'ದಿಯಾ' ಚಲನಚಿತ್ರ ನಿರ್ಮಾಪಕ ಕೃಷ್ಣ ಚೈತನ್ಯ ವಿರುದ್ಧ ಭೂ ವಿವಾದ: ಎಫ್ಐಆರ್ ದಾಖಲು
ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ, ನಕಲಿ ದಾಖಲೆಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆಂದು ರೈತರೊಬ್ಬರು ನೀಡಿದ ದೂರಿನ ಅನ್ವಯ, ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೃಷ್ಣ ಚೈತನ್ಯ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ.;
ನಿರ್ಮಾಪಕ ಕೃಷ್ಣ ಚೈತನ್ಯ
ದಿಯಾ' ಚಲನಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಿದ್ದ ನಿರ್ಮಾಪಕ ಕೃಷ್ಣ ಚೈತನ್ಯ ಅವರು ಇದೀಗ ಗಂಭೀರ ಭೂ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ, ನಕಲಿ ದಾಖಲೆಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆಂದು ರೈತರೊಬ್ಬರು ನೀಡಿದ ದೂರಿನ ಅನ್ವಯ, ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೃಷ್ಣ ಚೈತನ್ಯ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರೈತ ರಾಮಮೂರ್ತಿ ಅವರು ನೀಡಿದ ದೂರಿನ ಪ್ರಕಾರ, ಆಗಸ್ಟ್ 13ರಂದು ಬೆಳಿಗ್ಗೆ ಸುಮಾರು 10.30ಕ್ಕೆ ಅವರು ಮತ್ತು ಶಶಿಕಲಾ ಎಂಬುವವರು ತಮ್ಮ ಜಮೀನಿನಲ್ಲಿದ್ದಾಗ, ಮೂರು ಕಾರುಗಳಲ್ಲಿ ಬಂದ ನಿರ್ಮಾಪಕ ಕೃಷ್ಣ ಚೈತನ್ಯ, ಸತ್ಯನಾರಾಯಣ ರೆಡ್ಡಿ ಹಾಗೂ ಅವರ ಐದಾರು ಮಂದಿ ಸಹಚರರು ಏಕಾಏಕಿ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಈ ವೇಳೆ, ನಕಲಿ ದಾಖಲೆಗಳನ್ನು ತೋರಿಸಿ, "ಈ ಭೂಮಿ ನಮ್ಮದು, ಕೂಡಲೇ ಖಾಲಿ ಮಾಡಿ" ಎಂದು ಗಲಾಟೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ವಿವರಿಸಲಾಗಿದೆ.
ಏನಿದು ವಿವಾದ?
ವಿವಾದಕ್ಕೆ ಕಾರಣವಾಗಿರುವ ಈ ಜಮೀನು ವರ್ತೂರು ಹೋಬಳಿಯ ಕಸವನಹಳ್ಳಿ ಗ್ರಾಮದ ಸರ್ವೇ ನಂಬರ್ 52ರಲ್ಲಿದ್ದು, 3.35 ಎಕರೆ ವಿಸ್ತೀರ್ಣ ಹೊಂದಿದೆ. ರಾಮಮೂರ್ತಿ ಅವರು ಈ ಜಮೀನನ್ನು 2005ರಲ್ಲಿ ಶಿವರಾಮ ರೆಡ್ಡಿ ಅವರ ಕುಟುಂಬದಿಂದ ಕಾನೂನುಬದ್ಧವಾಗಿ ಖರೀದಿಸಿದ್ದರು. ಇತ್ತೀಚೆಗೆ, ಆಗಸ್ಟ್ 10ರಂದು, ಈ ಜಮೀನಿನಲ್ಲಿ ನರ್ಸರಿ ಮಾಡುವ ಉದ್ದೇಶದಿಂದ ಶಶಿಕಲಾ ಮತ್ತು ಕೋದಂಡಾಚಾರಿ ಅವರಿಗೆ ಭೋಗ್ಯದ ಕರಾರು ಮಾಡಿಕೊಟ್ಟಿದ್ದರು. ಈ ಬೆಳವಣಿಗೆಯಾದ ಕೆಲವೇ ದಿನಗಳಲ್ಲಿ ಕೃಷ್ಣ ಚೈತನ್ಯ ಅವರು ಭೂಮಿಯ ಮಾಲೀಕತ್ವದ ಬಗ್ಗೆ ತಗಾದೆ ತೆಗೆದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ, ಬೆಳ್ಳಂದೂರು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.