ಸಮಾಧಿಯಲ್ಲೂ ಅಂತಸ್ತು | ಬೆಂಗಳೂರಿನ ಈ ಸ್ಮಶಾನದಲ್ಲಿ ಫ್ಲೋರ್ ಸಮಾಧಿಗಳಿವೆ ಗೊತ್ತೆ?
ಸತ್ತವರನ್ನು ಹೂಳಲೂ ಜಾಗವಿಲ್ಲದ ಊರು ಎಂಬ ಮಾತು ಬೆಂಗಳೂರಿಗೆ ಈಗ ನೂರಕ್ಕೆ ನೂರು ಅನ್ವಯವಾಗುತ್ತಿದೆ. ಇಲ್ಲಿ ಬದುಕಿದ್ದವರಿಗೆ ಮಾತ್ರವಲ್ಲ; ಸತ್ತವರಿಗೂ ಸಮಾಧಿಯಲ್ಲಿ ಅಂತಸ್ತು !;
"ಆ ಊರಲ್ಲಿ, ಬದುಕಿದವರಿಗಿರಲಿ, ಸತ್ತವರಿಗೂ ಜಾಗವಿಲ್ಲ; ಹೆಣ ಹೂಳೋಕು ಆರಡಿ- ಮೂರಡಿ ಜಾಗ ಸಿಗಲ್ಲ.." ಎಂಬುದು ಭೂಮಿ ದುಬಾರಿಯಾಗಿದೆ ಎಂಬುದನ್ನು ಹೇಳಲು ಬಳಕೆಯಾಗುವ ಲೋಕಾರೂಢಿ ಮಾತು. ಆದರೆ, ಬೆಂಗಳೂರು ಮಹಾನಗರದ ಪಾಲಿಗೆ ಲೋಕಾರೂಢಿ ಮಾತು ಅಕ್ಷರಶಃ ನಿಜವಾಗುತ್ತಿದೆ!
ಶವ ಹೂಳಲೂ ಜಾಗವಿಲ್ಲದೆ, ಒಂದರ ಮೇಲೊಂದು ಶವವನ್ನು ಕಪಾಟಿನಲ್ಲಿಟ್ಟಂತೆ ಜೋಡಿಸಿ ಹಲವು ಅಂತಸ್ತುಗಳ(ಫ್ಲೋರ್) ಸಮಾಧಿ ಕಟ್ಟುವ ಸ್ಥಿತಿ ಬೆಂಗಳೂರಿನ ಸ್ಮಶಾನಗಳಲ್ಲಿ ಈಗ ರೂಢಿಗೆ ಬಂದಿದೆ. ಅಂತಹ ಅಚ್ಚರಿಯ ಸಂಗತಿಗೆ ಸದ್ಯ ಬೆಂಗಳೂರಿನ ಕಾಕ್ಸ್ ಟೌನ್ ಕಲ್ಲಹಳ್ಳಿ ಸ್ಮಶಾನದಲ್ಲಿ ನಡೆಯುತ್ತಿದೆ.
ಒಂದು ಸಮಾಧಿಯಲ್ಲಿ ಎಷ್ಟು ಶವಗಳನ್ನು ಹೂಳಬಹುದು? ಸಾಮಾನ್ಯವಾಗಿ ಒಂದು ಸಮಾಧಿಯಲ್ಲಿ ಒಂದು ಶವ ಹೂಳುವುದು ವಾಡಿಕೆ. ಆದರೆ ಬೆಂಗಳೂರಿನ ಈ ಸ್ಮಶಾನದಲ್ಲಿ ಶವದ ಮೇಲೆ ಶವಗಳನ್ನು ಸರಣಿಯಾಗಿ ಹೂಳುತ್ತ ಒಂದೊಂದು ಸಮಾಧಿಯಲ್ಲಿ ಸರಾಸರಿ 5-6 ಶವಗಳನ್ನು ಹೂಳಿ ಗೋರಿ ಕಟ್ಟಿರುವುದನ್ನು ನೋಡಬಹುದು.
ಇಲ್ಲಿ ಜಾಗದ ಅಭಾವದ ಕಾರಣದಿಂದ ಸಮಾಧಿಯನ್ನು ಪುನಃ ಪುನಃ ಅಗೆದು ಒಂದೇ ಸಮಾಧಿಯಲ್ಲಿ ಒಂದೇ ಕುಟುಂಬದ ಹಲವಾರು ಮಂದಿ ಸದಸ್ಯರ ಶವವನ್ನು ಹೂಳುವುದು ಒಂದು ವಾಡಿಕೆಯೇ ಆಗಿದೆ.
