ಸಿ.ಕೆ. ರಾಮಮೂರ್ತಿ ನೇತೃತ್ವದ 'ಧರ್ಮಯಾತ್ರೆ'ಯಲ್ಲಿ ದುರಂತ: ಸಹೋದರನಿದ್ದ ಕಾರು ಡಿಕ್ಕಿ ಹೊಡೆದು ಪಾದಚಾರಿ ಸಾವು

ಆಗ್ರಹಿಸಿ ಶಾಸಕ ಸಿ.ಕೆ. ರಾಮಮೂರ್ತಿ ಮತ್ತು ಅವರ ಬೆಂಬಲಿಗರು ಜಯನಗರದಿಂದ ಸುಮಾರು 400 ಕಾರುಗಳಲ್ಲಿ 'ಧರ್ಮಸ್ಥಳ ಚಲೋ' ಯಾತ್ರೆಯನ್ನು ಆರಂಭಿಸಿದ್ದರು.;

Update: 2025-08-25 10:47 GMT

ಜಯನಗರದ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಅವರ ನೇತೃತ್ವದಲ್ಲಿ 'ಧರ್ಮಸ್ಥಳ ಚಲೋ' ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಧರ್ಮಯಾತ್ರೆಯ ವೇಳೆ ಭೀಕರ ಅಪಘಾತ ಸಂಭವಿಸಿದ್ದು, ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕುಣಿಗಲ್ ತಾಲೂಕಿನ ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದೆ. ಯಾತ್ರೆಯಲ್ಲಿ ಭಾಗವಹಿಸಿದ್ದ KA-05-NJ-2449 ನೋಂದಣಿ ಸಂಖ್ಯೆಯ ಕಾರು ಪಾದಚಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಈ ಕಾರಿನಲ್ಲಿ ಶಾಸಕ ರಾಮಮೂರ್ತಿ ಅವರ ಸಹೋದರ ಮುರಳಿ ಅವರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಕಾರು ಗುದ್ದಿದ ತೀವ್ರತೆಗೆ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆಯಲ್ಲಿ ಇನ್ನು ಕೆಲವರು ಗಾಯಗೊಂಡಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಕುಣಿಗಲ್ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಕಾರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಧರ್ಮಸ್ಥಳದ ಕುರಿತು ನಡೆಯುತ್ತಿರುವ ಅಪಪ್ರಚಾರ ನಡೆಸಲಾಗುತ್ತಿದೆ ಎಂಬುದನ್ನು ಖಂಡಿಸಿ ಹಾಗೂ ಇದರ ಹಿಂದಿರುವ ಸೂತ್ರಧಾರಿಗಳನ್ನು ಬಂಧಿಸುವಂತೆ ಆಗ್ರಹಿಸಿ ಶಾಸಕ ಸಿ.ಕೆ. ರಾಮಮೂರ್ತಿ ಮತ್ತು ಅವರ ಬೆಂಬಲಿಗರು ಜಯನಗರದಿಂದ ಸುಮಾರು 400 ಕಾರುಗಳಲ್ಲಿ 'ಧರ್ಮಸ್ಥಳ ಚಲೋ' ಯಾತ್ರೆಯನ್ನು ಆರಂಭಿಸಿದ್ದರು. ಈ ಯಾತ್ರೆಯು ಧರ್ಮಸ್ಥಳಕ್ಕೆ ತೆರಳುತ್ತಿದ್ದ ಮಾರ್ಗಮಧ್ಯೆ ಈ ದುರಂತ ಸಂಭವಿಸಿದೆ. 

Tags:    

Similar News