ಮಾವು ಬೆಳೆಗಾರರಿಗೆ ಬಂಪರ್ ಕೊಡುಗೆ: ಬೆಂಬಲ ಬೆಲೆ ಖರೀದಿ ಮಿತಿ ದ್ವಿಗುಣ!
ಸರ್ಕಾರವು ಪ್ರತಿ ಎಕರೆಗೆ 20 ಕ್ವಿಂಟಲ್‌ನಂತೆ, ಗರಿಷ್ಠ ಐದು ಎಕರೆಗೆ 100 ಕ್ವಿಂಟಲ್ ಮಾವು ಖರೀದಿಸಲು ಅವಕಾಶ ನೀಡಿತ್ತು. ಇದೀಗ ಈ ಮಿತಿಯನ್ನು ಗಣನೀಯವಾಗಿ ಹೆಚ್ಚಿಸಿದ್ದು, ಪ್ರತಿ ಎಕರೆಗೆ 40 ಕ್ವಿಂಟಲ್‌ನಂತೆ, ಗರಿಷ್ಠ ಐದು ಎಕರೆಗೆ 200 ಕ್ವಿಂಟಲ್‌ವರೆಗೆ ಮಾವನ್ನು ಖರೀದಿಸಲು ಆದೇಶಿಸಿದೆ.;
ಸಾಂದರ್ಭಿಕ ಚಿತ್ರ
ಪ್ರಸಕ್ತ ವರ್ಷದಲ್ಲಿ ಮಾವಿನ ಬೆಳೆಗೆ ಸೂಕ್ತ ಬೆಲೆ ಸಿಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ ಮಾವು ಬೆಳೆಗಾರರಿಗೆ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮಾವು ಖರೀದಿಗೆ ನಿಗದಿಪಡಿಸಿದ್ದ ಗರಿಷ್ಠ ಮಿತಿಯನ್ನು ದ್ವಿಗುಣಗೊಳಿಸಿ, ಮಹತ್ವದ ಆದೇಶ ಹೊರಡಿಸಿದೆ.
ಈ ಹಿಂದೆ, ಸರ್ಕಾರವು ಪ್ರತಿ ಎಕರೆಗೆ 20 ಕ್ವಿಂಟಲ್‌ನಂತೆ, ಗರಿಷ್ಠ ಐದು ಎಕರೆಗೆ 100 ಕ್ವಿಂಟಲ್ ಮಾವು ಖರೀದಿಸಲು ಅವಕಾಶ ನೀಡಿತ್ತು. ಇದೀಗ ಈ ಮಿತಿಯನ್ನು ಗಣನೀಯವಾಗಿ ಹೆಚ್ಚಿಸಿದ್ದು, ಪ್ರತಿ ಎಕರೆಗೆ 40 ಕ್ವಿಂಟಲ್‌ನಂತೆ, ಗರಿಷ್ಠ ಐದು ಎಕರೆಗೆ 200 ಕ್ವಿಂಟಲ್‌ವರೆಗೆ ಮಾವನ್ನು ಖರೀದಿಸಲು ಆದೇಶಿಸಿದೆ.
ಹೋರಾಟಕ್ಕೆ ಸಂದ ಜಯ
ಈ ವರ್ಷ ಮಾವಿನ ಬೆಲೆ ಕುಸಿತದಿಂದಾಗಿ ರೈತರು ತೀವ್ರ ಸಂಕಷ್ಟ ಅನುಭವಿಸಿದ್ದರು. ಈ ಕುರಿತು 'ದ ಫೆಡರಲ್ ಕರ್ನಾಟಕ' ವಿಶೇಷ ವರದಿಗಳನ್ನು ಪ್ರಕಟಿಸಿತ್ತು. ರೈತರು ತಮ್ಮ ಬೆಳೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸುರಿದು, ಬಂದ್ ನಡೆಸಿ, ಸರ್ಕಾರದೊಂದಿಗೆ ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿದ್ದರು. ಈ ನಿರಂತರ ಹೋರಾಟದ ಫಲವಾಗಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಎರಡು ರೂಪಾಯಿಯಂತೆ, ಪ್ರತಿ ಕೆ.ಜಿ. ಮಾವಿಗೆ ಒಟ್ಟು ನಾಲ್ಕು ರೂಪಾಯಿ ಬೆಂಬಲ ಬೆಲೆ ನೀಡಿ ಖರೀದಿಸಲು ಜೂನ್ 25ರಂದು ಒಪ್ಪಿಗೆ ಸೂಚಿಸಿದ್ದವು.
ಆರಂಭದಲ್ಲಿ ಖರೀದಿ ಮಿತಿ ಕಡಿಮೆ ಇದ್ದುದರಿಂದ, ಹೆಚ್ಚಿನ ಇಳುವರಿ ಪಡೆದ ರೈತರಿಗೆ ಅನ್ಯಾಯವಾಗುತ್ತಿತ್ತು. ಇದೀಗ ಖರೀದಿ ಮಿತಿಯನ್ನು ದ್ವಿಗುಣಗೊಳಿಸಿರುವುದರಿಂದ, ಇನ್ನಷ್ಟು ಮಾವು ಮಾರಾಟ ಮಾಡಲು ರೈತರಿಗೆ ಅವಕಾಶ ದೊರೆತಂತಾಗಿದೆ. ಸರ್ಕಾರದ ಈ ನಿರ್ಧಾರವನ್ನು ರಾಜ್ಯದ ಮಾವು ಬೆಳೆಗಾರರು ಸ್ವಾಗತಿಸಿದ್ದಾರೆ.
ಮಾವು ಖರೀದಿ ಮಿತಿ ಹೆಚ್ಚಳದ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದ್ದು, ಎಲ್ಲಾ ಖರೀದಿ ಕೇಂದ್ರಗಳಿಗೂ ಈ ಬಗ್ಗೆ ಸೂಚನೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.