ಬೆಂಗಳೂರು ಮಹಾನಗರ ದಿನಕಳೆದಂತೆ ನಿಯಂತ್ರಣ ಮೀರಿ ಬೆಳೆಯುತ್ತಿದೆ. ನಗರ ಬೆಳೆದಂತೆ ನಗರದ ಸ್ಮಶಾನಗಳು ಶವ ಸಂಸ್ಕಾರ ಮಾಡಲು ಸ್ಥಳಾವಕಾಶವಿಲ್ಲದೆ ಒತ್ತಡದಿಂದ ನಲುಗುತ್ತಿವೆ.
ಬೆಂಗಳೂರಿನ ಕಾಕ್ಸ್ ಟೌನ್ ಕಲ್ಲಹಳ್ಳಿ (ಕಲ್ಪಳ್ಳಿ)ಯಲ್ಲಿ 84 ಎಕರೆ ವಿಸ್ತಿರ್ಣದ ಬೃಹತ್ ಸ್ಮಶಾನವಿದೆ. ಈ ಸ್ಮಶಾನದ ಮುಂಭಾಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಾರ್ವಜನಿಕರ ಗಮನಕ್ಕೆ ಬರುವಂತೆ ಪ್ರದರ್ಶಿಸಿದ ನೋಟಿಸ್ ಹೀಗಿದೆ "ಈ ರುಧ್ರಭೂಮಿಯಲ್ಲಿ ಯಾವುದೇ ಕಾರಣಕ್ಕೂ ಶವಸಂಸ್ಕಾರದ ನಂತರ ಗೋರಿ ನಿರ್ಮಾಣ ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿಗಳು ಅತಿಕ್ರಮಣ ಪ್ರವೇಶ ಮಾಡಿ ಗೋರಿ ನಿರ್ಮಿಸಿದ್ದಲ್ಲಿ, ಅವರ ವಿರುದ್ದ ಕಾನೂನು ಕ್ರಮ ತಗೆದುಕೊಳ್ಳಲಾಗುವುದು" ಎಂಬುದು ನೋಟಿಸ್ ಸಾರಾಂಶ. ಹೌದು ಕಾಕ್ಸ್ ಟೌನ್ ನ ಕಲ್ಲಹಳ್ಳಿಯಲ್ಲಿರುವ ರುದ್ರ ಭೂಮಿಯಲ್ಲಿ ಶವ ಸುಡುವುದು, ವಿದ್ಯುತ್ ಚಿತಾಗಾರದ ಮೂಲಕ ಶವ ಸಂಸ್ಕಾರ ಹಾಗೂ ಹೆಣ ಹೂಳುವ (ಗೋರಿ ಕಟ್ಟುವ) ಪದ್ದತಿಯಲ್ಲಿ ಶವ ಸಂಸ್ಕಾರ ಮಾಡಲಾಗುತ್ತದೆ.
ಆದರೆ ಈಗ ಸ್ಮಶಾನದಲ್ಲಿ ಜಾಗ ಇಲ್ಲದೆ ಇರುವುದರಿಂದ ಗೋರಿ ಕಟ್ಟುವುದನ್ನು ನಿಷೇದಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆದೇಶ ಹೊರಡಿಸಿದೆ. ಇದರ ನಡುವೆಯೂ ಕೆಲವರು ಶವಗಳನ್ನು ಅವರ ಸಂಬಂಧಿಕರ ಗೋರಿಗಳನ್ನು ಅಗೆದು ಅದರಲ್ಲಿ ಶವ ಹೂಳುತ್ತಿರುವುದು ಕಾನೂನುಬಾಹಿರವಾಗಿ ನಡೆಯುತ್ತಿದೆ. ಹೀಗೆ ಒಂದೊಂದು ಗೋರಿಯಲ್ಲಿ ಎಂಟು ಹತ್ತು ಶವಗಳನ್ನು ಹೂಳಿರುವುದನ್ನು ಇಲ್ಲಿ ನೋಡಬಹುದು. ಗೋರಿಗಳ ಮೇಲೆ ಹಾಕಿದ ಸತ್ತವರ ಸರಣಿ ಹೆಸರು, ದಿನಾಂಕದ ನಾಮ ಫಲಕದಿಂದ ಒಂದೇ ಗೋರಿಯಲ್ಲಿ ಹಲವಾರು ಶವಗಳನ್ನು ಹೊತ್ತಿರುವುದು ಗಮನಕ್ಕೆ ಬರುತ್ತದೆ.
