Bangalore-Mysore Expressway | ವೇಗ ಮಿತಿ 130 ಕಿ.ಮೀ. ಮೀರಿದರೆ ಎಫ್‌ಐಆರ್ !

Update: 2024-07-27 10:46 GMT

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ದಿನೇದಿನೆ ಅಪಘಾತಗಳು ಹೆಚ್ಚಾಗುತ್ತಿವೆ. ಮನಸೋಇಚ್ಛೆ ವೇಗದಲ್ಲಿ ಸವಾರರು ವಾಹನ ಚಲಾಯಿಸುತ್ತಿದ್ದಾರೆ. ಹೀಗಾಗಿ ಗಂಟೆಗೆ 130 ಕಿ.ಮೀ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಸಂಚಾರ ಹಾಗೂ ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ಹೆದ್ದಾರಿಗಳಲ್ಲಿ ಅಧಿಕ ವೇಗದಲ್ಲಿ ವಾಹನ ಚಾಲನೆ ಮಾಡುವವರಿಗೆ ಬಿಸಿ ಮುಟ್ಟಿಸಲು ಬೆಂಗಳೂರು ಸಂಚಾರ ಪೊಲೀಸರು​​ ಮುಂದಾಗಿದ್ದು ಸಿಸಿಟಿವಿ ಪರಿಶೀಲಿಸಿ ಕೇಸ್ ದಾಖಲಿಸಲಿದ್ದಾರೆ. ಇನ್ಮುಂದೆ ಹೆದ್ದಾರಿಗಳಲ್ಲಿ ವೇಗವಾಗಿ ವಾಹನ ಸವಾರಿ ಮಾಡಿದವರ ವಿರುದ್ಧ FIR ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲು ಸಂಚಾರ ಪೊಲೀಸರು ಮುಂದಾಗಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಎಡಿಜಿಪಿ ಅಲೋಕ್‌ಕುಮಾರ್‌, ʻʻಅತಿ ವೇಗದ ಚಾಲನೆಯಿಂದ 90%ರಷ್ಟು ಅಪಘಾತ ಸಾಧ್ಯತೆ ಇರುತ್ತೆ. ಪರಿಶೀಲನೆ ವೇಳೆ ಒಂದೇ ದಿನ‌ 150ಕ್ಕೂ ಹೆಚ್ಚು ಅತಿ ವೇಗ ಚಾಲನೆ ಕೇಸ್​ಗಳು ದಾಖಲಾಗುತ್ತಿವೆ. ಹೀಗಾಗಿ ನಿನ್ನೆ ಮೈಸೂರು- ಬೆಂಗಳೂರು ಹೈವೇ ಸಿಸಿಟಿವಿ ಪರಿಶೀಲನೆ ಮಾಡಿ ಆಗಸ್ಟ್ 1 ರಿಂದ ಅತಿ ವೇಗವಾಗಿ ವಾಹನ ಚಾಲನೆ ಮಾಡುವವರ ವಿರುದ್ದ ಎಫ್ಐಆರ್ ದಾಖಲಿಸಲು ಸೂಚನೆ ನೀಡಿದ್ದೇನೆ. ವೇಗಮಿತಿ 130 ಕಿ‌.ಮೀ ದಾಟಿದ್ರೆ ಎಫ್ಐಆರ್ ದಾಖಲಿಸಲು ಸೂಚಿಸಿದ್ದೇನೆ. ಇಲ್ಲಿಯವರೆಗೆ ನಿಗದಿ ಪಡಿಸಿದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ಕೇವಲ ದಂಡ ವಿಧಿಸಲಾಗುತ್ತಿತ್ತು. ಆದರೆ ಈಗ ದಂಡದ ಜೊತೆ ಪ್ರಕರಣ ಸಹ ದಾಖಲಿಸಲಾಗುವುದುʼʼ ಎಂದು ತಿಳಿಸಿದ್ದಾರೆ.

ಎಕ್ಸ್‌ಪ್ರೆಸ್‌ ವೇಯಲ್ಲಿ ವೇಗ ನಿಯಂತ್ರಣಕ್ಕೆ ಪೊಲೀಸರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮೊರೆ ಹೋಗಿದ್ದು, ಎಐ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ. ರಾಜ್ಯ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಆದೇಶದ ಮೇರೆಗೆ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (ANPR) ಕ್ಯಾಮೆರಾವನ್ನು ಅಳವಡಿಕೆ ಮಾಡಲಾಗಿದೆ. ವಾಹನದ ನಂಬರ್‌ನಿಂದ ಆರ್‌ಟಿಒ ಸಂಪರ್ಕ ಪಡೆದು ಮೊಬೈಲಿಗೆ ದಂಡ ಪಾವತಿಸುವಂತೆ ನೋಟಿಸ್ ಬರುತ್ತದೆ.

ಮತ್ತೊಂದೆಡೆ ರಸ್ತೆ ಅಪಘಾತಕ್ಕೆ ಕಾರಣವಾಗಿರುವ ಪ್ರಖರ ಬೆಳಕು ಹೊರಹಾಕುವ (ಹೈ ಬೀಮ್ ಲೈಟ್) ಮತ್ತು ಕಣ್ಣು ಕುಕ್ಕುವ ಎಲ್​ಇಡಿ ಲೈಟ್​ ಅಳವಡಿಸಿರುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯಾದ್ಯಂತ ವಿಶೇಷ ಕಾರ್ಯಚರಣೆ ನಡೆಸಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ(ಒನ್​ವೇ), ಫುಟ್​ಬಾತ್​ ಮೇಲೆ ವಾಹನ ಚಾಲನೆ ಬಗ್ಗೆ ವಿಶೇಷ ಕಾರ್ಯಚರಣೆ ಮಾಡಲು ಇತ್ತೀಚೆಗೆ ಪೊಲೀಸರಿಗೆ ಎಡಿಜಿಪಿ ಸೂಚನೆ ನೀಡಿದ್ದಾರೆ.

Tags:    

Similar News