ಬೆಳ್ತಂಗಡಿ ಮಾಜಿ ಶಾಸಕ ವಸಂತ್ ಬಂಗೇರ ನಿಧನ
ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79ವ) ಬುಧವಾರ (ಮೇ 8) ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.;
ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79ವ) ಬುಧವಾರ (ಮೇ 8) ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಕೇದೆ ಸುಬ್ಬ ಪೂಜಾರಿ - ದೇವಕಿ ದಂಪತಿಯ ಪ್ರಥಮ ಪುತ್ರನಾಗಿ 1946ರ ಜನವರಿ 15ರಂದು ಜನಿಸಿದ್ದ ಅವರ ಆರೋಗ್ಯ ಇತ್ತೀಚೆಗೆ ತೀವ್ರವಾಗಿ ಹದಗೆಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರು ಕೊನೆಯುಸಿರೆಳೆದಿದ್ದು, ಮೇ 9ರಂದು ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಚುನಾವಣೆಗೆ ನಿಂತು ಗೆಲವು ಸಾಧಿಸಿ ಬಂಗೇರ ದಾಖಲೆ ಬರೆದಿದ್ದರು. 1983 ಮತ್ತು 1985ರಲ್ಲಿ ವಸಂತ ಬಂಗೇರ ಬಿಜೆಪಿಯಿಂದ (BJP) ಸ್ಪರ್ಧಿಸಿ ಗೆದ್ದು ಶಾಸಕರಾಗಿ ಆಯ್ಕೆಯಾದರೆ ಆ ನಂತರ 1989ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಂತ ಬಂಗೇರ ಸೋಲು ಕಂಡಿದ್ದರು.
1994ರಲ್ಲಿ ಜನತಾದಳದ (JDS) ಅಭ್ಯರ್ಥಿಯಾಗಿ ನಿಂತು ಗೆಲುವು ಸಾಧಿಸಿದರು. 1999 ಮತ್ತು 2004ರಲ್ಲಿ ಈ ಕ್ಷೇತ್ರ ಬಿಜೆಪಿ ಪಾಲಾಗಿತ್ತು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಇವರನ್ನು ಸಹೋದರ ಪ್ರಭಾಕರ ಬಂಗೇರ ಸೋಲಿಸಿದ್ದರು. ಆ ನಂತರ 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ (Congress) ಸ್ಪರ್ಧಿಸಿದ್ದ ವಸಂತ ಬಂಗೇರ ಸಹೋದರನನ್ನು ಸೋಲಿಸಿದರು. 2013ರಲ್ಲಿ ವಸಂತ ಬಂಗೇರ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಬಿಜೆಪಿಯ ರಂಜನ್ ಗೌಡ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.