C T Ravi Case | ಭದ್ರತಾ ಕಾರಣದಿಂದ ಸಿಟಿ ರವಿ ಸ್ಥಳಾಂತರ: ಬೆಳಗಾವಿ ಪೊಲೀಸ್
ಸಿಟಿ ರವಿ ಅವರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಬೆಂಗಾವಲು ಪಡೆಯು ಕ್ರಮ ಕೈಕೊಂಡಿದೆ. ಈ ಪ್ರಕ್ರಿಯೆಯುದ್ದಕ್ಕೂ ಪೊಲೀಸರು ಸಿಟಿ ರವಿ ಅವರಿಗೆ ಆಹಾರ ಮತ್ತು ವೈದ್ಯಕೀಯ ಸೇವೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದಾರೆ ಎಂದು ರವಿ ಅವರ ಆರೋಪಗಳನ್ನು ಪೊಲೀಸರು ತಳ್ಳಿಹಾಕಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಗುರುವಾರ ವಿಧಾನ ಪರಿಷತ್ ನಲ್ಲಿ ಅಶ್ಲೀಲ ಪದ ಬಳಕೆ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪ ಮೇಲೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಸಿ.ಟಿ.ರವಿ ಅವರನ್ನು ಬೆಳಗಾವಿ ಗ್ರಾಮಾಂತರದ ಬಾಗೇವಾಡಿ ಪೊಲೀಸರು ಬಂಧಿಸಿದ್ದರು. ಬಂಧನ ಬಳಿಕ ಪೊಲೀಸರು ಬೆಂಗಳೂರಿಗೆ ಕರೆದೊಯ್ಯುವುದಾಗಿ ಹೇಳಿ ರಾತ್ರಿ ಇಡೀ ಕಾರಿನಲ್ಲಿ ಬೆಳಗಾವಿ ಜಿಲ್ಲೆಯಲ್ಲೇ ಸುತ್ತಾಡಿಸಿದ್ದರು ಎಂದು ಸಿ.ಟಿ.ರವಿ ಆರೋಪಿಸಿದ್ದರು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಸ್ಪಷ್ಟನೆ ನೀಡಿದ್ದು, ಸಿಟಿ ರವಿ ಅವರನ್ನು ರಾತ್ರಿಯೆಲ್ಲ ಸುತ್ತಾಡಿಸಿದ್ದೇಕೆ ಎಂಬುದಕ್ಕೆ ಕಾರಣ ನೀಡಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಯಡಾ ಮಾರ್ಟಿನ್ ಹೇಳಿದ್ದೇನು?
ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ: 186/2024 ಕಲಂ 75, 79 ಬಿಎನ್ಎಎಸ್ ದಾಖಲಾದ ನಂತರ ಸಿಟಿ ರವಿ ರವರನ್ನು ವಶಕ್ಕೆ ಪಡೆದು, ಹಿರೇಬಾಗೇವಾಡಿ ಠಾಣೆಯ ತನಿಖಾಧಿಕಾರಿಗಳಿಗೆ ಹಸ್ತಾಂತರಿಸಲಾಗಿರುತ್ತದೆ. ಆದರೆ ಸಿಟಿ ರವಿ ರವರ ಭದ್ರತಾ ಅಂಶವನ್ನು ಪರಿಗಣಿಸಿ ಹಾಗೂ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಬಳಿ ಅಪಾರ ಜನಸ್ತೋಮ ಸೇರಿದ್ದರಿಂದ ಅವರನ್ನು ಖಾನಾಪುರ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಯಿತು. ಖಾನಾಪೂರದಲ್ಲಿಯೂ ಕೂಡ ಹೆಚ್ಚಿನ ಪ್ರಮಾಣದ ಮಾಧ್ಯಮ ಪ್ರತಿನಿಧಿಗಳು, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಸೇರಿ ಗೊಂದಲದ ವಾತಾವರಣ ನಿರ್ಮಾಣ ಮಾಡಿದರು. ಅಲ್ಲದೇ ಹೆಚ್ಚುವರಿ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಆಗಮಿಸುವ ಸಾಧ್ಯತೆ ಇತ್ತು. ಈ ಎಲ್ಲ ಅಂಶಗಳು ಸಹ ಸಾರ್ವಜನಿಕ ಸುವ್ಯವಸ್ಥೆ ಹಾಳು ಮಾಡುವ ಸಾಮರ್ಥ್ಯ ಹೊಂದಿದ್ದವು ಎಂದು ಯಡಾ ಮಾರ್ಟಿನ್ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ಸಿಟಿ ರವಿ ರವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಖಾನಾಪುರದಿಂದ ಅವರನ್ನು ರಾಮದುರ್ಗಕ್ಕೆ ಸ್ಥಳಾಂತರಿಸಲಾಯಿತು. ಎಲ್ಲ ಮುನ್ನೆಚ್ಚರಿಕೆಗಳ ಹೊರತಾಗಿಯೂ ಮಾಧ್ಯಮಗಳು ಹಾಗೂ ಇನ್ನಿತರ ವ್ಯಕ್ತಿಗಳು ಬೆಂಗಾವಲು ಪಡೆಯನ್ನು ಹಿಂಬಾಲಿಸಿದರು. ಸಿಟಿ ರವಿ ಅವರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಬೆಂಗಾವಲು ಪಡೆಯು ಅವರೆಲ್ಲರಿಂದ ತಪ್ಪಿಸಿಕೊಳ್ಳುವ ಕ್ರಮಗಳನ್ನು ಕೈಕೊಂಡಿರುತ್ತಾರೆ. ಈ ಪ್ರಕ್ರಿಯೆಯುದ್ದಕ್ಕೂ ಪೊಲೀಸರು ಸಿಟಿ ರವಿ ಅವರಿಗೆ ಆಹಾರ ಮತ್ತು ವೈದ್ಯಕೀಯ ಸೇವೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿರುತ್ತಾರೆ. ಮರುದಿನ ರವಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ ಎಂದು ಮಾರ್ಟಿನ್ ತಿಳಿಸಿದ್ದಾರೆ.
ಸಿಟಿ ರವಿ ಅವರನ್ನು ರಾತ್ರಿಯಿಡೀ ಸುತ್ತಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯವಾಗಿಯೂ ಬಹಳಷ್ಟು ವಾಕ್ಸಮರಕ್ಕೆ ಕಾರಣವಾಗಿತ್ತು. ಸಚಿವರ ಒತ್ತಡದ ಮೇರೆಗೆ ಪೊಲೀಸರು ಹೀಗೆ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.
ಸಿಟಿ ರವಿ ನಕಲಿ ಎನ್ಕೌಂಟರ್ಗೆ ಷಡ್ಯಂತ್ರ ರೂಪಿಸಲಾಗಿತ್ತು ಎಂದೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೂಡ ಆರೋಪಿಸಿದ್ದರು. ಬಂಧನದ ಬಳಿಕ ಪೊಲೀಸ್ ಠಾಣೆ ಒಳಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಸಿ ಟಿ ರವಿ, ನನ್ನ ಜೀವಕ್ಕೆ ಅಪಾಯ ಇದೆ. ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನನ್ನ ಜೀವಕ್ಕೆ ಅಪಾಯ ಇದೆ. ನನ್ನ ಜೀವಕ್ಕೇನಾದರೂ ಆದರೆ ಡಿ ಕೆ ಶಿವಕುಮಾರ್, ಲಕ್ಷ್ಮಿ ಹೆಬ್ಬಾಳ್ಳರ್ ತಂಡವೇ ಕಾರಣ ಎಂದು ಆರೋಪಿಸಿದ್ದರು.