ಲಾಕಪ್‌ ಡೆತ್‌ | ನಾಲ್ವರು ಪೊಲೀಸ್‌ ಕಾನ್‌ಸ್ಟೆಬಲ್‌ಗಳಿಗೆ ಏಳು ವರ್ಷ ಶಿಕ್ಷೆ

ಪೊಲೀಸರ ಹೊಡೆತದಿಂದ ದೈಹಿಕ ಒತ್ತಡ ಉಂಟಾಗಿ ಮೆದುಳು, ಮೂತ್ರಪಿಂಡ, ಹೃದಯ, ಶ್ವಾಸಕೋಶಕ್ಕೆ ಆಮ್ಲಜನಕದ ಕೊರತೆ ಉಂಟಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ವರದಿ ನೀಡಿದ್ದರು.

Update: 2024-11-28 10:33 GMT

ಕಳ್ಳತನ ಆರೋಪಿಯ ಲಾಕಪ್ ಡೆತ್ ಪ್ರಕರಣದಲ್ಲಿ ನಗರ ಪೊಲೀಸ್ ವಿಭಾಗದ ನಾಲ್ವರು ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಬೆಂಗಳೂರಿನ 51ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಏಳು ವರ್ಷ ಜೈಲು ಸಜೆ ಹಾಗೂ ತಲಾ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಹೆಡ್ ಕಾನ್‌ಸ್ಟೆಬಲ್‌ ಏಜಾಜ್ ಖಾನ್, ಕಾನ್‌ಸ್ಟೆಬಲ್‌ಗಳಾದ ಮೋಹನರಾಮ್, ಸಿದ್ದಪ್ಪ ಬೊಮ್ಮನಹಳ್ಳಿ ಹಾಗೂ ಕೇಶವಮೂರ್ತಿ ಶಿಕ್ಷೆಗೆ ಗುರಿಯಾದ ಅಪರಾಧಿಗಳು.

ಬಿಹಾರ ಮೂಲದ ಮಹೇಂದ್ರ ರಾಥೋಡ್(42) ಎಂಬುವರು ಇಂದಿರಾನಗರದ ಉದ್ಯಮಿ ರಮೇಶ್ ಚಂದ್ರ ಪುರೋಹಿತ್ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಹಣ ಕಳ್ಳತನವಾದ ಸಂಬಂಧ ನೀಡಿದ ದೂರಿನ ಮೇರೆಗೆ 2016ರ ಮಾರ್ಚ್ 19ರಂದು ಜೀವನ್‌ಭಿಮಾನಗರ ಪೊಲೀಸರು ಮಹೇಂದ್ರನನ್ನು ಠಾಣೆಗೆ ಕರೆತಂದಿದ್ದರು. ವಿಚಾರಣೆ ನೆಪದಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದರು. ಪೊಲೀಸರ ಏಟಿನಿಂದ ಗಂಭೀರ ಗಾಯಗೊಂಡ ಮಹೇಂದ್ರ ರಾಥೋಡ್‌ ಲಾಕಪ್‌ನಲ್ಲಿಯೇ ಮೃತಪಟ್ಟಿದ್ದರು.

ಲಾಕಪ್ ಡೆತ್ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಜೀವನ್‌ಭಿಮಾನಗರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ಗಳಾಗಿದ್ದ ನಾಲ್ವರನ್ನೂ ವಿಚಾರಣೆ ನಡೆಸಲಾಗಿತ್ತು. ಕಾನ್‌ಸ್ಟೆಬಲ್‌ಗಳಾದ ಏಜಾಜ್ ಖಾನ್, ಕೇಶವಮೂರ್ತಿ, ಮೋಹನ ರಾಮ್, ಸಿದ್ದಪ್ಪ ಬೊಮ್ಮನಹಳ್ಳಿ ಅವರುಗಳು, ತಪ್ಪೊಪ್ಪಿಕೊಳ್ಳುವಂತೆ ಬೆದರಿಸಿ ಆರೋಪಿಗೆ ಲಾಠಿ, ರೂಲರ್‌ನಿಂದ ಗಂಭೀರ ಹಲ್ಲೆ ನಡೆಸಿದ್ದ ಸಂಗತಿ ತನಿಖೆಯಿಂದ ಬಯಲಾಗಿತ್ತು.

