ಗೌರಿ-ಗಣೇಶ ಹಬ್ಬ: ಕೆಎಸ್ಆರ್‌ಟಿಸಿಯಿಂದ 1,500 ವಿಶೇಷ ಬಸ್ ಸಂಚಾರ, ಇಲ್ಲಿದೆ ಸಂಪೂರ್ಣ ಮಾಹಿತಿ

ಆ.26 ಸ್ವರ್ಣಗೌರಿ ವ್ರತ ಮತ್ತು ಆ.27 ರಂದು ಗಣೇಶ ಚತುರ್ಥಿ ಹಬ್ಬವಿರುವುದರಿಂದ ಕೆಎಸ್‌ಆರ್‌ಟಿಸಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಆ.25 ಹಾಗೂ ಆ.26 ರಂದು ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ಕಾರ್ಯಚರಣೆ ಮಾಡಲಿವೆ.;

Update: 2025-08-22 14:34 GMT

ಸಾಂದರ್ಭಿಕ ಚಿತ್ರ

ಸ್ವರ್ಣಗೌರಿ ವ್ರತ ಮತ್ತು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳುವ ಲಕ್ಷಾಂತರ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್‌ಟಿಸಿ) 1,500 ಹೆಚ್ಚುವರಿ ಬಸ್‌ಗಳನ್ನು ಓಡಿಸುವುದಾಗಿ ಪ್ರಕಟಿಸಿದೆ.

ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುವ ದೂರುಗಳ ಹಿನ್ನೆಲೆಯಲ್ಲಿ, ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಕೆಎಸ್ಆರ್‌ಟಿಸಿ ಈ ವಿಶೇಷ ವ್ಯವಸ್ಥೆ ಮಾಡಿದೆ.

ಆಗಸ್ಟ್ 26ರಂದು ಸ್ವರ್ಣಗೌರಿ ವ್ರತ ಮತ್ತು ಆಗಸ್ಟ್ 27ರಂದು ಗಣೇಶ ಚತುರ್ಥಿ ಇರುವುದರಿಂದ, ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ನಿಗಮವು ಆಗಸ್ಟ್ 25 ಮತ್ತು 26ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ ವಿಶೇಷ ವಾಹನಗಳನ್ನು ರಸ್ತೆಗಿಳಿಸಲಿದೆ. ಅದೇ ರೀತಿ, ಹಬ್ಬ ಮುಗಿಸಿ ಬೆಂಗಳೂರಿಗೆ ಹಿಂತಿರುಗುವ ಪ್ರಯಾಣಿಕರಿಗಾಗಿ ಆಗಸ್ಟ್ 26 ಹಾಗೂ 30ರಂದು ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ.

ಮೆಜೆಸ್ಟಿಕ್​ನಿಂದ ಹೊರಡುವ ಬಸ್​ಗಳು

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ ಮತ್ತು ಬೀದರ್ ಸೇರಿದಂತೆ ರಾಜ್ಯದ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್‌ಗಳು ಹೊರಡಲಿವೆ. ಇದಲ್ಲದೆ, ತಿರುಪತಿ, ವಿಜಯವಾಡ, ಹೈದರಾಬಾದ್‌ನಂತಹ ಅಂತರರಾಜ್ಯ ಸ್ಥಳಗಳಿಗೂ ಬಸ್‌ಗಳ ಕಾರ್ಯಾಚರಣೆ ನಡೆಯಲಿದೆ.

ಮೈಸೂರು ರೋಡ್​ ಸ್ಯಾಟ್​ಲೈಟ್​ ನಿಲ್ದಾಣ

ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮತ್ತು ಮಡಿಕೇರಿ ಮಾರ್ಗದ ಕಡೆಗೆ ಸಂಚರಿಸುವ ಬಸ್‌ಗಳನ್ನು ನಿಯೋಜಿಸಲಾಗಿದೆ. ಅದೇ ರೀತಿ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ತೆರಳುವ ಪ್ರಯಾಣಿಕರಿಗಾಗಿ ಶಾಂತಿನಗರದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಿಂದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಹಾಗೂ ಕೋಯಿಕ್ಕೋಡ್‌ನಂತಹ ಸ್ಥಳಗಳಿಗೆ ಪ್ರತಿಷ್ಠಿತ ಸಾರಿಗೆ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.

ಮುಂಗಡ ಬುಕಿಂಗ್​​ ರಿಯಾಯಿತಿ

ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುವುದು. ಹಾಗೆಯೇ, ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ, ಬರುವ ಪ್ರಯಾಣದ ದರದಲ್ಲಿ ಶೇಕಡ 10ರಷ್ಟು ರಿಯಾಯಿತಿ ಸಿಗಲಿದೆ.

ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೆರಿಯಲಿರುವ ನಿಗಮದ ಬುಕಿಂಗ್ ಕೌಂಟರ್‌ಗಳ ಮೂಲಕವೂ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ.

ಪಿಕ್​ಅಪ್​ ಪಾಯಿಂಟ್ ಖಚಿತಮಾಡಿಕೊಳ್ಳಿ

ನಿಗಮವು ಪ್ರಯಾಣಿಕರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದ್ದು, ಬಸ್ ನಿಲ್ದಾಣಕ್ಕೆ ಬರುವ ಮುನ್ನ ತಮ್ಮ ಮುಂಗಡ ಟಿಕೆಟ್‌ನಲ್ಲಿ ನಮೂದಿಸಲಾಗಿರುವ ಬಸ್ ಹೊರಡುವ ನಿಲ್ದಾಣ ಅಥವಾ ಪಿಕ್ಅಪ್ ಪಾಯಿಂಟ್‌ನ ಹೆಸರನ್ನು ಖಚಿತಪಡಿಸಿಕೊಳ್ಳುವಂತೆ ಕೋರಿದೆ. ಹೆಚ್ಚುವರಿ ಬಸ್‌ಗಳ ವೇಳಾಪಟ್ಟಿ ಮತ್ತು ಅವು ಹೊರಡುವ ಸ್ಥಳದ ವಿವರಗಳನ್ನು ಕೆಎಸ್ಆರ್‌ಟಿಸಿ ವೆಬ್‌ಸೈಟ್ ಹಾಗೂ ಆನ್‌ಲೈನ್ ಬುಕಿಂಗ್ ಪೋರ್ಟಲ್‌ನಲ್ಲಿ ಒದಗಿಸಲಾಗಿದ್ದು, ಈ ಮಾಹಿತಿಯನ್ನು ಕಾಯ್ದಿರಿಸಿದ ಟಿಕೆಟ್‌ಗಳ ಮೇಲೆಯೂ ಮುದ್ರಿಸಲಾಗಿರುತ್ತದೆ. ಇದಲ್ಲದೆ, ರಾಜ್ಯದ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಬಸ್ ನಿಲ್ದಾಣಗಳಿಂದಲೂ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುವುದು ಎಂದು ಕೆಎಸ್ಆರ್‌ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

Tags:    

Similar News