ಭಾರತದ ರಸ್ತೆಗಿಳಿದ ಮೊದಲ ಟೆಸ್ಲಾ ಮಾಡೆಲ್ Y: ಸಚಿವ ಪ್ರತಾಪ್ ಸರ್ನಾಯಕ್ ಮೊದಲ ಮಾಲೀಕ

ಈ ಕಾರು ಖರೀದಿಯು ಹಸಿರು ಚಲನಶೀಲತೆ ಮತ್ತು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ ಎಂದು ಸಚಿವ ಸರ್ನಾಯಕ್ ಹೇಳಿದ್ದಾರೆ.;

Update: 2025-09-05 12:44 GMT

ಭಾರತದಲ್ಲಿ ಮೊದಲ ಟೆಸ್ಲಾ ಶೋ ರೂಂ ಅನ್ನು ಜೆ ನಲ್ಲಿ ಪ್ರಾರಂಭಿಸಿದ ಒಂದು ದಿನದ ನಂತರ ಸಚಿವರು ಮಾಡೆಲ್ ವೈ ಅನ್ನು ಬುಕ್ ಮಾಡಿದ್ದರು.

ಎಲೆಕ್ಟ್ರಿಕ್ ವಾಹನ (EV) ತಯಾರಿಕೆಯಲ್ಲಿ ಜಗತ್ತಿನಾದ್ಯಂತ ಹೆಸರು ಮಾಡಿರುವ ಟೆಸ್ಲಾ ಕಂಪನಿಯು ಭಾರತದಲ್ಲಿ ತನ್ನ ಮೊದಲ ಕಾರನ್ನು ವಿತರಿಸಿದೆ. ಮಹಾರಾಷ್ಟ್ರದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಭಾರತದ ಮೊದಲ ಟೆಸ್ಲಾ ಮಾಡೆಲ್ Y ಕಾರನ್ನು ಶುಕ್ರವಾರ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (BKC) ಹೊಸ ಶೋರೂಂನಿಂದ ಸ್ವೀಕರಿಸಿದರು.

ಈ ಕಾರು ಖರೀದಿಯು ಹಸಿರು ಚಲನಶೀಲತೆ ಮತ್ತು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ ಎಂದು ಸಚಿವ ಸರ್ನಾಯಕ್ ಹೇಳಿದ್ದಾರೆ. "ನಾನು ಈ ಟೆಸ್ಲಾ ಕಾರನ್ನು ನಾಗರಿಕರಲ್ಲಿ, ವಿಶೇಷವಾಗಿ ಯುವ ಪೀಳಿಗೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಅರಿವು ಮೂಡಿಸಲು ಖರೀದಿಸಿದ್ದೇನೆ. ಮಕ್ಕಳು ಇಂತಹ ಕಾರುಗಳನ್ನು ನೋಡಿ, ಸುಸ್ಥಿರ ಸಾರಿಗೆಯ ಮಹತ್ವವನ್ನು ಅರಿಯಬೇಕು" ಎಂದು ಅವರು ತಿಳಿಸಿದರು. ಈ ಕಾರನ್ನು ತಮ್ಮ ಮೊಮ್ಮಗನಿಗೆ ಉಡುಗೊರೆಯಾಗಿ ನೀಡುವುದಾಗಿಯೂ ಅವರು ಹೇಳಿದರು.

ಮಹಾರಾಷ್ಟ್ರ ಸರ್ಕಾರವು ಮುಂದಿನ ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 'ಸ್ವಚ್ಛ ಚಲನಶೀಲತೆ'ಯ ದೃಷ್ಟಿಗೆ ಅನುಗುಣವಾಗಿ ಪ್ರಮುಖ ಇವಿ ಪರಿವರ್ತನೆಯ ಗುರಿಯನ್ನು ಹೊಂದಿದೆ. ಈಗಾಗಲೇ ಅಟಲ್ ಸೇತು ಮತ್ತು ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್ ವಿನಾಯಿತಿಯಂತಹ ಹಲವು ಪ್ರೋತ್ಸಾಹಕಗಳನ್ನು ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.

ಭಾರತದಲ್ಲಿ ಟೆಸ್ಲಾ

ಭಾರತದ ಮಾರುಕಟ್ಟೆಯಲ್ಲಿ ಟೆಸ್ಲಾಗೆ ಆರಂಭದಲ್ಲಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದುವರೆಗೆ ಮಾಡೆಲ್ Y ಗಾಗಿ 600 ಬುಕ್ಕಿಂಗ್‌ಗಳನ್ನು ಸ್ವೀಕರಿಸಿದೆ. ಈ ವರ್ಷ 350-500 ಕಾರುಗಳನ್ನು ಭಾರತಕ್ಕೆ ರವಾನಿಸುವ ಯೋಜನೆ ಹೊಂದಿದೆ. ಭಾರತದಲ್ಲಿ ಮಾಡೆಲ್ Y ಎರಡು ಮಾದರಿಗಳಲ್ಲಿ ಲಭ್ಯವಿದೆ. ರಿಯರ್-ವೀಲ್ ಡ್ರೈವ್ (RWD) ಆವೃತ್ತಿಯ ಬೆಲೆ 59.89 ರೂಪಾಯಿ ಲಕ್ಷದಿಂದ ಮತ್ತು ಲಾಂಗ್ ರೇಂಜ್ ಆವೃತ್ತಿಯ ಬೆಲೆ 67.89 ಲಕ್ಷ ರೂಪಾಯಿ ಆರಂಭವಾಗುತ್ತದೆ. ಪ್ರಸ್ತುತ, ಮುಂಬೈ, ದೆಹಲಿ ಮತ್ತು ಗುರುಗ್ರಾಮದ ಶೋರೂಂಗಳಲ್ಲಿ ಬುಕ್ಕಿಂಗ್ ಲಭ್ಯವಿದೆ.

Tags:    

Similar News