ಉದಾಹರಣೆಗೆ ಇಲ್ಲಿರುವ ಒಂದು ಗೋರಿಯಲ್ಲಿ 1994 ರಲ್ಲಿ ಕೆ.ಕಣ್ಣನ್, 1998 ರಲ್ಲಿ ಕೆ.ತಂಗಾಮ್ಮಾಲ, 2002 ರಲ್ಲಿ ಕೆ.ದೇವೇಂದ್ರ, 2015 ರಲ್ಲಿ ಕೆ.ಸೆಲ್ವರಾಜ್ ಹಾಗೂ 2021 ರಲ್ಲಿ ಕೆ.ಸುಂದರ್ ಅವರ ಶವವನ್ನು ಹೂಳಲಾಗಿದೆ. ಈ ರೀತಿಯ ನೂರಾರು ಗೋರಿಗಳನ್ನು ಇಲ್ಲಿ ನೋಡಬಹುದಾಗಿದೆ.
ಈ ಸ್ಮಶಾನದಲ್ಲಿ 2021 ರಲ್ಲಿ 1866, 2022 ರಲ್ಲಿ 1529, 2023 ರಲ್ಲಿ 1486 ಶವಗಳನ್ನು ಸಂಸ್ಕಾರ ಮಾಡಲಾಗಿದೆ.
ಕಾಕ್ಸ್ ಟೌನ್, ಫ್ರೇಜರ್ ಟೌನ್, ಶಿವಾಜಿನಗರ, ಬೈಯಪ್ಪನಹಳ್ಳಿ, ಮಾರುತಿ ಸೇವಾನಗರ, ಬಾಣಸವಾಡಿ ಹಾಗೂ ಜೀವನಹಳ್ಳಿ ಬಡಾವಣೆಯ ನಿವಾಸಿಗಳ ಶವವನ್ನು ಇಲ್ಲಿ ಸಂಸ್ಕಾರ ಮಾಡಲಾಗುತ್ತದೆ ಎಂದು ಸ್ಥಳೀಯ ನಿವಾಸಿ ಎನ್.ಎಸ್.ರವಿ ʼದ ಫೆಡರಲ್ ಕರ್ನಾಟಕʼಕ್ಕೆ ಮಾಹಿತಿ ನೀಡಿದರು.
ಕಲ್ಲಹಳ್ಳಿ ಸ್ಮಶಾನದ ವಿಶಾಲ ಪ್ರದೇಶದಲ್ಲಿ ಕಣ್ಣುಹಾಯಿಸಿದ ಕಡೆಯಲ್ಲ ಸಾವಿರಾರು ಸಮಾಧಿ ಕಾಣುತ್ತದೆ. ಕೆಲವರು ತಮ್ಮ ಸಂಬಂಧಿಕರ ಸಮಾಧಿಯ ಮೇಲೆ ಹೊದೆಸಿದ ಗ್ರಾನೈಟ್ ಕಲ್ಲಿನ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿರುವ ದೃಶ ಇಲ್ಲಿ ಸರ್ವ ಸಾಮಾನ್ಯ.
ಬಿಬಿಎಂಪಿ ವೈದ್ಯಾಧಿಕಾರಿ ಮಂಜುಳಾ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ "ಬಿಬಿಎಂಪಿ ಸ್ಮಶಾನದಲ್ಲಿ ಗೋರಿ ಕಟ್ಟುವುದನ್ನು ನಿಷೇದಿಸಿ ಆದೇಶ ಹೊರಡಿಸಲಾಗಿದೆ. ಆ ಹಿನ್ನಲೆಯಲ್ಲಿ ಕಲ್ಲಹಳ್ಳಿ ಸ್ಮಶಾನದಲ್ಲೂ ಗೋರಿ ಕಟ್ಟುವುದಕ್ಕೆ ಅವಕಾಶ ನೀಡುವುದಿಲ್ಲ. ಅಕ್ರಮವಾಗಿ ಗೋರಿ ಕಟ್ಟುವವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗುತ್ರದೆ" ಎಂದು ಹೇಳಿದರು.