ತನಿಖೆ ಪೂರ್ಣಗೊಳಿಸಿದ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ 2019ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ 51ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಯಶವಂತಕುಮಾರ್, ಪ್ರಾಸಿಕ್ಯೂಷನ್ ನೀಡಿದ್ದ ಪ್ರಬಲ ಸಾಕ್ಷ್ಯಾಧಾರ ಹಾಗೂ ವಾದ ಪುರಸ್ಕರಿಸಿ ಅಪರಾಧಿಗಳಿಗೆ ಏಳು ವರ್ಷ ಜೈಲು ಶಿಕ್ಷೆ ಹಾಗೂ ತಲಾ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಅಪರಾಧಿಗಳು ಪಾವತಿಸುವ ದಂಡದ ಮೊತ್ತವನ್ನು ಮೃತ ಮಹೇಂದ್ರ ರಾಥೋಡ್ ಕುಟುಂಬಸ್ಥರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಲಾಕಪ್ ಡೆತ್ ಸಂತ್ರಸ್ಥನಿಗೆ ದೊರೆಯಬಹುದಾದ ಪರಿಹಾರ ನೀಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶಿಸಿದ್ದಾರೆ. 

ಪಾದದ ಮೂಳೆ ಮುರಿದಿತ್ತು

ಲಾಕಪ್‌ನಲ್ಲೇ ಮೃತಪಟ್ಟ ಮಹೇಂದ್ರ ರಾಥೋಡ್ ಮರಣೋತ್ತರ ಪರೀಕ್ಷೆಯಲ್ಲಿ ಪೊಲೀಸರ ಲಾಠಿ ಏಟಿಗೆ ಬಲಪಾದದ ಮೂಳೆ ಮುರಿದಿರುವುದು ದೃಢಪಟ್ಟಿತ್ತು. ಪೊಲೀಸರ ಹೊಡೆತದಿಂದ ದೈಹಿಕ ಒತ್ತಡ ಉಂಟಾಗಿ ಮೆದುಳು, ಮೂತ್ರಪಿಂಡ, ಹೃದಯ, ಶ್ವಾಸಕೋಶಕ್ಕೆ ಆಮ್ಲಜನಕದ ಕೊರತೆ ಉಂಟಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ವರದಿ ನೀಡಿದ್ದರು.

ಅನುವಂಶೀಯತೆಯಿಂದಲೂ ಆಮ್ಲಜನಕ ಕೊರತೆ ಉಂಟಾಗಿ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ತನಿಖೆಯಲ್ಲಿ ಅಭಿಪ್ರಾಯಪಟ್ಟಿದ್ದರು. ಆ ಹಿನ್ನೆಲೆಯಲ್ಲಿ ಮಹೇಂದ್ರ ರಾಥೋಡ್ ಅವರ ಇಬ್ಬರ ಮಕ್ಕಳನ್ನೂ ವೈದ್ಯಕೀಯ ಪರೀಕ್ಷೆ ಒಳಪಡಿಸಿದಾಗ ಯಾವುದೇ ಸಮಸ್ಯೆಯಿರಲಿಲ್ಲ. ಹಾಗಾಗಿ ಪೊಲೀಸರ ಹೊಡೆತದಿಂದಲೇ ಸಮಸ್ಯೆಯಾಗಿದೆ ಎಂಬ ನಿರ್ಣಯಕ್ಕೆ ಬರಲಾಗಿತ್ತು. ಮಹೇಂದ್ರ ರಾಥೋಡ್ ಎರಡೂ ಪಾದಗಳು, ಮೊಣಕಾಲಿನ ಸಂಧಿ, ಭುಜ ಹಾಗೂ ದವಡೆ ಊದಿಕೊಂಡಿತ್ತು. ಚರ್ಮ ನೀಲಿಬಣ್ಣಕ್ಕೆ ತಿರುಗಿತ್ತು. ಪೊಲೀಸರು ಚಿತ್ರಹಿಂಸೆ ಹಿಂಸೆ ನೀಡಿದ್ದರಿಂದಲೇ ಮಹೇಂದ್ರ ಮೃತಪಟ್ಟಿದ್ದ ಎಂಬುದಕ್ಕೆ ಪ್ರಬಲ ಸಾಕ್ಷ್ಯಗಳು ಲಭ್ಯವಾಗಿದ್ದವು ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ.

