ಗಾಯತ್ರಿ ಮನೆಯಲ್ಲಿ ಅಡುಗೆ ಮಾಡೋಕೆ ಮಾತ್ರ ಲಾಯಕ್ಕು: ಶಾಮನೂರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಅಡುಗೆ ಮಾಡುವುದಕ್ಕೆ ಮಾತ್ರ ಸೀಮಿತನಾ ? ಮಹಿಳೆಯರು ಅಡುಗೆನೂ ಮಾಡ್ತಾರೆ, ಆಕಾಶದಲ್ಲೂ ಹಾರಾಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ ಗಾಯತ್ರಿ ಸಿದ್ದೇಶ್ವರ್

Update: 2024-03-29 13:10 GMT
ಶಾಮನೂರು ಶಿವಶಂಕರಪ್ಪ

ಲೋಕಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರ ಮಾತುಗಳು ವಿವಾದಕ್ಕೆ ಕಾರಣವಾಗುತ್ತಿದೆ. ದಾವಣಗೆರೆ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರ ಬಗ್ಗೆ ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು, “ಗಾಯತ್ರಿಗೆ ಮಾತಾಡೋಕೆ ಬರಲ್ಲ; ಅವರು ಮನೆಯಲ್ಲಿ ಅಡುಗೆ ಮಾಡುವುದಕ್ಕೆ ಮಾತ್ರ ಲಾಯಕ್ಕು” ಎಂದಿದ್ದು ವಿವಾದಕ್ಕೆ ಕಾರಣವಾಗಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ನ ವಿವಿಧ ಹಂತದ ಪದಾಧಿಕಾರಿಗಳ ಸಭೆ ನಡೆಯುವಾಗ ಶಾಮನೂರು ಶಿವಶಂಕರಪ್ಪ ಅವರು ಈ ರೀತಿ ಮಾತನಾಡಿರುವುದು ವರದಿ ಆಗಿದೆ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಕಮಲವನ್ನು ಗೆಲ್ಲಿಸಿ, ಮೋದಿ ಅವರಿಗೆ ನೀಡೋಣ ಎಂದಿದ್ದಾರೆ. ಮತ್ತೆ ಕಳೆದ ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆಲುವು ಸಾಧಿಸಿದ್ದರು. ಆಗ ಕಮಲದ ಹೂವನ್ನು ಕಳುಹಿಸಿಕೊಟ್ಟಿದ್ರಾ, ಕೇವಲ ಕಮಲದ ಹೂವನ್ನು ಕಳುಹಿಸಿಕೊಟ್ಟರೆ ಅಭಿವೃದ್ಧಿ ಆಗಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗಬೇಕು. ಮೋದಿ ಮೋದಿ ಎನ್ನುವುದಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಅಜ್ಜಗೆ ಗೊತ್ತಿಲ್ಲ ಅನಿಸುತ್ತೆ ಎಂದ ಗಾಯತ್ರಿ

ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, "ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡಿದ್ದಾರೆ. ಅಜ್ಜಗೆ ಗೊತ್ತಿಲ್ಲ ಅನಿಸುತ್ತೆ" ಎಂದು ವ್ಯಂಗ್ಯವಾಡಿದ್ದಾರೆ.

"ಮಹಿಳೆಯರು ಅಡುಗೆ ಮಾಡುವುದಕ್ಕೆ ಮಾತ್ರ ಸೀಮಿತನಾ ? ಮಹಿಳೆಯರು ಅಡುಗೆನೂ ಮಾಡ್ತಾರೆ, ಆಕಾಶದಲ್ಲೂ ಹಾರಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಹೊತ್ತು ಕೊಟ್ಟಿದ್ದಾರೆ. ಆದರೆ, ಇವರು ಮಾತ್ರ ಮಹಿಳೆಯರನ್ನು ಅವಮಾನ ಮಾಡ್ತಾರೆ" ಎಂದು ತಿರುಗೇಟು ಕೊಟ್ಟಿದ್ದಾರೆ.

ಇನ್ನು ದಾವಣಗೆರೆ ಲೋಕಸಭಾ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿನ ಕಣವಾಗಿ ಬದಲಾಗಿದೆ. ಕ್ಷೇತ್ರದಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳೇ ಮುಖಾಮುಖಿಯಾಗಿದ್ದಾರೆ. ಬಿಜೆಪಿಯಿಂದ ಸಂಸದ ಜಿ ಎಂ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ ಅವರ ಪತ್ನಿ ಡಾ ಪ್ರಭಾ ಮಲ್ಲಿಕಾರ್ಜುನ್ ಅವರು ಕಣದಲ್ಲಿದ್ದು, ಈ ಕ್ಷೇತ್ರ ಕುತೂಹಲ ಮೂಡಿಸಿದೆ.

Tags:    

Similar News