ಕಲ್ಲಳ್ಳಿ ಸ್ಮಶಾನದಲ್ಲಿ ಕಳೆದ ಹಲವಾರು ವರ್ಷಗಳಿಂದ ಶವ ಸಂಸ್ಕಾರದ ಕಾಯಕ ಮಾಡಿಕೊಂಡಿರುವ ಕುಟ್ಟಿ ಅವರನ್ನು ʼದ ಫೆಡರಲ್ ಕರ್ನಾಟಕʼ ಮಾತನಾಡಿಸಿದಾಗ, "ಈ ಸ್ಮಸಾನದ ವಿದ್ಯುತ್ ಚಿತಾಗಾರದಲ್ಲಿ ಪ್ರತಿ ದಿನ ಸರಾಸರಿ 5-6 ಶವಗಳ ಸಂಸ್ಕಾರ ನಡೆಸಲಾಗುತ್ತದೆ, 2-3 ಶವಗಳನ್ನು ಸೌದೆಯಿಂದ ಸುಡುವ ಮೂಲಕ ಸಂಸ್ಕಾರ ನಡೆಸಲಾಗುತ್ತದೆ. ಬಿಬಿಎಂಪಿ ನಿರ್ಬಂಧ ಆದೇಶವಿದ್ದರೂ ಅದನ್ನು ಉಲ್ಲಂಘಿಸಿ ಪ್ರತಿದಿನ 5-6 ಶವಗಳ ಗೋರಿಕಟ್ಟುವ ಕಾರ್ಯ ಈಗಲೂ ನಡೆಯುತ್ತದೆ. ಶವ ಸಂಸ್ಕಾರಕ್ಕೆ ಬರುವವರು ಹೊರಗಿನಿಂದ ಜನರನ್ನು ಕರೆದುಕೊಂಡು ಬಂದು ಅವರ ನೆರವಿನಿಂದ ಶವವನ್ನು ಹೂತು ಗೋರಿ ಕಟ್ಟಿಸುತ್ತಾರೆ" ಎಂದರು.
"ಕಲ್ಪಹಳ್ಳಿ ಸ್ಮಶಾನದ ನಿರ್ವಹಣೆ ಅತ್ಯಂತ ಕಳಪೆಯಾಗಿದ್ದು ಯಾವುದೇ ರೀತಿಯ ಸ್ವಚ್ಚತೆಯಿಲ್ಲದೆ ಇರುವುದರಿಂದ ಸತ್ತವರಿಗೆ ಅವಮಾನ ಮಾಡಿದಂತೆ ಆಗಿದೆ. ಈ ಸ್ಮಶಾನವನ್ನು ವೈಜ್ಞಾನಿಕವಾಗಿ ಅಭಿವೃದ್ದಿಪಡಿಸಲು ಬಿಬಿಎಂಪಿ ವಿಶೇಷ ಯೋಜನೆ ರೂಪಿಸಬೇಕು" ಎಂದು ಸ್ಥಳೀಯ ಹಿರಿಯ ನಾಗರಿಕ ನಾರಾಯಣ ರೆಡ್ಡಿ ಒತ್ತಾಯಿಸಿದ್ದಾರೆ.
ಕಾಕ್ಸ್ ಟೌನ್ ನಿವಾಸಿ ಚಿನ್ನತಂಬಿ ಮಾತನಾಡಿ, "ಸ್ಮಶಾನದಲ್ಲಿ ಶವ ಹೂಳಲು ಜಾಗ ಇಲ್ಲದ ಕಾರಣ ಸಮಾಧಿ ಮಾಡುವ ಸಂಪ್ರದಾಯಗಳನ್ನು ಪರಿಪಾಲನೆ ಮಾಡಲು ಆಗುತ್ತಿಲ್ಲ. ಈಗ ಅನಿವಾರ್ಯವಾಗಿ ವಿದ್ಯುತ್ ಚಿತಾಗಾರದಲ್ಲಿ ಶವ ಸುಡುವ ಮಾರ್ಗವನ್ನೇ ಆಯ್ದುಕೊಳ್ಳಬೇಕಾಗಿದೆ" ಎಂದರು.
ಈ ಸಮಾಧಿಯ ಮತ್ತೊಂದು ವಿಶೇಷವೆಂದರೆ, ಭಾರತದ ಮಾಜಿ ರಾಷ್ಟಪತಿ ನೀಲಂ ಸಂಜೀವ್ ರೆಡ್ಡಿ ಅವರ ಅಂತ್ಯಕ್ರಿಯೆ ಇದೆ ಸ್ಮಶಾನದಲ್ಲಿ ನಡೆಸಲಾಗಿದೆ. ಮಾಜಿ ರಾಷ್ಟ್ರಪತಿಗಳ ಸಮಾಧಿಗೆ ವಿಶೇಷ ಸ್ಮಾರಕ ನಿರ್ಮಿಸಿರುವುದು ಮತ್ತೊಂದು ವಿಶೇಷ.