ಸುವರ್ಣ ಮಹೋತ್ಸವ | ಐಟಿ-ಬಿಟಿಗೂ ರಾಜ್ಯೋತ್ಸವ ಆಚರಣೆ ಕಡ್ಡಾಯ: ಡಿ ಕೆ ಶಿವಕುಮಾರ್‌ ಖಡಕ್‌ ಸೂಚನೆ

ನವೆಂಬರ್ ಒಂದರಂದು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳು, ಉದ್ಯಮ-ಕಾರ್ಖಾನೆಗಳು ಮತ್ತು ಐಟಿ-ಬಿಟಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಬಾವುಟ(ನಾಡಧ್ವಜ) ಹಾರಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.;

Update: 2024-10-11 07:50 GMT

ಈ ಬಾರಿ ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ಸಜ್ಜಾಗಿದೆ. ಆ ಹಿನ್ನೆಲೆಯಲ್ಲಿ ನವೆಂಬರ್ ಒಂದರಂದು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳು, ಉದ್ಯಮ-ಕಾರ್ಖಾನೆಗಳು ಮತ್ತು ಐಟಿ-ಬಿಟಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಬಾವುಟ(ನಾಡಧ್ವಜ) ಹಾರಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮಹಾನಗರದಲ್ಲಿ ಅರ್ಧದಷ್ಟು ಜನರು ಹೊರರಾಜ್ಯ, ಹೊರ ದೇಶದವರಿದ್ದಾರೆ. ಆದರೆ, ಇಲ್ಲಿ ಬಂದು ನೆಲೆಸಿದ ಮೇಲೆ ಎಲ್ಲರೂ ಕನ್ನಡ ಕಲಿಯಲೇಬೇಕು. ಇಲ್ಲಿನ ಸಂಸ್ಕೃತಿ, ಸಾಂಸ್ಕೃತಿಕ ಕಾರ್ಯಕ್ರಮ, ನಾಡಹಬ್ಬವನ್ನು ಕಡ್ಡಾಯವಾಗಿ ಆಚರಿಸಬೇಕು. ನಾಡ ಧ್ವಜಕ್ಕೂ ರಾಷ್ಟ್ರಧ್ವಜದ ರೀತಿಯಲ್ಲೇ ಎಲ್ಲರೂ ಗೌರವ ನೀಡಬೇಕು. ನಾಡಿಗೆ, ನಾಡಿನ ಸಂಸ್ಕೃತಿಗೆ ಗೌರವ ತೋರಲು ನಾಡ ಧ್ವಜ ಹಾರಿಸಬೇಕು ಎಂದು ತಾಕೀತು ಮಾಡಿದರು.

ಅದೇ ಹೊತ್ತಿಗೆ, ಕನ್ನಡ ರಾಜ್ಯೋತ್ಸವದ ವಿಷಯದಲ್ಲಿ ಕನ್ನಡ ಸಂಘಟನೆಗಳು ಯಾರ ಮೇಲೆಯೂ ಒತ್ತಡ ಹೇರಬಾರದು. ಆ ಕೆಲಸವನ್ನು ಸರ್ಕಾರವೇ ಮಾಡಿದೆ. ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಕಡ್ಡಾಯ ಮಾಡಿ ಸರ್ಕಾರವೇ ಆದೇಶಿಸಿದೆ. ಒಂದು ವೇಳೆ ಯಾವುದಾದರೂ ಸಂಸ್ಥೆ, ಕಂಪನಿಗಳು ಆಚರಣೆ ಮಾಡದೇ ಹೋದರೆ, ಅದನ್ನು ಸರ್ಕಾರದ ಗಮನಕ್ಕೆ ತಂದರೆ ಸರ್ಕಾರ ಆ ಬಗ್ಗೆ ಮುಂದಿನ ಕ್ರಮವನ್ನು ನಿರ್ಧಾರ ಮಾಡಲಿದೆ. ಆದರೆ, ಕನ್ನಡ ಸಂಘಟನೆಗಳು ರಾಜ್ಯೋತ್ಸವದ ವಿಷಯದಲ್ಲಿ ಯಾವುದೇ ಖಾಸಗಿ ಕಂಪನಿಗಳು, ಉದ್ಯಮಗಳ ಮೇಲೆ ಗಲಾಟೆ ಮಾಡುವುದು, ಬೆದರಿಸುವುದ ಸಲ್ಲದು ಎಂದು ಅವರು ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.

ಈ ಮೊದಲು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅಂಗಡಿ-ಮಂಗಟ್ಟು, ಕಂಪನಿ, ಉದ್ಯಮಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯ ಮಾಡುವ ಮೂಲಕ ಕನ್ನಡ ಮತ್ತು ಕನ್ನಡ ಸಂಸ್ಕೃತಿಯ ಕುರಿತ ತನ್ನ ಚುನಾವಣಾ ಪ್ರಣಾಳಿಕೆಯ ಭರವಸೆಯನ್ನು ಕಾಯ್ದುಕೊಂಡಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ, ಇದೀಗ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಐಟಿ-ಬಿಟಿ ಸಂಸ್ಥೆಗಳು ಕಡ್ಡಾಯವಾಗಿ ಆಚರಿಸಬೇಕು ಎಂದು ಆದೇಶಿಸುವ ಮೂಲಕ ನಾಡು-ನುಡಿಯ ಕುರಿತ ತನ್ನ ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ.

Tags:    

Similar News