ಸ್ಪರ್ಧಾರ್ಥಿಗಳಿಗೆ ಸಿಹಿ ಸುದ್ದಿ| ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಳ ಮಾಡಿ ಪೊಲೀಸ್ ಇಲಾಖೆ ಆದೇಶ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಸಿಎಂ ಸಿದ್ದರಾಮಯ್ಯ ಹಾಗೂ ಹಲವು ಸಚಿವರನ್ನು ಭೇಟಿ ಮಾಡಿ ಪರೀಕ್ಷೆಗಳಿಗೆ ನಿಗದಿಪಡಿಸಿರುವ ವಯೋಮಿತಿಯನ್ನು ಕನಿಷ್ಠ ಮೂರು ವರ್ಷ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದರು.
ವಯೋಮಿತಿ ಹೆಚ್ಚಳಗೊಳಿಸಿ ಪೊಲೀಸ್ ಇಲಾಖೆ ಹೊರಡಿಸಿರುವ ಆದೇಶ
ಪೊಲೀಸ್ ಇಲಾಖೆ ಹೊರಡಿಸುವ ನೇರ ನೇಮಕಾತಿ ಅಧಿಸೂಚನೆಗಳಿಗೆ ಗರಿಷ್ಠ ಒಂದು ಬಾರಿ ಎರಡು ವರ್ಷ ವಯೋಮಿತಿ ಸಡಿಲಿಕೆ ಮಾಡಿ ಪೊಲೀಸ್ ಆಡಳಿತ ಮಂಡಳಿ ಎಡಿಜಿಪಿ ಆದೇಶ ಹೊರಡಿಸಿದ್ದಾರೆ.
ಸೆ.6 ರಿಂದ 2027 ಡಿ. 31 ರವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಆಯಾಯ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಹೆಚ್ಚಳ ಮಾಡಿ ಅಧಿಕೃತವಾಗಿ ಆದೇಶ ಹೊರಡಿಸಿದೆ.
ವಯೋಮಿತಿ ಹೆಚ್ಚಳಕ್ಕೆ ಅಭ್ಯರ್ಥಿಗಳ ಮನವಿ
ಸರ್ಕಾರ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡಲು ಕಳೆದೊಂದು ವರ್ಷದಿಂದ ಯಾವುದೇ ಇಲಾಖೆ ನೇಮಕಾತಿ ಅಧಿಸೂಚನೆ ಹೊರಡಿಸಿರಲಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಸಿಎಂ ಸಿದ್ದರಾಮಯ್ಯ ಹಾಗೂ ಹಲವು ಸಚಿವರನ್ನು ಭೇಟಿ ಮಾಡಿ ಪರೀಕ್ಷೆಗಳಿಗೆ ನಿಗದಿಪಡಿಸಿರುವ ವಯೋಮಿತಿಯನ್ನು ಕನಿಷ್ಠ ಮೂರು ವರ್ಷ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದರು.
ಎರಡು ವರ್ಷ ಹೆಚ್ಚಳಕ್ಕೆ ಸಿಎಂ ಸೂಚನೆ
ಒಳ ಮೀಸಲಾತಿ ಜಾರಿಗೊಳಿಸಿ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯನವರು, ಕಳೆದೊಂದು ವರ್ಷದಿಂದ ಯಾವುದೇ ನೇಮಕಾತಿ ಅಧಿಸೂಚನೆಯಾಗಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಹೊರಡಿಸುವ ಎಲ್ಲಾ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯವಾಗುವಂತೆ ಎರಡು ವರ್ಷ ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದ್ದರು.
ಇತರೆ ರಾಜ್ಯಗಳಂತೆ ಪೊಲೀಸ್ ವಯೋಮಿತಿ ಹೆಚ್ಚಳದ ಭರವಸೆ
ರಾಜ್ಯದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಹೊರಡಿಸುವ ನೇಮಕ ಅಧಿಸೂಚನೆಗೆ ಸಾಮನ್ಯ ವರ್ಗಕ್ಕೆ 25 ವರ್ಷ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ 27 ವರ್ಷ ನಿಗದಿಪಡಿಸಿ ನೇಮಕ ನಡೆಸುತ್ತಿತ್ತು. ಆದರೆ ಕೋವಿಡ್ ಸಮಯದಲ್ಲಿ ಸರ್ಕಾರ ಯಾವುದೇ ನೇಮಕಕ್ಕೆ ಅಧಿಸೂಚನೆ ಹೊರಡಿಸಿರಲಿಲ್ಲ. ಆದ್ದರಿಂದ ವಿದ್ಯಾರ್ಥಿ ಸಂಘಟನೆಗಳು ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ನಿಗದಿಪಡಿಸಿರುವ ವಯೋಮಿತಿಯನ್ನು ಹೆಚ್ಚಿಸಬೇಕು. ತೆಲಂಗಾಣ ಸೇರಿದಂತೆ ಇತರ ರಾಜ್ಯಗಳಲ್ಲಿ ಸಾಮನ್ಯ ವರ್ಗಕ್ಕೆ 30 ವರ್ಷ ಹಾಗೂ ಒಬಿಸಿ, ಎಸ್ಸಿ ಹಾಗೂ ಎಸ್‌ಟಿ ವರ್ಗಕ್ಕೆ 35 ವರ್ಷ ನಿಗದಿಪಡಿಸಿವೆ. ಆದ್ದರಿಂದ ರಾಜ್ಯ ಸರ್ಕಾರ ವಯೋಮಿತಿ ಹೆಚ್ಚಿಸಬೇಕೆಂದು ಸಿಎಂ, ಗೃಹ ಸಚಿವರಿಗೆ ಮನವಿ ಮಾಡಲಾಗಿತ್ತು.
ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿರುವ ಸರ್ಕಾರ, ವಿವಿಧ ರಾಜ್ಯಗಳಲ್ಲಿರುವ ವಯೋಮಿತಿಯನ್ನು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ಗೃಹ ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸಾಮಾನ್ಯ ವರ್ಗಕ್ಕೆ 27 ವರ್ಷ ಹಾಗೂ ಒಬಿಸಿ, ಎಸ್ಸಿ ಮತ್ತು ಎಸ್‌ಟಿ ವರ್ಗಗಳಿಗೆ 30 ವರ್ಷಕ್ಕೆ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.