ಮಹೇಂದ್ರ ಹಣ ಕದ್ದಿರಲಿಲ್ಲ

ಇಂದಿರಾನಗರದ ಉದ್ಯಮಿ ರಮೇಶ್ ಚಂದ್ರ ಪುರೋಹಿತ್ ನಿವಾಸದಲ್ಲಿ ಮೂರೂವರೆ ಲಕ್ಷ ಹಣ ಕಳವಾಗಿತ್ತು. ಇದೇ ಮನೆಯಲ್ಲಿ 14 ವರ್ಷಗಳಿಂದ ಗಾರ್ಡನಿಂಗ್ ಕೆಲಸ ಮಾಡುತ್ತಿದ್ದ ಮಹೇಂದ್ರ ರಾಥೋಡ್ ಮೇಲೆ ಮನೆ ಮಾಲೀಕರಿಗೆ ಸಂಶಯವಿತ್ತು. ಇದನ್ನೇ ನೆಪ ಮಾಡಿಕೊಂಡು ಪೊಲೀಸರು ಮಹೇಂದ್ರ ರಾಥೋಡ್‌ನನ್ನು ಠಾಣೆಗೆ ಕರೆತಂದು ಹಿಂಸಿಸಿದ್ದರು. ಹಣ ಕಳುವು ಮಾಡಿದ ಕುರಿತು ತಪ್ಪಿಪ್ಪಿಕೊಳ್ಳುವಂತೆ ಪೊಲೀಸ್ ಕಾನ್ಸ್‌ಟೇಬಲ್‌ಗಳು ಹಲ್ಲೆ ನಡೆಸಿದ್ದರು. ಆದರೆ, ಪ್ರಕರಣದ ತನಿಖೆ ವೇಳೆ ಮಹೇಂದ್ರ ಕಳವು ಮಾಡಿರಲಿಲ್ಲ ಎಂಬುದು ದೃಢಪಟ್ಟಿತ್ತು ಎಂದು ಸಿಐಡಿ ಪೊಲೀಸರು ಹೇಳಿದ್ದಾರೆ.

ರಾಜ್ಯದಲ್ಲಿ ಎಲ್ಲೆಲ್ಲಿ ಲಾಕಪ್‌ ಡೆತ್

ಕಳೆದ ಮೇ ತಿಂಗಳಲ್ಲಿ ಉಡುಪಿಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕೇರಳದ ಕೊಲ್ಲಂ ಜಿಲ್ಲೆಯ ಬಿಜು ಮೋಹನ್ (44) ಎಂಬಾತ ಲಾಕಪ್ ನಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದ. ಪೊಲೀಸರ ಚಿತ್ರಹಿಂಸೆಯಿಂದ ಮೃತಪಟ್ಟಿದ್ದಾನೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದರು.

ಕಳೆದ ನವೆಂಬರ್ ತಿಂಗಳಲ್ಲಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಆದಿಲ್ ಎಂಬಾತ ಮೃತಪಟ್ಟಿದ್ದ. ಆದಿಲ್ ಸಾವಿಗೆ ಪೊಲೀಸರೇ ಕಾರಣ ಎಂದು ಕುಟುಂಬಸ್ಥರು ಹಾಗೂ ಸಮುದಾಯದವರು ಠಾಣೆ ಮೇಲೆ ದಾಳಿ ನಡೆಸಿದ್ದರು. ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ.

Tags:    

Similar News