ಧರ್ಮಸ್ಥಳದ ಪಾವಿತ್ರ್ಯತೆಗೆ ಕಳಂಕ ತಂದವರಿಗೆ ದೈವಿಕ ಶಿಕ್ಷೆ ತಪ್ಪದು; ಮಾಜಿ ಪ್ರಧಾನಿ ದೇವೇಗೌಡರ ಎಚ್ಚರಿಕೆ

"ಘಟನೆ ಹಿಂದಿರುವರಿಗೆ ದೈವಿಕ ಶಿಕ್ಷೆ ತಪ್ಪಿಲ್ಲ. ಸತ್ಯವನ್ನು ಯಾರೂ ಮುಚ್ಚಿಡಲು ಸಾಧ್ಯವಿಲ್ಲ. ಸರ್ಕಾರದ ತನಿಖೆಗೆ ಧೃತಿಗೆಬೇಕಾಗಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.;

Update: 2025-08-27 13:49 GMT

ಮಾಜಿ ಪ್ರಧಾನಿ ದೇವೇಗೌಡರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಗಣೇಶ ಪೂಜೆ ನೆರವೇರಿಸಿದರು

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮೌನ ಮುರಿದಿದ್ದಾರೆ. ಶ್ರೀಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿದೆ. ಅಪಪ್ರಚಾರದ ಹಿಂದಿರುವವರಿಗೆ ದೈವಿಕ ಶಿಕ್ಷೆ ತಪ್ಪದು ಎಂದು ಹೇಳಿದರು. 

ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ಬುಧವಾರ ಗೌರಿ ಗಣೇಶ ಹಬ್ಬದ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದರು.

ಅನಾಮಿಕ ವ್ಯಕ್ತಿಯೊಬ್ಬ ನೀಡಿದ ದೂರಿನ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರದ ಕುರಿತು ಅಪಪ್ರಚಾರ ನಡೆಯುತ್ತಿದೆ. ಜತೆಗೆ ಎಸ್‌ಐಟಿ ತನಿಖೆಯೂ ನಡೆಯುತ್ತಿದೆ. ಆದರೆ, ಕ್ಷೇತ್ರದ ಪಾವಿತ್ರ್ಯತೆಗೆ ಭಂಗ ತರಲು ಕೆಲವರು ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

"ಘಟನೆ ಹಿಂದಿರುವರಿಗೆ ದೈವಿಕ ಶಿಕ್ಷೆ ತಪ್ಪಿಲ್ಲ. ಸತ್ಯವನ್ನು ಯಾರೂ ಮುಚ್ಚಿಡಲು ಸಾಧ್ಯವಿಲ್ಲ. ಸರ್ಕಾರದ ತನಿಖೆಗೆ ಧೃತಿಗೆಬೇಕಾಗಿಲ್ಲ ಎಂದು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.  

ಶ್ರೀಕ್ಷೇತ್ರದ ಪಾವಿತ್ರ್ಯಕ್ಕೆ ಭಂಗ

ಧರ್ಮಸ್ಥಳ ಮಂಜುನಾಥ ಸ್ವಾಮಿಯ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಧರ್ಮಸ್ಥಳ ದೊಡ್ಡ ಸಂಸ್ಥೆ. ಇಂತಹ ಪವಿತ್ರ ಕ್ಷೇತ್ರದ ಹೆಗ್ಗಳಿಕೆಗೆ ಧಕ್ಕೆ ತರುವ ಉದ್ದೇಶದಿಂದ ಕೆಲವರು ದುಷ್ಕೃತ್ಯಕ್ಕೆ ಮುಂದಾಗಿದ್ದಾರೆ.

ರಾಜ್ಯ ಸರ್ಕಾರವು ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದೆ. ತನಿಖೆಯ ವಿವರಗಳ ಬಗ್ಗೆ ಹೆಚ್ಚಿನದನ್ನು ಈಗ ಹೇಳುವುದಿಲ್ಲ. ತನಿಖೆಯಿಂದ ಸತ್ಯಾಂಶಗಳು ಹಂತ ಹಂತವಾಗಿ ಬಹಿರಂಗಗೊಳ್ಳಲಿವೆ ಎಂದು ಹೇಳಿದರು.

