ ಭಾಷಾಂತರ ಮಾಡಬಹುದಾಗಿದೆ.
ತುಳು ಭಾಷೆಯನ್ನು ಸಮಗ್ರವಾಗಿ ಇಲ್ಲಿ ಸೇರಿಸಲು ಸಾಧ್ಯವಿಲ್ಲವಾದರೂ, ಕ್ರಮೇಣ ತುಳುವರು ಈ ಟೂಲ್ ಬಳಸುವುದರಿಂದ ತುಳುವಿನ ಹೆಚ್ಚು ಶಬ್ದಗಳನ್ನು ಈ ಟೂಲ್ ಗ್ರಹಿಸಿ ಬಳಕೆದಾರರಿಗೆ ಇನ್ನಷ್ಟು ಅನುಕೂಲ ಆಗಲಿದೆ.
ಇಲ್ಲಿ ಬರೆಯಲಾಗಿರುವ ಸುದ್ದಿಯನ್ನೇ ಕನ್ನಡದಿಂದ ತುಳುವಿಗೆ ಹೇಗೆ ಭಾಷಾಂತರಗೊಳಿಸುತ್ತದೆ.. ಇಲ್ಲಿ ನೋಡಿ..
ತುಳು ಲಿಪಿ
ತುಳುವನ್ನು ಲಿಪಿಯಿಲ್ಲದ, ಕೇವಲ ಮೌಖಿಕ ಭಾಷೆ ಎಂದೇ ಹೇಳಲಾಗಿತ್ತು. ಆದರೆ, ರಾಜಕೀಯ, ಸಾಮಾಜಿಕ ಮತ್ತಿತರ ಕಾರಣಗಳಿಗಾಗಿ ೧೦ ಮತ್ತು ೧೧ನೇ ಶತಮಾನದಿಂದ ಬೆಳೆದು ಬಂದ ಈ ಭಾಷೆಗೆ ಲಿಪಿಯಿತ್ತು. ಈ ಲಿಪಿ ಕರ್ನಾಟಕ ಕರಾವಳಿ ಪಕ್ಕದ ಮಲಯಾಳಂ ಭಾಷೆಗೆ ಹೆಚ್ಚಿನ ಹೋಲಿಕೆ ಮತ್ತು ಸಂಬಂಧವನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ.
ಮಂಗಳೂರಿನ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿರುವ ಕಲ್ಲಿನ ಶಾಸನದಲ್ಲಿ ಕಂಡುಬರುವ ಈ ಲಿಪಿಯ ಬಳಕೆಯ ಅತ್ಯಂತ ಹಳೆಯ ದಾಖಲೆಯು ಸಂಪೂರ್ಣ ತುಳು ಭಾಷೆಯಲ್ಲಿದೆ ಮತ್ತು 1159 AD ಗೆ ಸೇರಿದೆ. 15ನೇ ಶತಮಾನದ ತುಳುವಿನ ವಿವಿಧ ಶಾಸನಗಳು ತುಳು ಲಿಪಿಯಲ್ಲಿವೆ. 17ನೇ ಶತಮಾನದ ಶ್ರೀ ಭಾಗವತೊ ಮತ್ತು ಕಾವೇರಿ ಎಂಬ ಎರಡು ತುಳು ಮಹಾಕಾವ್ಯಗಳು ಸಹ ಅದೇ ಲಿಪಿಯಲ್ಲಿ ಬರೆಯಲ್ಪಟ್ಟಿವೆ. ರಾಜಾಶ್ರಯ ಸಿಗದ ಈ ಲಿಪಿ ಕಾಲಕ್ರಮೇಣ ಮರೆಯಾಗಿತ್ತು. ಆದರೆ ಅನೇಕ ತುಳು ಸಾಹಿತಿಗಳು, ಸಂಶೋಧಕರು ತುಳು ಲಿಪಿಯನ್ನು ಮತ್ತೆ ಮುನ್ನೆಲೆಗೆ ತರಲು ಪ್ರಯತ್ನ ಮುಂದುವರಿಸಿದ್ದಾರೆ.
ಹಾಗಾಗಿ ತುಳು ಲಿಪಿಯನ್ನೂ ಮುಂದೆ ಗೂಗಲ್ ಅಳವಡಿಸಿಕೊಂಡು ಇತರ ಭಾಷೆಗಳಿಗೆ ಸಿಕ್ಕ ಮಾನ್ಯತೆಯನ್ನು ನೀಡುತ್ತದೆಯೆ ಎಂಬುದು ಸದ್ಯಕ್ಕೆ ಉಳಿದುಕೊಂಡಿರುವ ಕುತೂಹಲ. ಈಗ ತುಳು ಭಾಷಾಂತರವಾದರೂ ಕನ್ನಡ ಲಿಪಿಯಲ್ಲೇ ತುಳುವನ್ನು ಗೂಗಲ್ ಮೂಲಕ ಓದಬೇಕಾಗಿದೆ.