ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ
ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಎಂ ವೀರಪ್ಪ ಮೊಯ್ಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆಯ ಕಾವು ಏರಿರುವಾಗಲೇ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಎಂ ವೀರಪ್ಪ ಮೊಯ್ಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ವೀರಪ್ಪ ಮೊಯ್ಲಿ ಅವರು ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಹೈಕಮಾಂಡ್ ಕೊನೆ ಕ್ಷಣದಲ್ಲಿ ಯುವ ನಾಯಕರ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ವೀರಪ್ಪ ಮೊಯ್ಲಿ ಕೊಂಚ ನಿರಾಸೆಯಲ್ಲಿದ್ದರು. ಇದೀಗ ಅಂತಿಮವಾಗಿ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ವೀರಪ್ಪ ಮೊಯ್ಲಿ
1974 ರಿಂದ ರಾಜಕೀಯದಲ್ಲಿರುವ ವೀರಪ್ಪ ಮೊಯ್ಲಿಯವರು, 19 ನವೆಂಬರ್ 1992 ರಿಂದ 11 ಡಿಸೆಂಬರ್ 1994 ವರೆಗೆ ಕರ್ನಾಟಕದ 13ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ, ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರದ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. 1972 ರಿಂದ 1999ರವರೆಗೆ ಮೊಯಿಲಿಯವರು ಉಡುಪಿ ಜಿಲ್ಲೆಯ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದರು. ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಸೋಲು ಅನುಭವಿಸಿ ಕೊನೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 2009 ರಿಂದ 2019 ರವರೆಗೆ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದಾರೆ.
ವೀರಪ್ಪ ಮೊಯ್ಲಿ ರಾಜಕೀಯ ಹಾದಿ ಹೇಗಿತ್ತು?
2012: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ.
2011–2012: ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಕ್ಯಾಬಿನೆಟ್ ಮಂತ್ರಿ
2009–2011: ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಕ್ಯಾಬಿನೆಟ್ ಮಂತ್ರಿ
2006–2009: ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ OBC ಗಳಿಗೆ 27 ಪ್ರತಿಶತ ಮೀಸಲಾತಿಯ ಅನುಷ್ಠಾನಕ್ಕಾಗಿ ಉಸ್ತುವಾರಿ ಸಮಿತಿಯ ಅಧ್ಯಕ್ಷ
2002–2004: ಕಂದಾಯ ಸುಧಾರಣಾ ಆಯೋಗದ ಅಧ್ಯಕ್ಷರು
2005–2009: 2ನೇ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು
2000–2002: ತೆರಿಗೆ ಸುಧಾರಣಾ ಆಯೋಗದ ಅಧ್ಯಕ್ಷರು
1992–1994: ಕರ್ನಾಟಕದ ಮುಖ್ಯಮಂತ್ರಿ
1989–1992: ಕಾನೂನು, ಯುವಜನ ಸೇವೆ, ಸಂಸ್ಕೃತಿ, ಮಾಹಿತಿ, ಸಂಸದೀಯ ವ್ಯವಹಾರಗಳು ಮತ್ತು ಶಿಕ್ಷಣ ಸಚಿವ
1983–1985: ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕ
1980–1982: ಕರ್ನಾಟಕ ಹಣಕಾಸು ಮತ್ತು ಯೋಜನಾ ಸಚಿವ
1974–1977: ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಚಿವ
ಸದ್ಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆಂಧ್ರಪ್ರದೇಶದ ಉಸ್ತುವಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರಲ್ಲಿ ಒಬ್ಬರಾಗಿದ್ದು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಆಪ್ತ ಸಲಹೆಗಾರರಾಗಿ ಗುರುತಿಸಿಕೊಂಡಿದ್ದಾರೆ.
ಸಾಹಿತ್ಯದಲ್ಲೂ ಗುರುತಿಸಿಕೊಂಡಿರುವ ವೀರಪ್ಪ ಮೊಯ್ಲಿ
ರಾಜಕಾರಣದ ಜೊತೆಗೆ ಸಾಹಿತ್ಯ ವಲಯದಲ್ಲೂ ಗುರುತಿಸಿಕೊಂಡಿರುವ ವೀರಪ್ಪ ಮೊಯ್ಲಿ, ಹಲವು ಕೃತಿಗಳನ್ನು ಬರೆದಿದ್ದಾರೆ. ಸುಳಿಗಾಳಿ, ಸಾಗರದೀಪ. ಕೊಟ್ಟ, ತೆಂಬರೆ ನಾಟಕಗಳು: ಮಿಲನ, ಪ್ರೇಮವೆಂದರೆ, ಪರಾಜಿತ. ಕವನ ಸಂಕಲನ: ಹಾಲು ಜೇನು, ಮತ್ತೆ ನಡೆಯಲಿ ಸಮರ, ಯಕ್ಷಪ್ರಶ್ನೆ ಜೊತೆಯಾಗಿ ನಡೆಯೋಣ ( ಮಾಲತಿ ಮೊಯಿಲಿಯವರ ಜೊತೆಯಲ್ಲಿ) ಮಹಾಕಾವ್ಯ: ಶ್ರೀರಾಮಾಯಣ ಮಹಾನ್ವೇಷಣಂ, ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ. 2020ರಲ್ಲಿ ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯ ಮಹಾಕಾವ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಕೂಡ ಭಾಜನರಾಗಿದ್ದರು.