ದೈವದ ಮೇಲೆ ನಂಬಿಕೆ

ದೇವೇಗೌಡರು ತಮ್ಮ ದೈವಿಕ ನಂಬಿಕೆಯನ್ನು ಪುನರುಚ್ಚರಿಸಿ, "ಈ ದುಷ್ಕೃತ್ಯದಲ್ಲಿ ಭಾಗಿಯಾದವರಿಗೆ ಮಂಜುನಾಥ ಸ್ವಾಮಿಯೇ ಶಿಕ್ಷೆ ನೀಡುತ್ತಾನೆ. ಪರಮೇಶ್ವರನ ಪರೀಕ್ಷೆಗೆ ಯಾರಿಗೂ ಯೋಗ್ಯತೆ ಇಲ್ಲ. ಈ ಘಟನೆಯಿಂದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಆಳವಾಗಿ ನೊಂದಿದ್ದಾರೆ. ರಾಜ್ಯಸಭೆ ಕಲಾಪದಲ್ಲಿ ಹೆಗ್ಗಡೆಯವರೊಂದಿಗೆ ಸಮಾಲೋಚನೆ ಮಾಡಿದ್ದೆ. ಈಗ ತನಿಖೆಯಲ್ಲಿ ಒಂದೊಂದೇ ಸತ್ಯ ಹೊರಬರುತ್ತಿರುವುದರಿಂದ  ಹೆಗ್ಗಡೆ ಅವರು ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ದೇವೇಗೌಡರು ಹೇಳಿದರು.

ಭಾನುವಾರವಷ್ಟೇ ಧರ್ಮಸ್ಥಳ ಎಸ್ ಐ ಟಿ ತನಿಖೆ ಕುರಿತಂತೆ ಪ್ರತಿಕ್ರಿಯಿಸಿದ್ದ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ,  ಪುಣ್ಯ ಕ್ಷೇತ್ರ ಧರ್ಮಸ್ಥಳಕ್ಕೆ ವಿಶ್ವ ವ್ಯಾಪಿ ಭಕ್ತರಿದ್ದಾರೆ. ಅದರಲ್ಲಿ ನಾನೂ ಒಬ್ಬ. ಇತ್ತೀಚೆಗೆ ಮುಸುಕುಧಾರಿ ಹೇಳಿದನೆಂದು ಸರ್ಕಾರ ಎಸ್ಐಟಿ ರಚಿಸಿದೆ.  

ಧರ್ಮಸ್ಥಳದ ಎಲ್ಲಾ ಕಡೆಗಳಲ್ಲಿ ಅಗೆದು ಶೋಧ ನಡೆಸಲಾಗುತ್ತಿದೆ. ಅಲ್ಲಿ ಏನೂ ಇಲ್ಲ ಎಂಬುದು ಗೊತ್ತಾಗಿ, ಆತನ ಬಣ್ಣ ಬಯಲಾದ ಮೇಲೂ ಧರ್ಮಸ್ಥಳಕ್ಕೆ ಕಳಂಕ ತರುವ ಕೆಲಸ ಮಾಡಬೇಕಿತ್ತಾ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.

ಯಾರೋ ಒಬ್ಬ ಅನಾಮಿಕ ಹೇಳಿದ ಮಾತ್ರಕ್ಕೆ ಇಡೀ ಕ್ಷೇತ್ರವನ್ನು ಅನುಮಾನದಿಂದ ನೋಡುವಂತಾಗಿದೆ. ರಾಜ್ಯದ ಜನರಿಗೆ ಅನುಮಾನ ಮೂಡಿಸುವಂತೆ ಮಾಡಿದ್ದು ಇದೇ ರಾಜ್ಯ ಸರ್ಕಾರ. ಕಾಂಗ್ರೆಸ್ ಪಕ್ಷ ಸನಾತನ ಧರ್ಮ ಉಳಿಸಲಿದೆ ಎಂದು ಹೇಳಲು ಆಗುವುದಿಲ್ಲ ಎಂದು ದೇವನಹಳ್ಳಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. 

ಇನ್ನು ಈ ಕುರಿತಂತೆ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

Tags:    

Similar News