ನಕಲಿ ದಾಖಲೆ ಸಲ್ಲಿಕೆ; ಬೆಂಗಳೂರಿನ ಶಾಲಾ ಮುಖ್ಯಸ್ಥರ ವಿರುದ್ಧ ಎಫ್‌ಐಆರ್
ವಕೀಲೆ ಸುಧಾ ಕಟ್ವಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.;
ಸಾಂದರ್ಭಿಕ ಚಿತ್ರ
ಸಾರ್ವಜನಿಕ ಶಿಕ್ಷಣ ಇಲಾಖೆಗೆ ನಕಲಿ ದಾಖಲೆ ಸಲ್ಲಿಸಿದ ಆರೋಪದ ಮೇಲೆ ತ್ಯಾಗರಾಜನಗರದಲ್ಲಿರುವ ಬಿಜಿಎಸ್ ಬ್ಲೂಮ್‌ಫೀಲ್ಡ್ ಶಾಲೆಯ ಮುಖ್ಯಸ್ಥ ಬಿ. ಗುರುಪ್ಪನಾಯ್ಡು ಮತ್ತು ಅವರ ಪತ್ನಿ, ಶಾಲೆಯ ಟ್ರಸ್ಟಿ ಸುನಿತಾ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಕೀಲೆ ಸುಧಾ ಕಟ್ವಾ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ವಿವರ
ಗುರುಪ್ಪನಾಯ್ಡು ಮತ್ತು ಸುನಿತಾ ಅವರು 2000ನೇ ಇಸವಿಯಲ್ಲಿ ಶಾಲೆಯನ್ನು ಆರಂಭಿಸಿದ್ದರು. ಶಿಕ್ಷಕರು ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ, ಕಟ್ಟಡದ ಕಾಮಗಾರಿ ಪೂರ್ಣಗೊಂಡಿರುವ ಕುರಿತು ಮತ್ತು ಕಟ್ಟಡದ ಸ್ವಾಧೀನಾನುಭವ ಪ್ರಮಾಣಪತ್ರ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.
ಆದರೆ, ಗುರುಪ್ಪನಾಯ್ಡು ಮತ್ತು ಸುನಿತಾ ಅವರು ಕಟ್ಟಡ ಕಾಮಗಾರಿ ಮುಕ್ತಾಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೆಂಗೇರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ (ರಾಜರಾಜೇಶ್ವರಿ ನಗರ ವಲಯ) ಅವರು 2021ರ ನವೆಂಬರ್ 3ರಂದು ಪ್ರಮಾಣಪತ್ರ ನೀಡಿದ್ದಾರೆಂದು ಇಲಾಖೆಗೆ ನಕಲಿ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಗುರುಪ್ಪನಾಯ್ಡು ಮತ್ತು ಸುನಿತಾ ಸೇರಿದಂತೆ ಇತರರು ಒಳಸಂಚು ರೂಪಿಸಿ, ಸಾರ್ವಜನಿಕರಿಗೆ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದಾರೆ. ನಕಲಿ ದಾಖಲೆಗಳನ್ನು ನಿಜವಾದ ದಾಖಲೆಗಳೆಂದು ಬಿಂಬಿಸಿ ಸರ್ಕಾರಿ ಕಚೇರಿಗೆ ಸಲ್ಲಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಮನವಿ ಮಾಡಿದ್ದಾರೆ.