ಚುನಾವಣಾ ರಾಜಕೀಯಕ್ಕೆ ಗೀತಾ ಶಿವರಾಜ್‌ಕುಮಾರ್ ವಿದಾಯ
ಮಹಿಳೆಯರು ಎಂದಿಗೂ ಅಬಲೆಯರಲ್ಲ, ಎಲ್ಲರೂ ಸಬಲೆಯರೇ. ಮಹಿಳೆಯರಿಗೆ ಶಕ್ತಿ ನೀಡಿದರೆ ಎಂತಹ ಕೆಲಸವನ್ನಾದರೂ ಮಾಡುತ್ತಾರೆ. ಕಳೆದ ಹತ್ತು ವರ್ಷಗಳಿಂದ ಶ್ವೇತಾ ಬಂಡಿಯನ್ನು ನಾನು ಬಲ್ಲೆ.
ಗೀತಾ ಶಿವರಾಜ್ ಕುಮಾರ್ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗಮನ ಸೆಳೆದಿದ್ದ, ನಟ ಡಾ. ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್, ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. "ಇನ್ನು ಮುಂದೆ ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ" ಎಂದು ಸ್ಪಷ್ಟಪಡಿಸುವ ಮೂಲಕ ತಮ್ಮ ರಾಜಕೀಯ ಭವಿಷ್ಯದ ಕುರಿತಾದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಶನಿವಾರ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಶ್ವೇತಾ ಬಂಡಿ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು. "ನಾನು ಚುನಾವಣೆಗೆ ನಿಲ್ಲುವುದಿಲ್ಲ, ಆದರೆ ಪಕ್ಷದ ಸಂಘಟನೆ ಮತ್ತು ನಿಮ್ಮೆಲ್ಲರ ಜೊತೆ ಸದಾ ಇರುತ್ತೇನೆ. ಮುಂದಿನ ಚುನಾವಣೆಗಳಲ್ಲಿ ಖಂಡಿತವಾಗಿಯೂ ಬಂದು ಪಕ್ಷದ ಪರ ಪ್ರಚಾರ ಮಾಡುತ್ತೇನೆ" ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.
ಯಾರಿಗೂ ತೊಂದರೆ ಕೊಡುವುದಿಲ್ಲ: ಎಂದ ಗೀತಕ್ಕ
ತಮ್ಮ ಮಾತಿನ ವೇಳೆ, "ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ, ಎಂಎಲ್‌ಸಿ ಮಂಜುನಾಥ ಭಂಡಾರಿ ಅವರಿಗೂ ನಾನು ತೊಂದರೆ ಕೊಡುವುದಿಲ್ಲ" ಎಂದು ಗೀತಾ ಶಿವರಾಜ್‌ಕುಮಾರ್ ಹೇಳಿದ್ದು ವಿಶೇಷವಾಗಿತ್ತು. ಈ ಹೇಳಿಕೆಯು, ಪಕ್ಷದೊಳಗಿನ ಆಂತರಿಕ ಹೊಂದಾಣಿಕೆ ಮತ್ತು ಭವಿಷ್ಯದ ರಾಜಕೀಯ ಸಮೀಕರಣಗಳ ಬಗ್ಗೆ ಯಾವುದೇ ಗೊಂದಲ ಬೇಡ ಎಂಬ ಸಂದೇಶವನ್ನು ರವಾನಿಸಿದಂತಿದೆ.
ಮಹಿಳಾ ಸಬಲೀಕರಣಕ್ಕೆ ಒತ್ತು
ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು, "ಮಹಿಳೆಯರು ಎಂದಿಗೂ ಅಬಲೆಯರಲ್ಲ, ನೀವೆಲ್ಲರೂ ಸಬಲೆಯರು. ಮಹಿಳೆಯರಿಗೆ ಸೂಕ್ತ ಶಕ್ತಿ ಮತ್ತು ಅವಕಾಶ ನೀಡಿದರೆ, ಅವರು ಎಂತಹ ದೊಡ್ಡ ಕೆಲಸವನ್ನಾದರೂ ಸಾಧಿಸಿ ತೋರಿಸಬಲ್ಲರು" ಎಂದು ಸ್ಫೂರ್ತಿ ತುಂಬಿದರು. "ನಿಮ್ಮ ಯಾವುದೇ ಕಷ್ಟಗಳಿಗೆ ನಾನು ಸ್ಪಂದಿಸುತ್ತೇನೆ. ಏನೇ ಸಮಸ್ಯೆಗಳಿದ್ದರೂ, ನನ್ನ ಸಹೋದರ, ಸಚಿವ ಮಧು ಬಂಗಾರಪ್ಪ ಅವರನ್ನು ಹಿಡಿದುಕೊಂಡು ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಿ" ಎಂದು ಕಾರ್ಯಕರ್ತೆಯರಿಗೆ ಧೈರ್ಯ ಹೇಳಿದರು.