ಗ್ರೇಟರ್ ಬೆಂಗಳೂರು ಅಡಿಯಲ್ಲಿ ಐದು ಪಾಲಿಕೆ ರಚನೆ, ಶೀಘ್ರವೇ ಚುನಾವಣೆ
ಮಂಗಳೂರು ಭಾಗದಲ್ಲಿ ನಮಗೆ ಹೆಚ್ಚು ಸೋಲಾಗಿದೆ. ಆದರೆ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚು ಫಲಾನುಭವಿಗಳು ಇದೇ ಭಾಗದವರಿದ್ದಾರೆ. ಗ್ಯಾರಂಟಿ ಟೀಕಿಸುವವರು ಗ್ಯಾರಂಟಿ ಯೋಜನೆ ಬೇಡವಾದರೆ ಬರೆದು ಕಳಿಸಿ ಎಂದು ಡಿಸಿಎಂ ತಿಳಿಸಿದ್ದಾರೆ.;
ಡಿಸಿಎಂ ಡಿ.ಕೆ. ಶಿವಕುಮಾರ್
ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ ಐದು ಪಾಲಿಕೆ ರಚನೆ ಮಾಡಲು ಕೆಲವರು ವಿರೋಧ ಮಾಡಬಹುದು. ಆದರೆ ಆಡಳಿತ ದೃಷ್ಟಿಯಿಂದ ಇದನ್ನು ಮಾಡಲೇಬೇಕಾಗಿದ್ದು ಶೀಘ್ರ ಚುನಾವಣೆ ನಡೆಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮಂಗಳವಾರ ಕೆಪಿಸಿಸಿ ಕಚೇರಿ ಭಾರತ್ ಜೋಡೋ ಭವನದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪದಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಐದು ಪಾಲಿಕೆಗಳನ್ನು ಮಾಡಲು ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಪಾಲಿಕೆಗಳು ರಚನೆಯಾದರೆ ನಮ್ಮ ಕಾರ್ಯಕರ್ತರಿಗೆ ಹೆಚ್ಚಿನ ಸ್ಥಾನ ನೀಡಲೇಬೇಕು ಎಂದು ನಾವು ತೀರ್ಮಾನಿಸಿದ್ದೇವೆ. ಇದಕ್ಕೆ ಅಡಿಪಾಯ ತಯಾರು ಮಾಡಬೇಕಿದೆ. ಒಬ್ಬರೇ ಸರ್ಕಾರ ತರಲು ಆಗುವುದಿಲ್ಲ ನಮಗೆ ಕಾರ್ಯಕರ್ತರೇ ಜೀವಾಳ ಎಂದರು.
ಜನ ಕಲ್ಯಾಣಕ್ಕಾಗಿ ಶೇ. 25 ಹಣ ವಿನಿಯೋಗ
“ರಾಜ್ಯ ಸರ್ಕಾರ ಸಮಾಜ ಹಾಗೂ ಬಡವರ ಕಲ್ಯಾಣಕ್ಕಾಗಿ 1 ಲಕ್ಷ ಕೋಟಿ ರೂ. ಹಣ ನೀಡಿದೆ. 50 ಸಾವಿರ ಕೋಟಿ ರೂ. ಗ್ಯಾರಂಟಿಗಳಿಗೆ ವೆಚ್ಚವಾದರೆ, ರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು 19 ಸಾವಿರ ಕೋಟಿ ರೂ, ಪಿಂಚಣಿಗಳಿಗೆ ಸುಮಾರು 11 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ರಾಜ್ಯ ಬಜೆಟ್‌ನ ಶೇ.25 ಹಣವನ್ನು ಜನರಿಗೆ ನೀಡುತ್ತಿದ್ದೇವೆ. ಈ ಕುರಿತು ಜನರಿಗೆ ಮನದಟ್ಟು ಮಾಡಬೇಕಿರುವುದು ಕಾರ್ಯಕರ್ತರ ಕರ್ತವ್ಯ” ಎಂದರು.
