ʼತಲೆ ಬುರುಡೆʼ ಬಗ್ಗೆ ಗಿರೀಶ್ ಮಟ್ಟಣ್ಣನವರ್ ವಿಚಾರಣೆ, ಕೇರಳದ ಯೂಟ್ಯೂಬರ್‌ಗೂ ಎಸ್‌ಐಟಿ ನೋಟಿಸ್
ದೂರುದಾರ ಅನಾಮಿಕನ ನ್ಯಾಯಾಂಗ ಅವಧಿ ಇಂದಿಗೆ ಅಂತ್ಯವಾಗಲಿದ್ದು, ಮತ್ತಷ್ಟು ವಿಚಾರಣೆ ನಡೆಸಲು ಆತನನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ ಮತ್ತಷ್ಟು ದಿನ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.;
ಗಿರೀಶ್ ಮಟ್ಟಣ್ಣನವರ್ ಹಾಗೂ ಅನಾಮಿಕ ದೂರುದಾರ
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಕಚೇರಿಗೆ ಗಿರೀಶ್ ಮಟ್ಟಣ್ಣನವರ್ ಶನಿವಾರ ಕೂಡ ಹಾಜರಾಗಿದ್ದು, ಬುರುಡೆಯನ್ನು ಎಲ್ಲಿಂದ ತರಲಾಗಿದೆ ಎಂಬುದರ ಕುರಿತು ವಿಚಾರಣೆ ಎದುರಿಸಲಿದ್ದಾರೆ.
ಈಗಾಗಲೇ ಅನಾಮಿಕ ದೂರುದಾರ ತಲೆ ಬುರುಡೆ ನೀಡಿದ್ದು ಜಯಂತ್ ಎಂದು ಹೇಳಿಕೆ ನೀಡಿದ್ದರು. ನಂತರ ಜಯಂತ್‌ನನ್ನು ವಿಚಾರಣೆ ನಡೆಸಿದಾಗ, ಈ ಬಗ್ಗೆ ನನಗೇನು ತಿಳಿದಿಲ್ಲ. ಗಿರೀಶ್ ಮಟ್ಟಣ್ಣನವರ್ ಬುರುಡೆ ನೀಡಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಈ ಕುರಿತು ಶುಕ್ರವಾರ(ಸೆ.5) ಎಸ್‌ಐಟಿ ಎದುರು ಹಾಜರಾಗಿದ್ದ ಗಿರೀಶ್ ಮಟ್ಟಣ್ಣನವರ್ ವಿಚಾರಣೆಗೆ ಹಾಜರಾಗಿ ಬುರುಡೆ ಕುರಿತು ತನಗೇನು ಗೊತ್ತಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು. ಕೆಲವು ಹೇಳಿಕೆಗಳನ್ನು ಪಡೆದಿದ್ದ ಎಸ್‌ಐಟಿ ಅಧಿಕಾರಿಗಳು ಅವರನ್ನು ಶನಿವಾರವೂ(ಸೆ.6) ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು.
ಇಂದು ಬೆಳಿಗ್ಗೆಯೇ ಎಸ್‌ಐಟಿ ಕಚೇರಿಗೆ ಗಿರೀಶ್ ಮಟ್ಟಣ್ಣನವರ್ ಹಾಜರಾಗಿದ್ದಾರೆ. ತಲೆ ಬುರುಡೆ ಕುರಿತು ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.. ದೂರುದಾರ ಅನಾಮಿಕನ ನ್ಯಾಯಾಂಗ ಅವಧಿ ಇಂದಿಗೆ ಅಂತ್ಯವಾಗಲಿದ್ದು, ಮತ್ತಷ್ಟು ವಿಚಾರಣೆ ನಡೆಸಲು ಆತನನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ ಮತ್ತಷ್ಟು ದಿನ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬುರುಡೆ ಕೇಸ್, ಕೇರಳ ನಂಟು
ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮತ್ತು ಷಡ್ಯಂತ್ರ ರೂಪಿಸಿದ ಆರೋಪದ ಮೇಲೆ ವಿಶೇಷ ತನಿಖಾ ದಳ (SIT) ಕೇರಳ ಮೂಲದ ಯೂಟ್ಯೂಬರ್ ಮುನಾಫ್‌ಗೆ ನೋಟಿಸ್ ಜಾರಿ ಮಾಡಿದ್ದು, ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಕಕೆದ ವರ್ಷ ಕಾರವಾರದ ಶಿರೂರು ಬಳಿ ನಡೆದ ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ಲಾರಿ ಚಾಲಕ ಅರ್ಜುನ್, ಮುನಾಫ್ ಒಡೆತನದ ಲಾರಿಯಲ್ಲಿ ಕೆಲಸ ಮಾಡುತ್ತಿದ್ದ. ಮುನಾಫ್ ಸ್ವತಃ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಧರ್ಮಸ್ಥಳದ ಕಾಡಿನಲ್ಲಿ ಮರಕ್ಕೆ ಸೀರೆ ಬಿಗಿದ ಸ್ಥಿತಿ, ಪಕ್ಕದಲ್ಲಿದ್ದ ಬುರುಡೆಯನ್ನು ಕತ್ತಿಯಿಂದ ಎತ್ತಿ ಚೀಲಕ್ಕೆ ತುಂಬುವ ವಿಡಿಯೋವನ್ನು ತನ್ನ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದನು.
ಪ್ರಕರಣದ ತನಿಖೆ ಆರಂಭವಾಗುತ್ತಿದ್ದಂತೆ, ಮುನಾಫ್ ಹೋರಾಟಗಾರರಾದ ಜಯಂತ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಭೇಟಿಯಾಗಿದ್ದ. ಜಯಂತ್ ಮೂಲಕ ಈ "ಬುರುಡೆ ಕಥೆ"ಯನ್ನು ಕೇರಳಕ್ಕೂ ಹಬ್ಬಿಸಿದ್ದ ಎನ್ನಲಾಗಿದೆ. ಧರ್ಮಸ್ಥಳದಲ್ಲಿ ನೂರಾರು ಹೆಣ್ಣುಮಕ್ಕಳನ್ನು ಅಕ್ರಮವಾಗಿ ಹೂಳಲಾಗಿದೆ ಎಂದು ಕೇರಳದ ಮಾಧ್ಯಮಗಳಲ್ಲೂ ಸುಳ್ಳು ಸುದ್ದಿ ಹಬ್ಬುವಂತೆ ಮಾಡಿದ್ದ.
ಇದೀಗ SIT ಮುನಾಫ್‌ಗೆ ನೋಟಿಸ್ ನೀಡಿರುವುದರಿಂದ, ಆತನ ವಿಚಾರಣೆಯ ನಂತರ ಪ್ರಕರಣದ ಹಿಂದಿನ ಸಂಚು ಮತ್ತು ಕೇರಳದ ನಂಟಿನ ಬಗ್ಗೆ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ. ಬುರುಡೆ ಪ್ರಕರಣದ ವಿಡಿಯೋಗೆ ಸಂಬಂಧಿಸಿದಂತೆ ಎಲ್ಲಾ ತಾಂತ್ರಿಕ ಸಾಕ್ಷ್ಯಗಳನ್ನು ತನಿಖೆಗೆ ಒದಗಿಸುವಂತೆ SIT ಸೂಚಿಸಿದೆ.