Mysore MUDA Case |ಇಡಿ ತನಿಖೆ ಚುರುಕು ; ಮುಡಾದ ಮಾಜಿ ಆಯುಕ್ತ ದಿನೇಶ್‌ ಕುಮಾರ್​ ಬಂಧನ

ಇಡಿ ನೋಟಿಸ್‌ ಹಿನ್ನೆಲೆಯಲ್ಲಿ ಶಾಂತಿನಗರದ ಇ.ಡಿ. ಕಚೇರಿಗೆ ಮಂಗಳವಾರ ವಿಚಾರಣೆಗೆ ದಿನೇಶ್‌ ಕುಮಾರ್‌ ಹಾಜರಾಗಿದ್ದರು. ಇ.ಡಿ. ಅಧಿಕಾರಿಗಳು ಕೆಲ ಹೊತ್ತು ವಿಚಾರಣೆ ನಡೆಸಿದ ಬಳಿಕ ಮಂಗಳವಾರ ಸಂಜೆ ಬಂಧಿಸಿದ್ದಾರೆ.;

Update: 2025-09-17 04:50 GMT

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ 2022 ರಲ್ಲಿ ಆಯುಕ್ತರಾಗಿದ್ದ ಜಿ.ಟಿ. ದಿನೇಶ್ ಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದಿದ್ದ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ 2022 ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಜಿ.ಟಿ. ದಿನೇಶ್ ಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ನಕಲಿ ದಾಖಲೆಗಳ ಮೂಲಕ ಮುಡಾ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿ ಹಣ ಗಳಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. 

ಇಡಿ ನೋಟಿಸ್‌ ಹಿನ್ನೆಲೆಯಲ್ಲಿ ಶಾಂತಿನಗರದ ಇ.ಡಿ. ಕಚೇರಿಗೆ ಮಂಗಳವಾರ ವಿಚಾರಣೆಗೆ ದಿನೇಶ್‌ ಕುಮಾರ್‌ ಹಾಜರಾಗಿದ್ದರು. ಇ.ಡಿ. ಅಧಿಕಾರಿಗಳು ಕೆಲ ಹೊತ್ತು ವಿಚಾರಣೆ ನಡೆಸಿದ ಬಳಿಕ ಮಂಗಳವಾರ ಸಂಜೆ ಬಂಧಿಸಿದ್ದಾರೆ. ಬಳಿಕ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದಾರೆ. ನಂತರ ವಿಚಾರಣೆ ನಡೆಸಿದ ನ್ಯಾಯಾಧೀಶರು ಇ.ಡಿ. ಅಧಿಕಾರಿಗಳ ಮನವಿ ಮೇರೆಗೆ ಹೆಚ್ಚಿನ ವಿಚಾರಣೆಗಾಗಿ ದಿನೇಶ್ ಕುಮಾ‌ರ್ ಅವರನ್ನು ಇ.ಡಿ. ವಶಕ್ಕೆ ನೀಡಿದ್ದಾರೆ.

ಏನಿದು ಪ್ರಕರಣ?

ದಿನೇಶ್ ಕುಮಾರ್ ಅವರು ಮುಡಾ ಆಯುಕ್ತರಾಗಿದ್ದ ಅವಧಿಯಲ್ಲಿ 50:50ರ ಅನುಪಾತದಲ್ಲಿ ನೂರಾರು ಕೋಟಿ ರೂ ಮೌಲ್ಯದ ನಿವೇಶನಗಳನ್ನು ಅಕ್ರಮವಾಗಿ  ಮರು ಹಂಚಿಕೆ ಮಾಡಿ ಅದರಿಂದ ಗಳಿಸಿದ ಹಣವನ್ನು ಅಕ್ರಮ ಆಸ್ತಿ ರೂಪದಲ್ಲಿ ಸಂಗ್ರಹಿಸಿದ್ದಾರೆ ಎಂದು ಇಡಿ ಅಧಿಕಾರಿಗಳು ಆರೋಪಿಸಿದ್ದಾರೆ. ತನಿಖೆಯ ವೇಳೆ ಬ್ಯಾಂಕ್ ವಹಿವಾಟು ಹಾಗೂ ಇತರೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಆಸ್ತಿ ಗಳಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮಕ್ಕೆ ನಕಲಿ ದಾಖಲೆಗಳನ್ನು ಬಳಸಲಾಗಿದೆ ಎಂಬುದು ದೃಢಪಟ್ಟಿದೆ.

100 ಕೋಟಿ ರೂ. ಆಸ್ತಿ ಮುಟ್ಟುಗೋಲು

ಪ್ರಕರಣದ ತನಿಖೆ ಮುಂದುವರೆಸಿರುವ ಇಡಿ ಅಧಿಕಾರಿಗಳು, ದಿನೇಶ್ ಕುಮಾರ್‌ಗೆ ಸೇರಿದ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಹಗರಣದಲ್ಲಿ ಒಟ್ಟು 400 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ನ್ಯಾಯಾಂಗ ಬಂಧನ

ದಿನೇಶ್ ಕುಮಾರ್ ಅವರನ್ನು ಬಂಧಿಸಿದ ಇಡಿ ಅಧಿಕಾರಿಗಳು ಮಂಗಳವಾರ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಒಂದು ದಿನದ ಕಸ್ಟಡಿ ನೀಡಿ ಆದೇಶಿಸಿದೆ. ಬುಧವಾರ ಸಂಜೆ 5.40ರ ಒಳಗಾಗಿ ದಿನೇಶ್ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಇಡಿಗೆ ಸೂಚನೆ ನೀಡಲಾಗಿದೆ. 

Tags:    

Similar News