ದೇಶದ ಇತಿಹಾಸದಲ್ಲಿ ಕಾಂಗ್ರೆಸ್ ನೀಡಿರುವ ಹಲವಾರು ಕಾರ್ಯಕ್ರಮಗಳನ್ನು ಯಾರೂ ನಿಲ್ಲಸಲು ಸಾಧ್ಯವಿಲ್ಲ. ಉಳುವವನೆ ಭೂಮಿಯ ಒಡೆಯ, ಅಂಗನವಾಡಿ, ಆಶಾ, ನರೇಗಾ ಹೀಗೆ ನೂರಾರು ಕಾರ್ಯಕ್ರಮಗಳು ಕಾಂಗ್ರೆಸ್ ಜನರಿಗೆ ನೀಡಿರುವ ಶಕ್ತಿ. ಅರಣ್ಯ ಭೂಮಿ ಹಕ್ಕು, ಆಹಾರ ಭದ್ರತಾ ಕಾಯ್ದೆಗಳನ್ನು ಬಿಜೆಪಿಯವರು ಬದಲಾವಣೆ ಮಾಡಲು ಸಾಧ್ಯವಾಯಿತೇ? ರೈತರ ಪಂಪ್ ಸೆಟ್‌ಗೆ ಉಚಿತ ವಿದ್ಯುತ್ ನೀಡಿದ್ದು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ. ನಾವು ಯಾವುದೇ ರಾಜಕೀಯ ದೃಷ್ಟಿ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿಲ್ಲ. ಜನರ ಅಭಿವೃದ್ದಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಹಟ್ಟಿ, ತಾಂಡಾಗಳ ಜನರಿಗೆ ದಾಖಲೆ ವಿತರಣೆ
"ಬ್ಯಾಂಕ್‌ಗಳ ರಾಷ್ಟ್ರೀಕರಣದಿಂದ ಬ್ಯಾಂಕ್‌ಗಳೇ ಮನೆ ಬಾಗಿಲಿಗೆ ಬಂದಿವೆ. ಶಾಲೆಗಳಲ್ಲಿನ ಬಿಸಿಯೂಟ, ಅನ್ನಭಾಗ್ಯ ಇದೆಲ್ಲವೂ ಕ್ರಾಂತಿಕಾರಕ ಯೋಜನೆಗಳು. ಹಟ್ಟಿ, ತಾಂಡಾಗಳಲ್ಲಿ ವಾಸವಿರುವ ಜನರು ಯಾವುದೇ ಭೂ ದಾಖಲೆಗಳನ್ನು ಹೊಂದಿರಲಿಲ್ಲ. ಅವರಿಗೆಲ್ಲ ಉಚಿತವಾಗಿ ಭೂ ದಾಖಲೆಗಳನ್ನು ನೀಡಲಾಗುತ್ತಿದೆ. ಇತ್ತೀಚೆಗೆ 1,11,111 ದಾಖಲೆಗಳನ್ನು ನೀಡಲಾಗಿದೆ” ಎಂದರು.
“ರಾಜ್ಯ ಸರ್ಕಾರ ಐದು ಗ್ಯಾರಂಟಿ ಜತೆಗೆ ಭೂ ಗ್ಯಾರಂಟಿ ನೀಡಿದೆ. ಈಗ ಬೆಂಗಳೂರು ನಗರದಲ್ಲಿ ಎಲ್ಲಾ ಆಸ್ತಿ ಖಾತಾ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಅನೇಕ ಆಸ್ತಿ ಮಾಲೀಕರಿಗೆ ತಮ್ಮ ಆಸ್ತಿ ಯಾರ ಹೆಸರಲ್ಲಿದೆ ಎಂಬುದೇ ಗೊತ್ತಿಲ್ಲ. ಇದನ್ನು ಸರಿಪಡಿಸಿ ದಾಖಲೆಗಳನ್ನು ನೀಡಲು ಮುಂದಾಗಿದೆ. ಸಚಿವ ಕೃಷ್ಣಭೈರೇಗೌಡ ಅವರ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಎನ್ಎಸ್‌ಯುಐನಿಂದ ಇಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿದ್ದೇನೆ
