ಹಿಂಸೆಗೆ ತಿರುಗಿದ ಪಂಚಮಸಾಲಿಗಳ ಹೋರಾಟ | ಕಲ್ಲು ತೂರಾಟ ನಡೆಸಿದ 70ಮಂದಿ ವಶಕ್ಕೆ
ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಇಂದು ಪಂಚಮಸಾಲಿ ಸಮುದಾಯದ ನಿಂಗಪ್ಪ ಬಣದ, ರಾಮಗೌಡ ಫಕೀರಗೌಡ, ಉಮೇಶ್ ಇಂಗಳೆವಾರ್, ಮಂಜುನಾಥ್ ಬೆಂಡಿಗೇರಿ, ಮಂಜುನಾಥ್ ಗುಮ್ಮಗೋಳ ಹಾಗೂ ಇತರರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.;
ಪ್ರವರ್ಗ 2ಎ ಮೀಸಲಾತಿಗೆ ಒತ್ತಾಯಿಸಿ ಪಂಚಮಸಾಲಿ ಲಿಂಗಾಯತ ಸಮುದಾಯದ ಆಯೋಜಿಸಿದ್ದ ಪ್ರತಿಭಟನೆ ವೇಳೆ ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಐವರ ವಿರುದ್ಧ ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರತಿಭಟನೆ ವೇಳೆ ಕಲ್ಲುತೂರಾಟ ನಡೆಸಿದ್ದರಿಂದ ಪೊಲೀಸ್ ಇನ್ಸ್ಪೆಕ್ಟರ್ ಸೇರಿ 17 ಜನರಿಗೆ ಗಾಯವಾಗಿತ್ತು. ಏಳು ಸರ್ಕಾರಿ ಬಸ್, ಮೂರು ಪೊಲೀಸ್ ವಾಹನಗಳು ಜಖಂಗೊಂಡಿದ್ದವು. ಘಟನೆಗೆ ಸಂಬಂಧಿಸಿ ಹಿರೇಬಾಗೇವಾಡಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದರು.
ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಇಂದು ಪಂಚಮಸಾಲಿ ಸಮುದಾಯದ ನಿಂಗಪ್ಪ ಬಣದ, ರಾಮಗೌಡ ಫಕೀರಗೌಡ, ಉಮೇಶ್ ಇಂಗಳೆವಾರ್, ಮಂಜುನಾಥ್ ಬೆಂಡಿಗೇರಿ, ಮಂಜುನಾಥ್ ಗುಮ್ಮಗೋಳ ಹಾಗೂ ಇತರರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ, ಕೊಲೆಯತ್ನ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ ಆರೋಪದ ಮೇಲೆ ಬಿಎನ್ಎಸ್ ಕಲಂ 115(2), 109(1), 118(2), 117(2), 352, 351(2), 132, 121, 223, 324,189, 189(3), 191(2), 190 ಅಡಿ ಹಿರೇಬಾಗೇವಾಡಿ ಪೊಲೀಸ್ ಇನ್‌ಸ್ಪೆಕ್ಟರ್ ಆರ್.ಆರ್ ಪಾಟೀಲ್ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಟ್ರ್ಯಾಕ್ಟರ್ ರ್ಯಾಲಿ ಮೂಲಕ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಅವಕಾಶ ನೀಡದ ಜಿಲ್ಲಾಡಳಿತದ ವಿರುದ್ಧ ಪಂಚಮಸಾಲಿ ಪೀಠದ ಬವಸಜಯ ಮೃತ್ಯುಂಜಯ ಸ್ವಾಮೀಜಿ ವಾಗ್ದಾಳಿ ನಡೆಸಿದ್ದರು. ಈ ವೇಳೆ ಸ್ವಾಮೀಜಿ ಅವರೊಂದಿಗೆ ಜಿಲ್ಲಾಧಿಕಾರಿ ಮೊಹಮದ್ ರೋಷನ್ ಹಾಗೂ ಪೊಲೀಸ್ ಅಧಿಕಾರಿಗಳು ಮಾತುಕತೆ ನಡೆಸಿದ್ದರು. ಟ್ರ್ಯಾಕ್ಟರ್ ರ್ಯಾಲಿ ಕೈಬಿಟ್ಟು ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿದ್ದರು. ಆದರೆ, ಪಂಚಮಸಾಲಿ ಹೋರಾಟಗಾರರು ನಾವು ಮುಖ್ಯಮಂತ್ರಿಗೆ ನೇರವಾಗಿ ಮನವಿ ನೀಡುತ್ತೇವೆ ಎಂದು ಸುವರ್ಣಸೌಧದತ್ತ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದ್ದರು. ಸುವರ್ಣಸೌಧದ ಬಳಿಕ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ಹೋರಾಟಗಾರರು ಬ್ಯಾರಿಗೇಟ್ ಕಿತ್ತಸೆದು ಒಳನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಪ್ರತಿಭಟನಾಕಾರರು ಇದಕ್ಕೆ ಪ್ರತಿಯಾಗಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಘಟನೆಯಲ್ಲಿ 17 ಮಂದಿ ಪೊಲೀಸರು ಹಾಗೂ ಪ್ರತಿಭಟನಾಕಾರರಿಗೂ ಗಾಯಗಳಾಗಿದ್ದವು.
ಹೈಕೋರ್ಟ್ ಆದೇಶ ಪಾಲಿಸಿದ್ದೇವೆ; ಜಿಲ್ಲಾಡಳಿತ
ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ನಡೆಸಿದವರ ಮೇಲೆ ಲಾಠಿ ಚಾರ್ಜ್ ನಡೆಸಿದ ಘಟನೆ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಂತೆ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ಪ್ರತಿಕ್ರಿಯಿಸಿ, ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರದಲ್ಲಿ ನಾವು ಹೈಕೋರ್ಟ್ ಆದೇಶವನ್ನು ಚಾಚೂ ತಪ್ಪದೇ ಪಾಲಿಸಿದ್ದೇವೆ ಎಂದು ಹೇಳಿದ್ದಾರೆ.
ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರೊಂದಿಗೆ ನಾವು ಸುದೀರ್ಘವಾಗಿ ಚರ್ಚಿಸಿದ್ದೆವು. ಬೇರೆ ಜಾಗದಲ್ಲಿ ಪ್ರತಿಭಟನೆ ಮಾಡುವಂತೆ ಮನವಿ ಮಾಡಿದ್ದೆವು. ಅವರು ಕೊಂಡಸಕೊಪ್ಪದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ ಎಂದಿದ್ದರು. ಹಾಗಾಗಿ, ಅಲ್ಲಿ ಪ್ರತಿಭಟನೆಗೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಿದ್ದೆವು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾರಿಗೂ ತೊಂದರೆ ಆಗದಂತೆ ಪ್ರತಿಭಟನೆ ನಡೆಸಬೇಕು ಎಂಬ ಹೈಕೋರ್ಟ್ ಆದೇಶವಿದೆ. ಅದರಂತೆ ಜಿಲ್ಲಾಡಳಿತ ನಡೆದುಕೊಂಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಪೊಲೀಸ್ 70 ಪ್ರತಿಭಟನಾಕಾರರು
ಕಲ್ಲುತೂರಾಟಕ್ಕೆ ಸಂಬಂಧಿಸಿ ೭೦ ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ ಎಂದು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.
2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನಾ ಸಮಾವೇಶ ನಡೆಸಿದ್ದ ಪಂಚಮಸಾಲಿ ಸಮುದಾಯದವರು ಸ್ಥಳಕ್ಕೆ ಮುಖ್ಯಮಂತ್ರಿ ಬರಬೇಕು ಎಂದು ಆಗ್ರಹಿಸಿದ್ದರು. ಮಧ್ಯಾಹ್ನದ ನಂತರ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಪರಿಸ್ಥಿತಿ ನಿಯಂತ್ರಣ ತಪ್ಪಿತು. ಆಗ ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಬೇಕಾಯಿತು ಎಂದು ಹೇಳಿದ್ದಾರೆ.