ಪ್ರತಿ ವಾರ್ಡ್, ಪಂಚಾಯಿತಿಗಳಲ್ಲಿ ಗ್ಯಾರಂಟಿ ಸಮಾವೇಶ ಮಾಡುವುದರ ಬಗ್ಗೆ ಚಿಂತಿಸಲಾಗುತ್ತಿದೆ. ಆ ಮೂಲಕ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು. ಸರ್ಕಾರ ಶೀಘ್ರವೇ ವಾರ್ಡ್ ಮೀಸಲಾತಿ ತೀರ್ಮಾನ ಮಾಡಲಿದೆ. ಎನ್ಎಸ್‌ಯುಐನಿಂದ ಇಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿದ್ದೇನೆ. ನನಗೆ ನಿಮ್ಮ ನೋವು ಅರಿವಾಗುತ್ತದೆ. ಅಧಿಕಾರ ಹಂಚಿಕೆ ಸಂದರ್ಭದಲ್ಲಿ ನಾವು ಎಲ್ಲರಿಗೂ ಸ್ಥಾನಮಾನ ನೀಡಲು ಆಗದೇ ಇರಬಹುದು. ಆದರೆ ಯಾವುದಾದರೂ ಒಂದು ಸಂದರ್ಭದಲ್ಲಿ ಅವಕಾಶ ಸಿಕ್ಕಾಗ ನಿಮಗೆ ಸೂಕ್ತ ಅಧಿಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.
ಶೀಘ್ರವೇ ಮಹಿಳಾ ಮೀಸಲು ಜಾರಿ
ಮನೆಯಲ್ಲಿ ಏನೇ ಸಮಸ್ಯಗಳಿದ್ದರೂ ನಮ್ಮ ಮಹಿಳಾ ಕಾರ್ಯಕರ್ತೆಯರು ಪಕ್ಷಕ್ಕಾಗಿ ದುಡಿಯುತ್ತಾರೆ. ಇದಕ್ಕಾಗಿ ರಾಜಕೀಯದಲ್ಲಿ ಶೇ. 33 ಮೀಸಲು ತರಲು ನಾವು ಪ್ರಯತ್ನಿಸಿದ್ದೆವು. ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗೆ ಮಹಿಳಾ ಮೀಸಲು ಜಾರಿಗೆ ತರಲು ಸಿದ್ಧತೆ ನಡೆಯುತ್ತಿದೆ. ಇದು ಜಾರಿಯಾದರೆ ನಮ್ಮ ಜತೆಗೆ 75 ಜನ ಮಹಿಳಾ ಶಾಸಕಿಯರು ವಿಧಾನಸಭೆಗೆ ಆಯ್ಕೆಯಾಗುತ್ತಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಶೇ. 50 ಮೀಸಲಾತಿ ನೀಡಿದ್ದೇವೆ ಎಂದರು.
ಗ್ಯಾರಂಟಿಯಲ್ಲಿ ಕರಾವಳಿಗೆ ಹೆಚ್ಚಿನ ಪಾಲು
ಮಂಗಳೂರು ಭಾಗದಲ್ಲಿ ನಮಗೆ ಹೆಚ್ಚು ಸೋಲಾಗಿದೆ. ಆದರೆ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚು ಫಲಾನುಭವಿಗಳು ಇದೇ ಭಾಗದವರಿದ್ದಾರೆ. ಹೀಗಾಗಿ ಗ್ಯಾರಂಟಿ ಟೀಕಿಸುವ ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆ ಬೇಡವಾದರೆ ನಿಮ್ಮ ಕಾರ್ಯಕರ್ತರಿಂದ ಬರೆದು ಕಳಿಸಿ. ಗ್ಯಾರಂಟಿ ಯೋಜನೆ ಫಲ ಅನುಭವಿಸಿ ಅದನ್ನೇ ಟೀಕೆ ಮಾಡಿದರೆ ಹೇಗೆ? ಅವರು ಏನೇ ಟೀಕೆ ಮಾಡಲಿ ಅವರ ಟೀಕೆಗಳು ಸಾಯುತ್ತವೆ ನಮ್ಮ ಕೆಲಸಗಳು ಉಳಿಯುತ್ತವೆ ಎಂದು ತಿಳಿಸಿದರು.